ಬೆಂಗಳೂರು :  ನೈಋುತ್ಯ ರೈಲ್ವೆಯು ಬೆಂಗಳೂರು ವಿಭಾಗದ ದಂಡು ರೈಲ್ವೆ ನಿಲ್ದಾಣ-ಬೈಯಪ್ಪನಹಳ್ಳಿ(6.ಕಿ.ಮೀ) ರೈಲು ನಿಲ್ದಾಣದ ನಡುವೆ ಹಮ್ಮಿಕೊಂಡಿದ್ದ ಸ್ವಯಂಚಾಲಿತ ಸಿಗ್ನಲ್‌ ವ್ಯವಸ್ಥೆ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದೆ.

2013-14ನೇ ಸಾಲಿನಲ್ಲಿ .19.75 ಕೋಟಿ ವೆಚ್ಚದಲ್ಲಿ ನಗರದ ದಂಡು ರೈಲ್ವೆ ನಿಲ್ದಾಣ-ವೈಟ್‌ಫೀಲ್ಡ್‌ (19 ಕಿ.ಮೀ) ನಡುವೆ ಸ್ವಯಂ ಚಾಲಿತ ಸಿಗ್ನಲ್‌ ವ್ಯವಸ್ಥೆ ಅಳವಡಿಸುವ ಯೋಜನೆ ರೂಪಿಸಲಾಗಿತ್ತು. ಈ ಮಾರ್ಗದಲ್ಲಿ ದಂಡು, ಬೆಂಗಳೂರು ಪೂರ್ವ, ಬೈಯಪ್ಪನಹಳ್ಳಿ, ಕೃಷ್ಣರಾಜಪುರಂ, ಹೂಡಿ ಮತ್ತು ವೈಟ್‌ಫೀಲ್ಡ್‌ ರೈಲು ನಿಲ್ದಾಣಗಳಿವೆ. ಇದೀಗ ಮೊದಲ ಹಂತದಲ್ಲಿ ದಂಡು-ಬೈಯಪ್ಪನಹಳ್ಳಿ ನಡುವಿನ ಸ್ವಯಂ ಚಾಲಿತ ಸಿಗ್ನಲ್‌ ವ್ಯವಸ್ಥೆ ಕಾಮಗಾರಿ ಪೂರ್ಣಗೊಂಡಿದೆ. ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್‌ ನಡುವಿನ ಕಾಮಗಾರಿ ಪ್ರಗತಿಯಲ್ಲಿದ್ದು, ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ.

ಬೆಂಗಳೂರ-ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್‌ ಮಾರ್ಗವು ಪ್ರಮುಖ ಮಾರ್ಗವಾಗಿದ್ದು, ಪ್ರತಿ ದಿನ 86 ರೈಲುಗಳು ಸಂಚರಿಸುತ್ತವೆ. ಇದರ ಜತೆಗೆ 26 ಉಪನಗರ ರೈಲುಗಳು ಸಂಚರಿಸುತ್ತವೆ. ದಂಡು-ಬೈಯಪ್ಪನಹಳ್ಳಿ ನಡುವಿನ ಸ್ವಯಂಚಾಲಿತ ಸಿಗ್ನಲ್‌ ವ್ಯವಸ್ಥೆಯಿಂದ ರೈಲುಗಳು ಮತ್ತಷ್ಟು ವೇಗವಾಗಿ ಚಲಿಸಲು ಸಹಕಾರಿಯಾಗಲಿದೆ. 

ಕೆಎಸ್‌ಆರ್‌ ನಿಲ್ದಾಣಕ್ಕೆ ಬರುವ ರೈಲುಗಳು ಸಿಗ್ನಲ್‌ಗಾಗಿ ಮಾರ್ಗದ ರೈಲು ನಿಲ್ದಾಣಗಳಲ್ಲಿ ಕಾಯುವುದು ಕಡಿಮೆಯಾಗಲಿದೆ. ಅಲ್ಲದೆ, ನಿಲ್ದಾಣಗಳ ನಡುವೆ ತಮ್ಮ ಭಾಗದಲ್ಲಿ ಒಂದರ ನಂತರ ಮತ್ತೊಂದು ರೈಲು ಸಂಚರಿಸಬಹುದು. ಪ್ರತಿ ಒಂದು ಕಿ.ಮೀ.ಗೆ ಒಂದು ರೈಲು ಸಾಗಲು ಅವಕಾಶ ಸಿಗಲಿದೆ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.