Asianet Suvarna News Asianet Suvarna News

110 ಕಡೆ ಈ ವರ್ಷ ಕಾವೇರಿ ನೀರು ಪೂರೈಕೆ ಇಲ್ಲ

110 ಈ ವರ್ಷ ಕಾವೇರಿ ನೀರಿನ ಪೂರೈ ಮಾಡಲಾಗುವುದಿಲ್ಲ. ಮುಂದಿನ ವರ್ಷದಿಂದ ನೀರು ಸರಬರಾಜು ಮಾಡಲಾಗುವುದು ಎಂದು ಜಲ ಮಂಡಳಿ ಅಧ್ಯಕ್ಷ ತುಷಾರ ಗಿರಿನಾಥ್‌ ಹೇಳಿದ್ದಾರೆ.

Cauvery Water Supply  for110 villages under BBMP putt off
Author
Bengaluru, First Published Feb 13, 2019, 10:29 AM IST

ಬೆಂಗಳೂರು :  ಬಿಬಿಎಂಪಿಗೆ ಸೇರ್ಪಡೆಗೊಂಡಿರುವ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಯೋಜನೆ ಕಾಮಗಾರಿ ಬರುವ ಮೇ ವೇಳೆ ಪೂರ್ಣಗೊಂಡರೂ, ಪರೀಕ್ಷೆ ನಡೆಸಲು ಒಂದು ವರ್ಷ ಪರೀಕ್ಷೆ ಬೇಕಾಗುತ್ತದೆ. ಆದ್ದರಿಂದ ಈ ಹಳ್ಳಿಗಳಿಗೆ ಮುಂದಿನ ವರ್ಷದಿಂದ ನೀರು ಸರಬರಾಜು ಮಾಡಲಾಗುವುದು ಎಂದು ಜಲ ಮಂಡಳಿ ಅಧ್ಯಕ್ಷ ತುಷಾರ ಗಿರಿನಾಥ್‌ ತಿಳಿಸಿದರು.

ಮಂಗಳವಾರ ಬೇಸಿಗೆ ಅವಧಿಯಲ್ಲಿ ನಗರ ಕುಡಿಯುವ ನೀರಿನ ಪೂರೈಕೆ ಕುರಿತು ಬಿಬಿಎಂಪಿ ಸದಸ್ಯರೊಂದಿಗೆ ನಡೆಸಿದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, 110 ಹಳ್ಳಿಗೆ ಜಲಮಂಡಳಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಳ್ಳಲು ಇನ್ನೂ ಒಂದು ವರ್ಷ ಬೇಕಾಗುತ್ತದೆ. ಹಾಗಾಗಿ, ಬೇಸಿಗೆ ಅವಧಿಯಲ್ಲಿ ಈ ಹಳ್ಳಿಗಳಿಗೆ ಮಂಡಳಿಯಿಂದ ನೀರು ಪೂರೈಕೆ ಸಾಧ್ಯವಿಲ್ಲ. ಹಾಗಾಗಿ ಬಿಬಿಎಂಪಿಯಿಂದ ಕೊಳವೆ ಬಾವಿ ಹಾಗೂ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕಾಗುತ್ತದೆ. ಬೇಸಿಗೆ ಅವಧಿಯಲ್ಲಿ ತೀರಾ ಸಮಸ್ಯೆ ಉಂಟಾದರೆ, 110 ಹಳ್ಳಿಗಳ ಪೈಕಿ 20 ರಿಂದ 30 ಹಳ್ಳಿಗೆ ನೀರು ಪೂರೈಸಬಹುದು ಎಂದರು.

ಸಾವಿರ ಮಂದಿ ಮಾತ್ರ ಶುಲ್ಕ ಪಾವತಿ:

110 ಹಳ್ಳಿಯ ವ್ಯಾಪ್ತಿಯಲ್ಲಿ ಐದು ಸಾವಿರ ಮಂದಿ ನೀರಿನ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದರೂ ಕೇವಲ ಒಂದು ಸಾವಿರ ಮಂದಿ ಮಾತ್ರ ಶುಲ್ಕ ಪಾವತಿಸಿದ್ದಾರೆ. ಬಿಬಿಎಂಪಿಯ ಹಿಂದಿನ ನಿರ್ಣಯದಂತೆ 60/40 ಮತ್ತು ಅದಕ್ಕಿಂತ ಹೆಚ್ಚಿನ ಅಳತೆಯ ನಿವೇಶನದಲ್ಲಿರುವ ಕಟ್ಟಡಗಳಿಗೆ ನೀರಿನ ಸಂಪರ್ಕ ನೀಡಲು ಮಾತ್ರ ‘ಸ್ವಾಧೀನಾನುಭವ ಪತ್ರ’(ಒಸಿ) ಕೇಳಲಾಗುತ್ತಿದೆ. ಉಳಿದವರಿಗೆ ಸಂಪರ್ಕ ನೀಡಲಾಗುತ್ತಿದೆ. ಅದರಲ್ಲೂ ಸಣ್ಣ ಕಟ್ಟಡಕ್ಕೆ ಸಂಪರ್ಕ ನೀಡಲು ಆದ್ಯತೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

60/40 ನಿವೇಶನದ ಕಟ್ಟಡಕ್ಕೂ ಒಸಿ ವಿನಾಯಿತಿ:

60/40 ನಿವೇಶನದ ಕಟ್ಟಡಗಳಿಗೂ ಒಸಿ ಪಡೆದು ಸಂಪರ್ಕ ನೀಡುವುದಕ್ಕೆ ವಿನಾಯಿತಿ ನೀಡುವಂತೆ ಪಾಲಿಕೆ ಸದಸ್ಯರು ಆಗ್ರಹಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ನಿರ್ಣಯ ಮಾಡಿದರೆ ಅದಕ್ಕೂ ವಿನಾಯಿತಿ ನೀಡಲು ಜಲಮಂಡಳಿ ಸಿದ್ಧವಿದೆ. ಒಸಿ ಇಲ್ಲದ 60/40 ಅಳತೆಗಿಂತ ಹೆಚ್ಚಿನ ಅಳತೆಯ ನಿವೇಶನದಲ್ಲಿರುವ ಕಟ್ಟಡಕ್ಕೆ ಸಂಪರ್ಕ ಪಡೆದವರಿಗೆ ಪ್ರತಿ ತಿಂಗಳ ನೀರಿನ ಬಿಲ್‌ನಲ್ಲಿ ಶೇಕಡ 50ರಷ್ಟುಹೆಚ್ಚಿನ ಶುಲ್ಕ ವಸೂಲಿ ಮಾಡಲಾಗುವುದು ಎಂದು ತಿಳಿಸಿದರು.

ಒಬ್ಬರಿಗೆ 130 ಲೀಟರ್‌ ನೀರು

ಸದ್ಯ ನಗರಕ್ಕೆ 1,400 ಎಂಎಲ್‌ಡಿ ನೀರು ಸರಬರಾಜು ಮಾಡಲಾಗುತ್ತಿದೆ. ಪ್ರತಿಯೊಬ್ಬರಿಗೆ ದಿನಕ್ಕೆ 100 ಲೀಟರ್‌ ಶುದ್ಧ ನೀರು, 25ರಿಂದ 30 ಲೀಟಲ್‌ ಸಂಸ್ಕರಿಸಿದ ನೀರು ಸೇರಿ ಒಟ್ಟು 130ರಿಂದ 135 ಲೀಟರ್‌ ನೀಡುವುದು ನಮ್ಮ ಗುರಿಯಾಗಿದೆ. ನಗರದಲ್ಲಿ ಶೇ.37.5ರಷ್ಟುನೀರಿನ ಸೋರಿಕೆ ಇದೆ. ಅದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿವಿಧ ಯೋಜನೆಯಡಿ ಪ್ರಯತ್ನ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಹಳೆಯ ಕೊಳವೆಗಳನ್ನು ಬದಲಾವಣೆ ಮತ್ತು ರಿಪೇರಿಗೆ .360 ಕೋಟಿ ಬೇಕಾಗಲಿದೆ. ಅದನ್ನು ಪ್ರತಿ ವರ್ಷ .100 ಕೋಟಿಗಳನ್ನು ಹಂತ ಹಂತವಾಗಿ ಜಲಮಂಡಳಿ ಭರಿಸಲಿದ್ದು, ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ ಎಂದರು.

2020 ವೇಳೆಗೆ 1,575 ಎಂಎಲ್‌ಡಿ ತ್ಯಾಜ್ಯ ನೀರು ಸಂಸ್ಕರಣೆ

ಪ್ರತಿದಿನ ಜಲಮಂಡಳಿಯಿಂದ 1,400 ಎಂಎಲ್‌ಡಿ ನೀರು, ಕೊಳವೆ ಬಾವಿಗಳಿಂದ 400 ಎಂಎಲ್‌ಡಿ ನೀರು ನಗರದಲ್ಲಿ ಪೂರೈಕೆ ಆಗುತ್ತಿದೆ. ಇದರಿಂದ ಒಟ್ಟು 1,440 ಎಂಎಲ್‌ಡಿ ತ್ಯಾಜ್ಯ ನೀರು ಉತ್ಪತ್ತಿಯಾಗುತ್ತಿದೆ. 2017ರಲ್ಲಿ 721 ಎಂಎಲ್‌ಡಿ (ಶೇ.50ರಷ್ಟು) ತ್ಯಾಜ್ಯ ನೀರು ಸಂಸ್ಕರಣಾ ಸಾಮರ್ಥ್ಯ ಹೊಂದಲಾಗಿತ್ತು. 2018ರಲ್ಲಿ 336 ಎಂಎಲ್‌ಡಿ ತ್ಯಾಜ್ಯ ನೀರು ಸಂಸ್ಕರಿಸಲು 10 ಘಟಕಗಳನ್ನು (ಎಸ್‌ಟಿಪಿ) ಜೈಕಾ ನೆರವಿನೊಂದಿಗೆ ಸ್ಥಾಪನೆ ಮಾಡಲಾಗುತ್ತಿದೆ. ಹೆಬ್ಬಾಳ, ವೃಷಭಾವತಿ ವ್ಯಾಲಿ, ಕೆ.ಎಂ.ಸಿ ವ್ಯಾಲಿ, ದೊಡ್ಡಬೆಲೆಯಲ್ಲಿ 440 ಎಂಎಲ್‌ಡಿ ಸಾಮರ್ಥ್ಯದ ನಾಲ್ಕು ಎಸ್‌ಟಿಪಿ ಘಟಕ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ. ಅಮೃತ್‌ ಯೋಜನೆ ಅಡಿಯಲ್ಲಿ 75 ಎಂಎಲ್‌ಡಿ ಎಸ್‌ಟಿಪಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 2020ರ ವೇಳೆಗೆ ಒಟ್ಟು 1,575 ಎಂಎಲ್‌ಡಿ ತ್ಯಾಜ್ಯ ನೀರು ಸಂಸ್ಕರಣೆ ಆಗಲಿದೆ ಎಂದು ಗಿರಿನಾಥ್‌ ತಿಳಿಸಿದರು.

ರಾಜಕಾಲುವೆಗೆ ತ್ಯಾಜ್ಯ ನೀರು:

ನಗರದ 914 ಕಡೆ ಕೊಳಚೆ ನೀರು ರಾಜಕಾಲುವೆ ಸೇರುತ್ತಿದ್ದು, ಅದನ್ನು ಸರಿಪಡಿಸುವುದಕ್ಕೆ .76 ಕೋಟಿ ಬೇಕಾಗಲಿದೆ. ಈಗಾಗಲೇ ಕಾಮಗಾರಿಗೆ ಟೆಂಡರ್‌ ಆಹ್ವಾನಿಸಲಾಗಿದ್ದು, ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಮುಂದಿನ ದಿನಗಳಲ್ಲಿ ವಿಕೇಂದ್ರಿಕೃತ ವ್ಯವಸ್ಥೆಯಲ್ಲಿ ಕೆರೆ ಬಳಿ ಎಸ್‌ಟಿಪಿ ನಿರ್ಮಿಸಿ ತ್ಯಾಜ್ಯ ನೀರು ಸಂಸ್ಕರಿಸಿ ಕೆರೆಗೆ ಹರಿಸಲಾಗುವುದು ಎಂದರು.

ಮ್ಯಾನ್‌ ಹೋಲ್‌ಗಳಿಗೂ ಜಿಪಿಎಸ್‌

ನಗರದಲ್ಲಿರುವ 2.40 ಲಕ್ಷ ಮ್ಯಾನ್‌ ಹೋಲ್‌ಗಳಿಗೆ ನಂಬರಿಂಗ್‌ ಮಾಡಿ ಜಿಪಿಎಸ್‌ ಅಳವಡಿಕೆ ಮಾಡಲಾಗಿದೆ. ಒಂದೂವರೆ ವರ್ಷದಲ್ಲಿ ಸ್ವಚ್ಛ ಮಾಡಲು ಜನವರಿಯಿಂದ ಕ್ರಮ ಕೈಗೊಳ್ಳಲಾಗಿದೆ. ಸ್ವಚ್ಛ ಮಾಡುವ ಜಟ್ಟಿಂಗ್‌ ಯಂತ್ರಗಳ ಮೇಲೆ ನಿಗಾ ವಹಿಸಲು ಯಂತ್ರಗಳಿಗೂ ಜಿಪಿಎಸ್‌ ಅಳವಡಿಸಲಾಗಿದೆ. ಪ್ರಸ್ತುತವಾಗಿ ಜಲಮಂಡಳಿ ಬಳಿ 110 ಜಟ್ಟಿಂಗ್‌ ಯಂತ್ರಗಳಿದ್ದು, 36 ಹೊಸ ಯಂತ್ರ ಖರೀದಿಗೆ ಮಾಡಲಾಗುತ್ತಿದೆ. ಕಳೆದ ವರ್ಷ ಬಿಬಿಎಂಪಿಯಿಂದ 110 ಹಳ್ಳಿಗಳಲ್ಲಿ ಕಾರ್ಯ ನಿರ್ವಹಿಸಲು 30 ಜಟ್ಟಿಂಗ್‌ ಯಂತ್ರಗಳನ್ನು ಜಲಮಂಡಳಿಗೆ ಕೊಡಿಸುವುದಾಗಿ ಹೇಳಲಾಗಿತ್ತು. ಆ ಯಂತ್ರಗಳೂ ಬಂದರೆ 176 ಜಟ್ಟಿಂಗ್‌ ಯಂತ್ರಗಳಾಗಲಿವೆ. ಇನ್ನು ಒಳಚರಂಡಿ ಹೂಳು ತೆಗೆಯುವುದಕ್ಕೆ ಹೊರ ಗುತ್ತಿಗೆಯಲ್ಲಿ ನಾಲ್ಕು ಬೃಹತ್‌ ಯಂತ್ರ ಪಡೆಯಲಾಗುತ್ತಿದೆ ಎಂದು ತಿಳಿಸಿದರು.

ಜಲಾಗಾರ ನಿರ್ಮಾಣಕ್ಕೆ ಜಾಗವಿಲ್ಲ:

ನೀರು ಪೂರೈಕೆಗೆ ಸಂಬಂಧಿಸಿದಂತೆ ಜಲಾಗಾರಗಳನ್ನು ನಿರ್ಮಿಸಬೇಕಿದೆ. ಜಲಾಗಾರದಲ್ಲಿ ನೀರು ಶೇಖರಿಸಿ ಅಲ್ಲಿಂದ ಮನೆಗಳಿಗೆ ಕುಡಿಯುವ ನೀರು ಪೂರೈಸಲಾಗುವುದು. ಆದರೆ, ಜಲಾಗಾರ ನಿರ್ಮಾಣಕ್ಕೆ ಸಮರ್ಪಕ ಜಾಗ ಸಿಗುತ್ತಿಲ್ಲ. ಗೊಟ್ಟಿಗೆರೆ, ಬ್ಯಾಟರಾಯನಪುರದಲ್ಲಿ ಜಾಗ ಹುಡುಕಲಾಗುತ್ತಿದೆ ಎಂದು ತಿಳಿಸಿದರು.

ಜಲಮಂಡಳಿಯನ್ನು ಬಿಬಿಎಂಪಿಗೆ ಸೇರಿಸಿ

ಇದಕ್ಕೂ ಮುನ್ನ ಮಾತನಾಡಿದ ವಿಪಕ್ಷ ನಾಯಕ ಪದ್ಮನಾಭರೆಡ್ಡಿ, ಬೆಂಗಳೂರು ಜಲಮಂಡಳಿ ಮಾಡುವ ತಪ್ಪಿಗೆ ಹಸಿರು ನ್ಯಾಯಪೀಠದಿಂದ ಜನಸಾಮಾನ್ಯರವರೆಗೆ ಪಾಲಿಕೆಗೆ ಛೀಮಾರಿ ಹಾಕುವ ಪರಿಸ್ಥಿತಿ ಇದೆ. ಬೆಂಗಳೂರು ನಗರ ಹೊರತು ಪಡಿಸಿ ದೇಶದ ಬಹುತೇಕ ನಗರಗಳಲ್ಲಿ ಸ್ಥಳೀಯ ಸಂಸ್ಥೆಗಳೇ ನೀರು ಪೂರೈಕೆ ಮಾಡುತ್ತಿವೆ. ಕೆಎಂಸಿ ಕಾಯ್ದೆ ಪ್ರಕಾರ ಜಲಮಂಡಳಿಯನ್ನು ಪಾಲಿಕೆ ವ್ಯಾಪ್ತಿಗೆ ಒಳಪಡಿಸಲು ಮೇಯರ್‌ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಆಗ್ರಹಿಸಿದರು.

ತಿಪ್ಪಗೊಂಡನಹಳ್ಳಿ ಸ್ವಚ್ಛಗೊಳಿಸಿ:

ಜಲಮಂಡಳಿಯು ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿನ ನೀರು ವಿಷಕಾರಿಯಾಗುವಂತಾಗಿದೆ. ಎತ್ತಿನಹೊಳೆಯಿಂದ ತರುವ ನೀರನ್ನು ಅಲ್ಲಿಗೆ ತರಬೇಕೆಂದು ಯೋಜಿಸಲಾಗಿದೆ. ಅದಕ್ಕೂ ಮುನ್ನ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಸ್ವಚ್ಛಗೊಳಿಸಿ ಎಂದು ಸದಸ್ಯರು ಆಗ್ರಹಿಸಿದರು.


ಜಲಮಂಡಳಿ ಕಾಮಗಾರಿಗಳ ಬಗ್ಗೆ ಬಿಬಿಎಂಪಿಗೆ ಮಾಹಿತಿಯೇ ಇರುವುದಿಲ್ಲ. ಅಲ್ಲದೆ, ವಾರ್ಡ್‌ಗಳಲ್ಲಿನ ಸಮಸ್ಯೆಗಳ ಬಗ್ಗೆ ಜಲಮಂಡಳಿ ಬಳಿ ದೂರು ಹೇಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜಲಮಂಡಳಿಯಿಂದ ಬಿಬಿಎಂಪಿಗೆ ಒಬ್ಬರನ್ನು ಸಮನ್ವಯಾಧಿಕಾರಿಯನ್ನು ನೇಮಿಸಿ. ಅವರು ಬಿಬಿಎಂಪಿ ಸದಸ್ಯರು ನೀಡುವ ದೂರನ್ನು ಸಂಬಂಧಪಟ್ಟಸಿಬ್ಬಂದಿ, ಅಧಿಕಾರಿಗೆ ವರ್ಗಾಯಿಸಿದರೆ ಸಮಸ್ಯೆ ಶೀಘ್ರದಲ್ಲಿ ನಿವಾರಣೆ ಆಗುತ್ತದೆ.

-ಅಬ್ದುಲ್‌ ವಾಜಿದ್‌, ಆಡಳಿತ ಪಕ್ಷದ ನಾಯಕ

ನೀರು ಪೂರೈಕೆ ಮತ್ತು ಒಳಚರಂಡಿ ನಿರ್ವಹಣೆ ವಿಚಾರವಾಗಿ ಜಲಮಂಡಳಿಯು ಬಿಬಿಎಂಪಿ ಸದಸ್ಯರು ನೀಡುವ ದೂರನ್ನು ಪರಿಗಣಿಸದಿದ್ದರೆ ಎಲ್ಲ 198 ಸದಸ್ಯರು ಜಲಮಂಡಳಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕುತ್ತೇವೆ.

-ಮಂಜುನಾಥರೆಡ್ಡಿ, ಮಾಜಿ ಮೇಯರ್‌.

Follow Us:
Download App:
  • android
  • ios