ಬೆಂಗಳೂರು :  ನಿರಾಶ್ರಿತ ಲೈಂಗಿಕ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿಗೆ ವಸತಿ ಸೌಕರ್ಯ ಹಾಗೂ ವೃತ್ತಿಪರ ತರಬೇತಿ ಕಲ್ಪಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಾಜ್ಯದಲ್ಲೇ ಮೊದಲ ಬಾರಿಗೆ ಆಶ್ರಯ ಕೇಂದ್ರ ಸ್ಥಾಪಿಸಲು ಮುಂದಾಗಿದೆ. 

ರಕ್ತ ಸಂಬಂಧಿಗಳು, ಬಂಧುಮಿತ್ರರು, ಸ್ನೇಹಿತರು ಹಾಗೂ ಹುಟ್ಟಿ ಬೆಳೆದ ಸಮಾಜದಿಂದ ತಿರಸ್ಕಾರಕ್ಕೆ ಒಳಗಾಗಿ ಸಮುದಾಯದ ಮೂರನೇ ವರ್ಗದ ಪ್ರಜೆಗಳಾಗಿ ಬದುಕು ಸಾಗಿಸುತ್ತಿರುವ ಲೈಂಗಿಕ ಅಲ್ಪಸಂಖ್ಯಾತರಿಗೆ ಬಾಡಿಗೆ ಮನೆ ನೀಡುವುದಿಲ್ಲ. ಒಂದು ವೇಳೆ ಬಾಡಿಗೆ ನೀಡಿದರೂ ಹೆಚ್ಚು ದಿನ ವಾಸವಿರುವುದಕ್ಕೆ ಅವಕಾಶ ನೀಡುವುದಿಲ್ಲ.

ಹೀಗಾಗಿ ಬಿಬಿಎಂಪಿ ನಿರಾಶ್ರಿತ ಲೈಂಗಿಕ ಅಲ್ಪಸಂಖ್ಯಾತರಿಗೆ ಆಶ್ರಯ ನೀಡುವುದಕ್ಕೆ ಯೋಜನೆ ರೂಪಿಸಿದೆ. ಮೆಜೆಸ್ಟಿಕ್‌ನ ಉಪ್ಪಾರಪೇಟೆ ಪೊಲೀಸ್ ಠಾಣಿ ಮುಂಭಾಗದಲ್ಲಿರುವ ಬಿಬಿಎಂಪಿ ಕಟ್ಟಡದಲ್ಲಿ ಆಶ್ರಯ ನೀಡಲು ಸಿದ್ಧತೆ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಒಟ್ಟು ೧೦೦ ಮಂದಿ ಲೈಂಗಿಕ ಅಲ್ಪ ಸಂಖ್ಯಾತರು ಉಳಿಯಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ಕೇಂದ್ರದಲ್ಲಿ ಕುಡಿಯುವ ನೀರು, ವ್ಯವಸ್ಥಿತ ಶೌಚಾಲಯ, ಮಲಗುವುದಕ್ಕೆ ಮಂಚ, ಹೊದಿಕೆ, ದಿಂಬು ಹಾಗೂ ರಾತ್ರಿ ವೇಳೆ ಊಟ ನೀಡುವುದಕ್ಕೆ ತೀರ್ಮಾನಿಸಲಾಗಿದೆ. 

ಲೈಂಗಿಕ ಅಲ್ಪಸಂಖ್ಯಾತ ನಿರಾಶ್ರಿತ ಕೇಂದ್ರ ಸ್ಥಾಪನೆ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಲೈಂಗಿಕ ಅಲ್ಪಸಂಖ್ಯಾತ ಸ್ವಯಂ ಸೇವಾ ಸಂಘಟನೆ(ಎನ್‌ಜಿಒ)ಗಳೊಂದಿಗೆ ಚರ್ಚೆ ಮಾಡಿದ್ದು, ಶೀಘ್ರದಲ್ಲಿ ನಿರಾಶ್ರಿತ ಕೇಂದ್ರ ಆರಂಭಿಸುವುದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಲೈಂಗಿಕ ಅಲ್ಪಸಂಖ್ಯಾತರನ್ನು ಸಮೀಕ್ಷೆ ಮಾಡಿ ಗುರುತಿಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ, ಲೈಂಗಿಕ ಅಲ್ಪಸಂಖ್ಯಾತ ಎನ್‌ಜಿಒಗಳೊಂದಿಗೆ ಚರ್ಚೆ ಮಾಡಿದ್ದು, ಎನ್‌ಜಿಒಗಳಲ್ಲಿ ನೋಂದಯಿಸಿರುವ ನಿರಾಶ್ರಿತರಿಗೆ ಮೊದಲು ಆಶ್ರಯ ನೀಡುವುದಕ್ಕೆ ತೀರ್ಮಾನಿಸಲಾಗಿದೆ.

ಆಶ್ರಯದ ಜೊತೆಗೆ ತರಬೇತಿ ಬಿಬಿಎಂಪಿ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಉಚಿತ ಲಘು ವಾಹನ ಚಾಲನೆ ತರಬೇತಿ, ಸ್ವಯಂ ಉದ್ಯೋಗಕ್ಕಾಗಿ ತಳ್ಳುವ ಗಾಡಿ, ಶಿಕ್ಷಣ ಮತ್ತು ಸ್ವಾವಲಂಬನೆಗೆ ಆರ್ಥಿಕ ಸಹಾಯ ಸೇರಿದಂತೆ ಇನ್ನಿತರ ಕಲ್ಯಾಣ ಕಾರ್ಯಕ್ರಮ ಕೈಗೊಳ್ಳುವುದಕ್ಕೆ 1 ಕೋಟಿ ಮೀಸಲಿಡಲಾಗಿತ್ತು. ಈ ಹಣ ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ನಿರಾಶ್ರಿತ ಕೇಂದ್ರದಲ್ಲಿ ಮೇಣದ ಬತ್ತಿ, ಬೇಕರಿ ಉತ್ಪನ್ನಗಳ ತಯಾರಿಕೆ, ಕಂಪ್ಯೂಟರ್ ಬಳಕೆ ಸೇರಿದಂತೆ ಇನ್ನಿತರ ವೃತ್ತಿ ತರಬೇತಿ ನೀಡುವುದಕ್ಕೆ ತೀರ್ಮಾನಿಸಲಾಗಿದೆ. ಜೊತೆಗೆ ತರಬೇತಿಯ ಬಳಿಕ ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸುವುದಕ್ಕೂ ಯೋಜನೆ ರೂಪಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಎಎಸ್, ಐಎಎಸ್ ತರಬೇತಿ: ಲೈಂಗಿಕ ಅಲ್ಪಸಂಖ್ಯಾತರಲ್ಲಿ ಅನೇಕ ಮಂದಿ ಉನ್ನತ ವ್ಯಾಸಂಗ ಮಾಡಿದವರಿದ್ದಾರೆ. ಅವರಲ್ಲಿ ಕೆಎಸ್‌ಎಸ್, ಐಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವುದಕ್ಕೆ ಆಸಕ್ತಿ ಹೊಂದಿದ್ದರೆ, ಅಂತವರಿಗೆ ಸೂಕ್ತ ತರಬೇತಿ ಕೊಡಿಸುವುದಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಫ್ಲೈಓವರ್, ಅಂಡರ್ ಪಾಸ್ ಸೇರಿದಂತೆ ಇನ್ನಿತರ ಪ್ರದೇಶದಲ್ಲಿ ಅನೇಕ ಲೈಂಗಿಕ ಅಲ್ಪಸಂಖ್ಯಾತರು ರಾತ್ರಿ ಹೊತ್ತು ಕಳೆಯುತ್ತಿದ್ದಾರೆ. ಅವರಿಗೆ ಈ ನಿರಾಶ್ರಿತ ಕೇಂದ್ರ ನೆರವಾಗಲಿದೆ. 

ಅಕೈ ಪದ್ಮಶಾಲಿ ಲೈಂಗಿಕ ಅಲ್ಪಸಂಖ್ಯಾತ ಹೋರಾಟಗಾ

ವರದಿ :  ವಿಶ್ವನಾಥ ಮಲೇಬೆನ್ನೂರು