ಬೆಂಗಳೂರು : ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕರಾಗಿ ಮನೋರಾಯನಪಾಳ್ಯ ವಾರ್ಡ್‌ ಸದಸ್ಯ ಅಬ್ದುಲ್‌ ವಾಜೀದ್‌ ಆಯ್ಕೆ ಮಾಡಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಗುರುವಾರ ಆದೇಶ ಹೊರಡಿಸಲಾಗಿದ್ದು, ಆಡಳಿತ ಪಕ್ಷದ ನಾಯಕರಿಗೆ ಸಿಗುವ ಸವಲತ್ತುಗಳನ್ನು ಒದಗಿಸುವಂತೆ ಮೇಯರ್‌ ಗಂಗಾಬಿಕೆ ಮಲ್ಲಿಕಾರ್ಜುನ್‌ ಸೂಚಿಸಿದ್ದಾರೆ. ವಾಜೀದ್‌ ಆಯ್ಕೆ ಅಧಿಕೃತವಾಗಿ ಘೋಷಣೆ ಆಗುತ್ತಿದ್ದಂತೆ ಕ್ಷೇತ್ರದ ಕಾಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಅಸಮಾಧಾನ :  ಆಡಳಿತ ಪಕ್ಷ ನಾಯಕ ಬದಲಿಸಿ ಕಾಂಗ್ರೆಸ್‌ ಆದೇಶ ಹೊರಡಿಸಿದ ಬೆನ್ನಲ್ಲೇ, ವಿರೋಧ ಪಕ್ಷದ ನಾಯಕರನ್ನು ಬದಲಾಯಿಸದಿರುವುದಕ್ಕೆ ಬಿಜೆಪಿಯ ಕೆಲ ಪಾಲಿಕೆ ಸದಸ್ಯರು ಅಸಮಾಧಾನಗೊಂಡಿದ್ದಾರೆ.

ಕಾಂಗ್ರೆಸ್‌ ಪಕ್ಷವು ಆಡಳಿತ ಪಕ್ಷದ ನಾಯಕರು ಹಾಗೂ ಜೆಡಿಎಸ್‌ ಪಕ್ಷದ ನಾಯಕ ಸ್ಥಾನವನ್ನು ಪ್ರತಿ ವರ್ಷ ಒಬ್ಬೊಬ್ಬರಿಗೆ ನೀಡುವ ಮೂಲಕ ಅರ್ಹರಿಗೆ ಅವಕಾಶ ನೀಡುತ್ತಿದೆ. ಆದರೆ, ಬಿಜೆಪಿಯಲ್ಲಿ 100 ಸದಸ್ಯರಿದ್ದರೂ ಸಮರ್ಪಕವಾಗಿ ಸ್ಥಾನಮಾನ ಹಂಚಿಕೆಯಾಗುತ್ತಿಲ್ಲ. 

ಬಿಜೆಪಿಯಲ್ಲಿ ಕಳೆದ ಮೂರು ವರ್ಷಗಳಿಂದಲೂ ಒಬ್ಬರೇ ವಿರೋಧ ಪಕ್ಷ ನಾಯಕರಾಗಿದ್ದಾರೆ ಎಂದು ವಿರೋಧ ಪಕ್ಷ ನಾಯಕ ಸ್ಥಾನದ ಅಕಾಂಕ್ಷಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.