ಬೆಂಗಳೂರು :  ಅಪಾರ್ಟ್‌ಮೆಂಟ್‌, ಕಾಂಪ್ಲೆಕ್ಸ್‌, ಹೋಟೆಲ್‌ಗಳು, ಕಲ್ಯಾಣ ಮಂಟಪ ಸೇರಿದಂತೆ ದೊಟ್ಟ ಪ್ರಮಾಣದ ತ್ಯಾಜ್ಯ ಉತ್ಪಾದಕರನ್ನು ಹೊರಗಿಟ್ಟು, ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿಗೆ ವಾರ್ಡ್‌ವಾರು ಟೆಂಡರ್‌ ಆಹ್ವಾನಿಸಿರುವುದಕ್ಕೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತ​ವಾ​ಗಿದೆ.

ಇದೊಂದು ಅವೈಜ್ಞಾನಿಕ ನಿರ್ಧಾರ. ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರಿಂದ ತ್ಯಾಜ್ಯ ಕರ ವಸೂಲಿ ಮಾಡುವ ಬಿಬಿಎಂಪಿ, ನಿಮ್ಮಿಂದ ಉತ್ಪಾದಿಸುವ ತ್ಯಾಜ್ಯವನ್ನು ನೀವೇ ವಿಲೇವಾರಿ ಮಾಡಿಕೊಳ್ಳಿ ಎನ್ನುವುದು ಎಷ್ಟುಸರಿ ಎಂಬುದು ಅಪಾರ್ಟ್‌ಮೆಂಟ್‌ ನಿವಾಸಿಗಳು, ಹೋಟೆಲ್‌, ಕಲ್ಯಾಣ ಮಂಟಪಗಳ ಮಾಲಿಕರ ಸಂಘದ ಪ್ರತಿನಿಧಿಗಳ ಪ್ರಶ್ನೆ. ಅಲ್ಲದೆ, ಈ ಟೆಂಡರ್‌ನಲ್ಲಿ ಬಿಡ್‌ ಮಾಡಬೇಕಿರುವ ಗುತ್ತಿಗೆದಾರರಿಂದಲೂ ಕೂಡ ಬಿಬಿಎಂಪಿಯ ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ನಗರದಲ್ಲಿ ದೊಡ್ಡ ಮಟ್ಟದ ತ್ಯಾಜ್ಯ ಉತ್ಪಾದಕರಿಂದ ಉತ್ಪಾದನೆಯಾಗುತ್ತಿರುವ ಘನತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿಯದ್ದೇ ದೊಡ್ಡ ಸಮಸ್ಯೆ. ಇವರಿಂದ ಸಂಗ್ರಹಿಸುವ ತ್ಯಾಜ್ಯವನ್ನು ಖಾಸಗಿಯವರು ನಿಗದಿತ ಸ್ಥಳದಲ್ಲಿ ಕಸ ವಿಲೇವಾರಿ ಮಾಡದೆ ಕೆರೆಗಳ ಸುತ್ತಮುತ್ತಲ ಪ್ರದೇಶ, ರಾಜಕಾಲುವೆ, ರಸ್ತೆ ಬದಿ ಸೇರಿದಂತೆ ರಾತ್ರೋರಾತ್ರಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿದು ಪಲಾಯನ ಮಾಡುತ್ತಾರೆ ಎಂಬ ಆರೋಪವಿದೆ. ಇದರಿಂದ ಬಿಬಿಎಂಪಿ ಗುತ್ತಿಗೆದಾರರು ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡಿದರೂ ಅನಗತ್ಯವಾಗಿ ದೂರುಗಳನ್ನು ಎದುರಿಸಬೇಕಾಗುತ್ತದೆ. ಜೊತೆಗೆ ನಗರದ ಸ್ವಚ್ಛತೆಯೂ ಹಾಳಾಗಿ, ಅಂದಗೆಡುತ್ತಿದೆ. ಹಾಗಾಗಿ ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರನ್ನೂ ಈ ಟೆಂಡರ್‌ನಲ್ಲಿ ಸೇರಿಸಬೇಕು ಎಂಬುದು ಗುತ್ತಿಗೆದಾರರ ಆಗ್ರಹ.

ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರರನ್ನು ಬಿಬಿಎಂಪಿ ಹೊರಗಿಟ್ಟಿರುವುದೇಕೆ? ಬಿಬಿಎಂಪಿಗೆ ನಾವು ‘ತ್ಯಾಜ್ಯ ಕರ’ ಪಾವತಿಸುತ್ತಿಲ್ಲವೇ? ಅದರಲ್ಲೂ ವಾಣಿಜ್ಯ ಚಟುವಟಿಕೆಯಡಿ ಹೆಚ್ಚಿನ ತ್ಯಾಜ್ಯ ಸಂಗ್ರಹಣಾ ಕರವನ್ನೇ ವಿಧಿಸಲಾಗುತ್ತಿದೆ. ಹೀಗಿರುವಾಗ ನಮ್ಮಿಂದ ತ್ಯಾಜ್ಯ ಸಂಗ್ರಹಿಸುವುದಿಲ್ಲ ಎನ್ನುವುದು ಸರಿಯಲ್ಲ. ಕೆಎಂಸಿ ಕಾಯ್ದೆ ನಿಯಮಗಳ ಪ್ರಕಾರ, ನಗರದ ಎಲ್ಲಾ ಮೂಲಗಳಿಂದಲೂ ವೈಜ್ಞಾನಿಕವಾಗಿ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುವುದು ಪಾಲಿಕೆ ಕರ್ತವ್ಯ. ಈ ಬಗ್ಗೆ ಅಪಾರ್ಟ್‌ಮೆಂಟ್‌, ಕಲ್ಯಾಣಮಂಟಪ, ಹೋಟೆಲ್‌ ಮಾಲಿಕರ ಸಂಘದ ಪ್ರತಿನಿಧಿಗಳೆಲ್ಲರೂ ಚರ್ಚೆ ನಡೆಸುತ್ತಿದ್ದೇವೆ, ಶೀಘ್ರ ಬಿಬಿಎಂಪಿ ಆಯುಕ್ತರನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ ಎಂದು ಬೆಂಗಳೂರು ನಗರ ಹೋಟೆಲ್‌ ಮಾಲಿಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್‌ ಹೇಳಿದ್ದಾರೆ.

‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಖಾಸಗಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿದಾರರಿಂದ ನಮಗೆ ಹೊರೆಯಾಗುತ್ತಿದೆ. ಬಿಬಿಎಂಪಿಯೇ ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರಿಂದಲೂ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಫೆ.5ರ ಪ್ರೀ ಬಿಡ್‌ ಸಭೆಯಲ್ಲಿ ಮಾತನಾಡ್ತಿವಿ:

ಕಠಿಣ ಟೆಂಡರ್‌ ನಿಯಮಾವಳಿಗಳನ್ನು ಒಪ್ಪದೆ ಕಳೆದ ಮೂರು ಬಾರಿ ತ್ಯಾಜ್ಯ ವಿಲೇವಾರಿಗೆ ಟೆಂಡರ್‌ ಕರೆದರೂ ಯಾರೂ ಬಿಡ್‌ ಮಾಡಿರಲಿಲ್ಲ. ಈಗಿನ ವಾರ್ಡ್‌ವಾರು ಟೆಂಡರ್‌ ನಿಯಮಾವಳಿಗಳಿಗೂ ನಮ್ಮ ಅಸಮಾಧಾನ ಇದೆ. ನಾವು ಈ ಹಿಂದೆ ಮನವಿ ಮಾಡಿದಂತೆ ಟೆಂಡರ್‌ ನಿಯಮಗಳನ್ನು ಸಡಿಲಗೊಳಿಸಿಲ್ಲ. ಫೆ.5ರಂದು ನಡೆಯುವ ಪ್ರೀ ಬಿಡ್‌ ಸಭೆಯಲ್ಲಿ ಮತ್ತೊಮ್ಮೆ ಬಿಬಿಎಂಪಿ ಆಯುಕ್ತರೊಂದಿಗೆ ಚರ್ಚಿಸಲಾಗುವುದು. ನಂತರ ಬಿಡ್‌ನಲ್ಲಿ ಭಾಗವಹಿಸುವ ಬಗ್ಗೆ ನಿರ್ಧರಿಸುವುದಾಗಿ ಗುತ್ತಿಗೆದಾರರು ಹೇಳುತ್ತಿದ್ದಾರೆ.

ಪ್ರಸ್ತುತ ಟೆಂಡರ್‌ ನಿಯಮಾವಳಿಗೂ ಕೂಡ ಯಾವ ಗುತ್ತಿಗೆದಾರನು ಬಿಡ್‌ನಲ್ಲಿ ಭಾಗವಹಿಸುವಂತೆ ಇಲ್ಲ. ಪ್ರಮುಖವಾಗಿ ಈ ಹಿಂದೆ ಇದ್ದಂತೆ ಒಣತ್ಯಾಜ್ಯ, ಹಸಿ ತ್ಯಾಜ್ಯ ಸೇರಿದಂತೆ ಎಲ್ಲ ರೀತಿಯ ತ್ಯಾಜ್ಯವನ್ನೂ ಗುತ್ತಿಗೆದಾರರೇ ಸಂಗ್ರಹಿಸಿ ವಿಲೇವಾರಿ ಮಾಡುವುದು, ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರ ತ್ಯಾಜ್ಯ ವಿಲೇವಾರಿಯನ್ನೂ ಟೆಂಡರ್‌ನಲ್ಲಿ ಸೇರಿಸುವುದು ಸೇರಿದಂತೆ ಒಟ್ಟಾರೆ ಏಕಗವಾಕ್ಷಿ (ಸಿಂಗಲ್‌ವಿಂಡೋ) ಟೆಂಡರ್‌ ಪ್ರಕ್ರಿಯೆ ನಡೆಸುವಂತೆ ಮನವಿ ಮಾಡಿದ್ದೆವು. ಆದರೆ, ಬಿಬಿಎಂಪಿ ನಮ್ಮ ಮನವಿಯನ್ನು ಪರಿಗಣಿಸಿಲ್ಲ. ಫೆ.5ರಂದು ಪ್ರೀ ಬಿಡ್‌ ಸಭೆ ಕರೆಯಲಾಗಿದೆ. ಸಭೆಯಲ್ಲಿ ಮತ್ತೊಮ್ಮೆ ಆಯುಕ್ತರಿಗೆ ಮನವಿ ಮಾಡುತ್ತೇವೆ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಹೇಳಿದ್ದಾರೆ.

ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರಿಂದ ಖಾಸಗಿ ತ್ಯಾಜ್ಯ ವಿಲೇವಾರಿ ಸಂಸ್ಥೆಯವರು ಪ್ರತಿ ವಾರ್ಡ್‌ನಲ್ಲಿ ತಿಂಗಳಿಗೆ 10 ಲಕ್ಷಕ್ಕೂ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಅದನ್ನು ಬಿಬಿಎಪಿಯೇ ಪಡೆದು, ಗುತ್ತಿಗೆದಾರರಿಗೆ ನಿಯಮಾನುಸಾರ ಒಂದು ಕಾಂಪ್ಯಾಕ್ಟರ್‌ಗೆ .1.80 ಲಕ್ಷ ನೀಡಿದರೆ ನಾವೇ ವಿಲೇವಾರಿ ಮಾಡುತ್ತೇವೆ. ಇದರಿಂದ ಬಿಬಿಎಂಪಿಗೂ ಲಾಭವಾಗುತ್ತದೆ. ಇನ್ನು, ಒಣ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಟೆಂಡರ್‌ ಬದಲು ನಮಗೇ ಒಂದೋ, ಎರಡೋ ಹೆಚ್ಚು ಆಟೋ ಟಿಪ್ಪರ್‌ಗೆ ಅವಕಾಶ ನೀಡಿದರೆ ನಾವೇ ಒಣತ್ಯಾಜ್ಯ ಸಂಗ್ರಹ ಘಟಕಕ್ಕೆ ವಿಲೇವಾರಿ ಮಾಡುತ್ತೇವೆ. ಈ ಬಗ್ಗೆ ವಿವರಿಸಿದರೂ ಬಿಬಿಎಂಪಿ ಏಕೆ ಪರಿಗಣಿಸುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

198 ವಾರ್ಡ್‌ಗಳಿಗೆ .486 ಕೋಟಿ ಟೆಂಡರ್‌

ನಗರದಲ್ಲಿ ಘತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಗಾಗಿ ಬಿಬಿಎಂಪಿ ಆರು ವರ್ಷಗಳ ನಂತರ ಮತ್ತೆ ಟೆಂಡರ್‌ ಪ್ರಕ್ರಿಯೆ ಆರಂಭಿಸಿದೆ. ಈ ಬಾರಿ ಎಲ್ಲಾ 198 ವಾರ್ಡುಗಳಿಗೂ ವಾರ್ಡ್‌ವಾರು ಪ್ರತ್ಯೇಕ ಟೆಂಡರ್‌ ಕರೆದಿದೆ. ಕಳೆದ ಶುಕ್ರವಾರ ಸರ್ಕಾರದ ಇ ಪ್ರಕ್ಯುರ್‌ಮೆಂಟ್‌ ವೆಬ್‌ಸೈಟ್‌ನಲ್ಲಿ ಟೆಂಡರ್‌ ಆಹ್ವಾನಿಸಿದ್ದು, ಬಿಡ್‌ ಮಾಡಲು ಫೆ.20ರವರೆಗೆ ಕಾಲಾವಕಾಶ ನೀಡಲಾಗಿದೆ. ಒಬ್ಬ ಗುತ್ತಿಗೆದಾರ ಗರಿಷ್ಠ 5 ವಾರ್ಡ್‌ಗಳ ತ್ಯಾಜ್ಯ ಸಂಗ್ರಹಕ್ಕೆ ಬಿಡ್‌ ಮಾಡಬಹುದಾಗಿದೆ.

ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ಈ ಹಿಂದೆ 3 ಬಾರಿ ಟೆಂಡರ್‌ ಕರೆದರೂ ಕಠಿಣ ನಿಯಮಾವಳಿಗಳ ಕಾರಣದಿಂದ ಯಾವೊಬ್ಬ ಗುತ್ತಿಗೆದಾರರೂ ಬಿಡ್‌ ಮಾಡಲು ಮುಂದೆ ಬಂದಿರಲಿಲ್ಲ. ಹಿಂದಿನ ಷರತ್ತುಗಳಿಗೆ ಕೆಲವು ಮಾರ್ಪಾಡು ಮಾಡಿ ಹೊಸ ಟೆಂಡರ್‌ ಕರೆಯಲಾಗಿದೆ.

ನೀವೇ ಕಸ ಸಂಗ್ರಹಿಸಿ ವಿಲೇವಾರಿ ಮಾಡಿ: ಆಯುಕ್ತ

ಈಗಾಗಲೇ ಕೆಲ ವರ್ಷಗಳಿಂದಲೇ ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರಿಂದ ಬಿಬಿಎಂಪಿ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುತ್ತಿಲ್ಲ. ತಮ್ಮಿಂದ ಉತ್ಪಾದನೆಯಗುವ ತ್ಯಾಜ್ಯವನ್ನು ತಾವೇ ಸಂಗ್ರಹಿಸಿ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ. ನಗರದ ಅನೇಕ ಹೋಟೆಲ್‌, ಕಲ್ಯಾಣ ಮಂಟಕ, ಅಪಾರ್ಟ್‌ಮೆಂಟ್‌ ನಿವಾಸಿಗಳು ಆದೇಶದಂತೆ ನಡೆಯುತ್ತಿದ್ದಾರೆ. ಹಾಗಾಗಿ ಪ್ರಸ್ತುತ ವಾರ್ಡ್‌ವಾರು ಟೆಂಡರ್‌ನಲ್ಲೂ ಅವರನ್ನು ಹೊರಗಿಡಲಾಗಿದೆ. ಆದರೆ, ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರಿಂದ ತ್ಯಾಜ್ಯ ವಿಲೇವಾರಿಗೆ ಖಾಸಗಿಯವರು ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದು, ಸಂಗ್ರಹಿಸಿದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿದು ಹೋಗುತ್ತಿರುವ ದೂರುಗಳು ಬಂದಿವೆ. ಇದೆಲ್ಲವನ್ನೂ ತಡೆಯಲು, ಸೂಕ್ತ ಮಾನದಂಡಗಳನ್ನು ರೂಪಿಸಿ ಅವುಗಳನ್ವಯ ಅರ್ಹ ಖಾಸಗಿ ತ್ಯಾಜ್ಯ ವಿಲೇವಾರಿ ಸಂಸ್ಥೆಗಳನ್ನು ಗುರುತಿಸಿ ಬಿಬಿಎಂಪಿ ತನ್ನ ಪಟ್ಟಿಯಲ್ಲಿ ದಾಖಲಿಸಲಿದೆ. ಜೊತೆಗೆ ಈ ಸಂಸ್ಥೆಗಳ ವಾಹನಗಳ ಮೇಲೆ ನಿಗಾ ವಹಿಸಲು ಹೊಸ ನಿಯಮಗಳನ್ನು ರೂಪಿಸಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.

ಆವರಣದಲ್ಲಿಯೇ ಹಸಿ ಕಸ ಸಂಗ್ರಹಿಸಬೇಕು!

10 ಕೆ.ಜಿ ಗಿಂತ ಅಧಿಕ ತ್ಯಾಜ್ಯ ಉತ್ಪಾದಿಸುವ ವಾಣಿಜ್ಯ ಮತ್ತು 50 ಫ್ಲ್ಯಾಟ್‌ಗಳಿಗಿಂತ ಹೆಚ್ಚಿರುವ ಅಪಾರ್ಟ್‌ಮೆಂಟ್‌ಗಳನ್ನು ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರೆಂದು ವರ್ಗೀ​ಕ​ರಿ​ಸ​ಲಾ​ಗಿದೆ. ಈ ಗುಂಪಿನಲ್ಲಿ ಇರು​ವ​ವರು ತಮ್ಮ ಆವರಣದಲ್ಲೇ ಹಸಿ ಕಸ ಸಂಸ್ಕರಣೆ ಮಾಡಬೇಕೆಂದು 2013ರ ಜುಲೈನಲ್ಲೇ ಆದೇಶ ಹೊರಡಿಸಿದೆ. ಹಸಿ ತ್ಯಾಜ್ಯವನ್ನು ಸಂಸ್ಕರಿಸಿ ವಿಲೇವಾರಿ ಮಾಡುವುದನ್ನು ಪ್ರೋತ್ಸಾಹಿಸಲು ಕಸದ ಸೆಸ್‌ನಲ್ಲಿ ಶೇ.50ರಷ್ಟುರಿಯಾಯಿತಿ ನೀಡಲಾಗುತ್ತಿದೆ. ಕೆಲ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ತಮ್ಮ ಆವರಣದಲ್ಲೇ ಕಸವನ್ನು ಸಂಸ್ಕರಿಸಿ ವಿಲೇವಾರಿ ಮಾಡುತ್ತಿವೆ. ಕೆಲವರು ಖಾಸಗಿಯವರ ಮೂಲಕ ವಿಲೇವಾರಿ ಮಾಡುತ್ತಿದ್ದಾರೆ. ಇದು ತಮಗೆ ಹೊರೆಯಾಗುತ್ತಿದ್ದು, ಬಿಬಿಎಂಪಿಯೇ ತ್ಯಾಜ್ಯ ವಿಲೇವಾರಿ ಮಾಡಬೇಕೆಂಬುದು ಅವರ ಆಗ್ರಹವಾಗಿದೆ.

ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರಿಂದ ‘ತ್ಯಾಜ್ಯ ಕರ’ ವಸೂಲಿ ಮಾಡುತ್ತಿರುವ ಬಿಬಿಎಂಪಿ ತ್ಯಾಜ್ಯ ಸಂಗ್ರಹಿಸುವುದಿಲ್ಲ ಎಂದು ಹೇಳುವುದು ಸರಿಯಲ್ಲ. ಈ ಬಗ್ಗೆ ಅಪಾರ್ಟ್‌ಮೆಂಟ್‌, ಕಲ್ಯಾಣಮಂಟಪ, ಹೋಟೆಲ್‌ ಮಾಲಿಕರ ಸಂಘದ ಪ್ರತಿನಿಧಿಗಳೆಲ್ಲರೂ ಚರ್ಚೆ ನಡೆಸುತ್ತಿದ್ದೇವೆ, ಶೀಘ್ರ ಬಿಬಿಎಂಪಿ ಆಯುಕ್ತರನ್ನು ಭೇಟಿ ಮಾಡಿ ಚರ್ಚಿಸುತ್ತೇವೆ.

-ಪಿ.ಸಿ.ರಾವ್‌, ಬೆಂಗಳೂರು ನಗರ ಹೋಟೆಲ್‌ ಮಾಲಿಕರ ಸಂಘದ ಅಧ್ಯಕ್ಷ.
  
ವರದಿ :   ಲಿಂಗರಾಜು ಕೋರಾ