ಬೆಂಗಳೂರು :  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ 12 ಸ್ಥಾಯಿ ಸಮಿತಿಗಳಿಗೆ ಜ.17ರ ಗುರುವಾರ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಆದರೆ, ಚುನಾವಣೆಯನ್ನು ಕೆಂಪೇಗೌಡ ಪೌರ ಸಭಾಂಗಣದ ಬದಲು ಪಕ್ಕದ ಕೊಠಡಿಯೊಂದರಲ್ಲಿ ನಡೆಸಲು ನಿರ್ಧರಿಸಿರುವುದು ಪ್ರತಿಪಕ್ಷದ ವಿರೋಧಕ್ಕೆ ಕಾರಣವಾಗಿದೆ.

ಕಳೆದ ಡಿಸೆಂಬರ್‌ನಲ್ಲಿ ಕೆಂಪೇಗೌಡ ಪೌರ ಸಭಾಂಗಣದಲ್ಲಿ ನಡೆಯಬೇಕಿದ್ದ ಚುನಾವಣೆ ಆಡಳಿತ, ಪ್ರತಿಪಕ್ಷಗಳ ಹೈಡ್ರಾಮಾದಿಂದ ಮುಂದೂಡಲ್ಪಟ್ಟಿತ್ತು. ಮತ್ತೆ ಅಂತಹದ್ದೇ ಸ್ಥಿತಿ ಎದುರಾಗುವ ಆತಂಕದಿಂದ ಈ ಬಾರಿ ಪೌರ ಸಭಾಂಗಣದ ಬದಲು ಪಕ್ಕದ ಕೊಠಡಿಯಲ್ಲಿ ಪ್ರತಿ ಸ್ಥಾಯಿ ಸಮಿತಿಗೂ ಪ್ರತ್ಯೇಕ ಚುನಾವಣೆ ನಡೆಸಿ ಅಧ್ಯಕ್ಷರ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.

ಜ.17ರ ಬೆಳಗ್ಗೆ 10.30ಕ್ಕೆ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅಧ್ಯಕ್ಷತೆಯಲ್ಲಿ ಚುನಾವಣೆ ಆರಂಭವಾಗಲಿದೆ. ಪ್ರತಿ ಸಮಿತಿ ಚುನಾವಣೆಗೆ ಆ ಸಮಿತಿಯ ಸದಸ್ಯರು, ಆಡಳಿತ ಮತ್ತು ಪ್ರತಿಪಕ್ಷ ನಾಯಕರು ಉಪಸ್ಥಿತರಿರಲಿದ್ದಾರೆ. ಮಾಧ್ಯಮದವರಿಗೂ ಚುನಾವಣಾ ಕೊಠಡಿಗೆ ಪ್ರವೇಶವಿದೆ. ಪಾರದರ್ಶಕವಾಗಿಯೇ ಚುನಾವಣೆ ನಡೆಯಲಿದೆ, ಯಾವುದೇ ಮುಚ್ಚುಮರೆಯಲ್ಲಿ ಚುನಾವಣೆ ನಡೆಸುವ ಅಗತ್ಯವಿಲ್ಲ ಎಂದು ಮೇಯರ್‌ ಹೇಳಿದ್ದಾರೆ.

ಈ ಹಿಂದೆ ಮೇಯರ್‌ ಕಚೇರಿಯಲ್ಲಿ, ಆಯಾ ಸ್ಥಾಯಿ ಸಮಿತಿ ಕಚೇರಿಗಳಲ್ಲಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಿರುವ ಉದಾಹರಣೆಗಳು ಬಿಬಿಎಂಪಿಯಲ್ಲಿವೆ. ಚುನಾವಣೆಯನ್ನು ಪೌರ ಸಭಾಂಗಣದಲ್ಲೇ ನಡೆಸಬೇಕೆಂಬ ಕಡ್ಡಾಯ ನಿಯಮವೇನೂ ಇಲ್ಲ. ಅದು ಮೇಯರ್‌ ವಿವೇಚನೆಗೆ ಬಿಟ್ಟಿದ್ದು, ಎಲ್ಲ ಸದಸ್ಯರಿಗೂ ಚುನಾವಣಾ ಕೊಠಡಿ ಪ್ರವೇಶಕ್ಕೆ ಅವಕಾಶ ನೀಡಿದರೆ ಸ್ಥಳಾವಕಾಶದ ಕೊರತೆ ಆಗಬಹುದು. ಹಾಗಾಗಿ ಪ್ರತೀ ಸ್ಥಾಯಿ ಸಮಿತಿ ಚುನಾವಣೆಯನ್ನು ಪ್ರತ್ಯೇಕವಾಗಿ ನಡೆಸಲಾಗುವುದು, ಆ ವೇಳೆ ಸಂಬಂಧಿಸಿದ ಸಮಿತಿ ಸದಸ್ಯರಷ್ಟೇ ಪಾಲ್ಗೊಳ್ಳಬಹುದು ಎಂದು ತಮ್ಮ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ಸ್ಪಷ್ಟಪಡಿಸಿದರು.

ಪ್ರತಿಪಕ್ಷ ವಿರೋಧ: ಪ್ರತಿಪಕ್ಷ ಬಿಜೆಪಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಸ್ಥಾಯಿ ಸಮಿತಿ ಸದಸ್ಯರನ್ನು ಹೊರತುಪಡಿಸಿ ಉಳಿದ ಯಾವುದೇ ಸದಸ್ಯರಿಗೆ ಚುನಾವಣಾ ಕೊಠಡಿಗೆ ಪ್ರವೇಶ ನೀಡದಿರುವುದು ಕೆಎಂಸಿ ಕಾಯ್ದೆಗೆ ವಿರುದ್ಧವಾಗಿದೆ. ಇದರ ವಿರುದ್ಧ ಸರ್ಕಾಕ್ಕೆ ಈಗಾಗಲೇ ಪತ್ರ ಬರೆದಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿ ಆಯುಕ್ತರಿಗೆ ಕೆಎಂಸಿ ಕಾಯ್ದೆ ನಿಯಮಗಳ ಅನುಸಾರ ಚುನಾವಣೆ ನಡೆಸಲು ಕ್ರಮ ವಹಿಸುವಂತೆ ನಿರ್ದೇಶನ ನೀಡಿದೆ. ಇದರ ಹೊರತಾಗಿಯೂ ನಿಯಮ ಮೀರಿ ಚುನಾವಣೆ ನಡೆಸಿದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಪಾಲಿಕೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಎಚ್ಚರಿಸಿದ್ದಾರೆ.

ಅತೃಪ್ತರ ಮನವೊಲಿಕೆ: ಈ ಮಧ್ಯೆ, ತಮಗೆ ಸ್ಥಾಯಿ ಸಮಿತಿ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಸೇರಿ ಕೆಲ ಸಮಿತಿಗಳು ಆಡಳಿತ ಪಕ್ಷದ ಕೈತಪ್ಪುವಂತೆ ಮಾಡಲು ಮುಂದಾಗಿದ್ದ ಜೆಡಿಎಸ್‌ ಸದಸ್ಯರಾದ ಮಂಜುಳಾ ನಾರಾಯಣಸ್ವಾಮಿ ಮತ್ತು ದೇವದಾಸ್‌ ಅವರನ್ನು ಪಕ್ಷದ ವರಿಷ್ಠರು ಮನವೊಲಿಸಿದ್ದಾರೆ. ಗುರುವಾರ ನಡೆಯುವ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸದೆ ಮೈತ್ರಿ ಪಕ್ಷಗಳು ಅಂತಿಮಗೊಳಿಸಿರುವ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ನಿರ್ದೇಶನ ನೀಡಿದ್ದಾರೆ. ಆದರೆ, ಚುನಾವಣೆ ವೇಳೆ ಈ ಇಬ್ಬರು ಸದಸ್ಯರು ಯಾವ ನಡೆ ಕೈಗೊಳ್ಳುತ್ತಾರೆ ಎಂಬುದು ಇನ್ನೂ ನಿಗೂಡವಾಗಿದೆ.