ಬೆಂಗಳೂರು :  ಉದ್ಯಾನ ನಗರಿ ಬೆಂಗಳೂರಿನಲ್ಲಿ ಸ್ವಂತ ಸೂರು ಹೊಂದುವ ಜೀವಮಾನದ ಕನಸು ಸಾಕಾರ ಮಾಡಿಕೊಳ್ಳಲು ನೂತನ ಫ್ಲ್ಯಾಟ್‌ ಖರೀದಿಗೆ ಮುಂದಾಗಿದ್ದೀರಾ... ಹಾಗಾದರೆ ಜೋಕೆ!

- ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 8,000ಕ್ಕೂ ಹೆಚ್ಚು ಬಹುಮಹಡಿ ವಸತಿ ಕಟ್ಟಡ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಬೆಸ್ಕಾಂನಿಂದ ವಿದ್ಯುತ್‌ ಸಂಪರ್ಕ ಸಿಗುವುದಿಲ್ಲ. ಹೀಗಾಗಿ ಪೂರ್ವಾಪರ ವಿಚಾರಿಸದೆ ಫ್ಲ್ಯಾಟ್‌ ಖರೀದಿಸಿದರೆ ಜೀವನ ಪರ್ಯಂತ ಕತ್ತಲೆ ಮನೆಯಲ್ಲೇ ಕಾಲ ಕಳೆಯಬೇಕಾಗಬಹುದು. ಇಲ್ಲದಿದ್ದರೆ ಕೂಡಿಟ್ಟಹಣ ಕಳೆದುಕೊಂಡು ಇಡೀ ಜೀವನ ಕತ್ತಲು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು.

ಹೌದು, ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣಾ ಆಯೋಗವು ಕೆಇಆರ್‌ಸಿಯ 6 ಹಾಗೂ 7ನೇ ತಿದ್ದುಪಡಿ ಮೂಲಕ ಬಿಬಿಎಂಪಿಯಿಂದ ‘ಸ್ವಾಧೀನಾನುಭವ ಪತ್ರ’ (ಒಸಿ) ಪಡೆಯದ 5,380 ಚದರಡಿ ವಿಸ್ತೀರ್ಣಕ್ಕಿಂತ (500 ಚ.ಮೀ.) ಹೆಚ್ಚು ಪ್ರದೇಶದ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕ ನೀಡಬಾರದು ಎಂದು ಆದೇಶಿಸಿದೆ. ಹೀಗಾಗಿ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದರೂ ಬಿಬಿಎಂಪಿ ನಕ್ಷೆ ಮಂಜೂರಾತಿ ಅನ್ವಯ ನಿರ್ಮಾಣ ಮಾಡದಿದ್ದರೆ ಬಿಬಿಎಂಪಿ ಸ್ವಾಧೀನಾನುಭವ ಪತ್ರ ನೀಡುವುದಿಲ್ಲ. ಸ್ವಾಧೀನಾನುಭವ ಪತ್ರ ಪಡೆಯದಿದ್ದರೆ ಬೆಸ್ಕಾಂ ವಿದ್ಯುತ್‌ ಸಂಪರ್ಕ ದೊರೆಯುವುದಿಲ್ಲ.

ಅಷ್ಟೇ ಅಲ್ಲದೆ, ಈ ನಿಯಮದಡಿ 5,380 ಚದರಡಿ ಹಾಗೂ ಅದಕ್ಕಿಂತ ಹೆಚ್ಚು ವಿಸ್ತೀರ್ಣದ ಕಟ್ಟಡಕ್ಕೆ 25 ಕೆಡಬ್ಲ್ಯೂ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್‌ ಅಳವಡಿಕೆ ಹಾಗೂ ಅದಕ್ಕಾಗಿ 15 ಚದರಡಿ ಖಾಲಿ ಜಾಗ ಒದಗಿಸುವುದು ಕಡ್ಡಾಯಗೊಳಿಸಲಾಗಿದೆ.

8 ಸಾವಿರ ಕಟ್ಟಡಗಳಿಗೆ ವಿದ್ಯುತ್‌ ಇಲ್ಲ:

ಕಟ್ಟಡ ನಿರ್ಮಾಣದಾರರ ಅತಿಯಾಸೆ ಹಾಗೂ ಅವರ ಅಕ್ರಮ ನಿರ್ಮಾಣಕ್ಕೆ ಹಣದ ಆಮಿಷಕ್ಕೊಳಗಾಗಿ ಅನುವು ಮಾಡಿಕೊಡುವ ಕೆಲ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದ ಫಲವಾಗಿ ಇಂತಹ 8 ಸಾವಿರ ಬಹುಮಹಡಿ ಕಟ್ಟಡಗಳು ಬೆಂಗಳೂರಿನ ವ್ಯಾಪ್ತಿಯಲ್ಲಿ ಈಗಾಗಲೇ ತಲೆ ಎತ್ತಿವೆ. ಈವರೆಗೂ ಸ್ವಾಧೀನಾನುಭವ ಪತ್ರ ಇಲ್ಲದಿದ್ದರೂ ವಿದ್ಯುತ್‌ ಸಂಪರ್ಕ ನೀಡಲಾಗುತ್ತಿತ್ತು. ಹೀಗಾಗಿ ನಕ್ಷೆ ಮಂಜೂರಾತಿ ಪ್ರಕಾರ ಕಟ್ಟಡ ನಿರ್ಮಾಣ ಮಾಡದೆ ಅನುಮತಿ ನೀಡಿರುವುದಕ್ಕಿಂತ ಹೆಚ್ಚು ಮಹಡಿಗಳ ಕಟ್ಟಡ ನಿರ್ಮಾಣ ಮಾಡಲಾಗಿದೆ. ನೂತನ ನಿಯಮದಿಂದಾಗಿ ಇಂತಹ 8 ಸಾವಿರಕ್ಕೂ ಹೆಚ್ಚು ಕಟ್ಟಡಗಳು ವಿದ್ಯುತ್‌ ಸಂಪರ್ಕ ಪಡೆಯಲು ಅರ್ಹತೆ ಇಲ್ಲದಂತಾಗಿದೆ.

ಫ್ಲ್ಯಾಟ್‌ ಖರೀದಿಸಿದರೆ ಬದುಕು ಕತ್ತಲೆ:

ಇಂತಹ 8 ಸಾವಿರಕ್ಕೂ ಹೆಚ್ಚು ಕಟ್ಟಡಗಳಲ್ಲಿ ಬಹುತೇಕ ವಸತಿ ಸಮುಚ್ಛಯಗಳೇ ಇವೆ. ಇವುಗಳಲ್ಲಿ ಫ್ಲ್ಯಾಟ್‌ ಖರೀದಿಸಿದವರಿಗೆ ವಿದ್ಯುತ್‌ ಸಂಪರ್ಕ ಇಲ್ಲದೆ ಸಮಸ್ಯೆಯಾಗುತ್ತಿದೆ. ಬ್ಯಾಂಕ್‌ ಸಾಲ ಮಾಡಿ ಫ್ಲ್ಯಾಟ್‌ ಖರೀದಿಸಿದರೆ ವಿದ್ಯುತ್‌ ಸಂಪರ್ಕವಿಲ್ಲದೆ ತಾವೂ ವಾಸ ಮಾಡಲಾಗದ, ಬಾಡಿಗೆಗೆ ನೀಡಲಾಗದ ಪರಿಸ್ಥಿತಿ ಬಂದಿದೆ. ಬ್ಯಾಂಕ್‌ ಸಾಲ ಪಡೆದು ಫ್ಲ್ಯಾಟ್‌ ಖರೀದಿಸಿದ್ದು, ಇಎಂಐ ಪಾವತಿ ಮಾಡಬೇಕಾಗುತ್ತಿದೆ. ಇಲ್ಲಿ ನೋಡಿದರೆ ವಿದ್ಯುತ್‌ ಸಂಪರ್ಕ ದೊರೆಯುತ್ತಿಲ್ಲ. ಬಿಬಿಎಂಪಿ ಹಾಗೂ ಕಟ್ಟಡ ನಿರ್ಮಾಣದಾರರ ಹಣದಾಸೆಗೆ ನಾವು ಬಲಿಯಾದಂತಾಗಿದೆ ಎಂದು ಫ್ಲ್ಯಾಟ್‌ ಖರೀದಿಸಿರುವ ಬ್ಯಾಟರಾಯನಪುರ ನಿವಾಸ ಸಂತೋಷ್‌ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬಿಬಿಎಂಪಿ ನಿರ್ಲಕ್ಷ್ಯದ ಕೊಡುಗೆ:

ಬಿಬಿಎಂಪಿಯು ನಕ್ಷೆ ಮಂಜೂರಾತಿ ನೀಡಿದ ಬಳಿಕ ನಿಯಮದ ಪ್ರಕಾರ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆÜಯೇ ಎಂಬುದನ್ನು ಪರಿಶೀಲಿಸಬೇಕು. ಒಂದು ವೇಳೆ ನಿಯಮ ಬಾಹಿರವಾಗಿ ಕಟ್ಟುತ್ತಿದ್ದರೆ ನೋಟಿಸ್‌ ನೀಡಿ ಕಟ್ಟಡ ನಿರ್ಮಾಣ ಸ್ಥಗಿತಗೊಳಿಸಬೇಕು. ಆದರೆ, ಹಣದಾಸೆಗೆ ನಕ್ಷೆ ಮಂಜೂರಾತಿ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಲು ಅನುವು ಮಾಡಿಕೊಡುತ್ತಿದ್ದಾರೆ. ಇದರಿಂದ ಸಾರ್ವಜನಿಕರು ನರಳುವಂತಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಇದೀಗ ಕಟ್ಟಡ ನಿರ್ಮಾಣದ ವೇಳೆ ನಿರ್ಮಾಣದ ಕೆಲಸಗಳ ಸಲುವಾಗಿ ದುಪ್ಪಟ್ಟು ಶುಲ್ಕ ಪಾವತಿಸಿ ಪಡೆದಿರುವ ತಾತ್ಕಾಲಿಕ ಸಂಪರ್ಕವನ್ನೇ ಬಳಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇನ್ನು ಕೆಇಆರ್‌ಸಿಯು 25 ಕೆಡಬ್ಲ್ಯೂ ಸಾಮರ್ಥ್ಯದ ಪರಿವರ್ತಕ ಅಳವಡಿಕೆಗೆ ನಿಯಮ ರೂಪಿಸಿದರೆ ಬೆಸ್ಕಾಂ ಅಧಿಕಾರಿಗಳು 7.5 ಕೆಡಬ್ಲ್ಯೂ ಸಾಮರ್ಥ್ಯದ ಪರಿವರ್ತಕ ಅಳವಡಿಕೆಗೂ ಸ್ವಾಧೀನಾನುಭವ ಪತ್ರ ಕಡ್ಡಾಯ ಎಂದು ಸಾರ್ವಜನಿಕರನ್ನು ಹೆದರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ನಕ್ಷೆ ಉಲ್ಲಂಘಿಸಿದ್ದರೆ ‘ಒಸಿ’ ಕೊಡಲ್ಲ

ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿದೆ. ಸುಮಾರು 8 ಸಾವಿರ ಬಹುಮಹಡಿ ಕಟ್ಟಡಗಳು ‘ಒಸಿ’ ಪಡೆಯದೆ ವಿದ್ಯುತ್‌ ಸಂಪರ್ಕದಿಂದ ವಂಚಿತವಾಗಿವೆ. ಅನಧಿಕೃತ ಕಟ್ಟಡಗಳಿಗೆ ಕಡಿವಾಣ ಹಾಕುವ ಸಲುವಾಗಿ ‘ಒಸಿ’ ಇಲ್ಲದೆ ವಿದ್ಯುತ್‌ ಸಂಪರ್ಕ, ನೀರಿನ ಸಂಪರ್ಕ ನೀಡಬೇಡಿ ಎಂದು ನಾವೇ ಮನವಿ ಮಾಡಿದ್ದೆವು. ಇದರಂತೆ ಕೆಇಆರ್‌ಸಿ ಇತ್ತೀಚೆಗೆ ನಿಯಮ ತಿದ್ದುಪಡಿ ಮಾಡಿದ್ದು, 8 ಸಾವಿರ ಬಹುಮಹಡಿ ಕಟ್ಟಡ ವಿದ್ಯುತ್‌ ಸಂಪರ್ಕದಿಂದ ವಂಚಿತವಾಗಿವೆ. ಈ ಕಟ್ಟಡಗಳು ಒಸಿಗೆ ಮನವಿ ಮಾಡಿದರೆ ಪರಿಶೀಲಿಸಿ ಕ್ರಮಬದ್ಧವಾಗಿ ಕಟ್ಟಡ ಕಟ್ಟಿದ್ದರೆ ‘ಒಸಿ’ ನೀಡುತ್ತೇವೆ, ಉಲ್ಲಂಘನೆ ಮಾಡಿದ್ದರೆ ನೀಡುವುದಿಲ್ಲ.

-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ.

ಕೆಇಆರ್‌ಸಿ ನೂತನ ನಿಯಮದ ಪ್ರಕಾರ 500 ಚ.ಮೀ. ವಿಸ್ತೀರ್ಣದ ಬಹುಮಹಡಿ ಕಟ್ಟಡಗಳಿಗೆ ‘ಸ್ವಾಧೀನಾನುಭವ ಪತ್ರ’ ಇಲ್ಲದಿದ್ದರೆ ವಿದ್ಯುತ್‌ ಸಂಪರ್ಕ ನೀಡುವಂತಿಲ್ಲ. ಖಚಿತವಾಗಿ ಇಂತಹ ಎಷ್ಟುಕಟ್ಟಡಗಳಿವೆ ಎಂಬ ಬಗ್ಗೆ ವಿಭಾಗವಾರು ಮಾಹಿತಿ ಕಲೆ ಹಾಕಲಾಗುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಸುಮಾರು 8 ಸಾವಿರ ಕಟ್ಟಡಗಳು ಇರಬಹುದು ಅಂದಾಜಿಸಿದ್ದು, ಕೆಲವು ಸಂಘ ಸಂಸ್ಥೆಗಳನ್ನು ಈ ನಿಯಮದಿಂದ ತಮಗೆ ತೊಂದರೆ ಆಗುತ್ತಿದೆ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ.

-ಸಿ.ಶಿಖಾ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು.


ವರದಿ :  ಶ್ರೀಕಾಂತ್‌ ಎನ್‌.ಗೌಡಸಂದ್ರ