Asianet Suvarna News Asianet Suvarna News

ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಸಿದ್ಧತೆ : ಈ ಬಾರಿ ವಿಶೇಷವೇನು?

ಏರೋ ಇಂಡಿಯಾ- 2019ಕ್ಕೆ ಸಕಲ ಸಿದ್ಧತೆ ಆರಂಭ​ಗೊಂಡಿದ್ದು, ಫೆ.20ರಿಂದ 24ರ ವರೆಗೆ ನಡೆಯಲಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 12ನೇ ಆವೃತ್ತಿಯ ಕಾರ್ಯಕ್ರಮ ನಡೆಯಲಿದೆ. 

Aero India Show To Be held From Feb 20 to 24
Author
Bengaluru, First Published Jan 31, 2019, 8:51 AM IST

ಬೆಂಗಳೂರು :  ನಗರದ ಯಲಹಂಕ ವಾಯುನೆಲೆಯಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ದೇಶದ ಅತಿದೊಡ್ಡ ವೈಮಾನಿಕ ಪ್ರದರ್ಶನವಾಗಿರುವ ಏರೋ ಇಂಡಿಯಾ- 2019ಕ್ಕೆ ಸಕಲ ಸಿದ್ಧತೆ ಆರಂಭ​ಗೊಂಡಿದ್ದು, ಫೆ.20ರಿಂದ 24ರ ವರೆಗೆ ನಡೆಯಲಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 12ನೇ ಆವೃತ್ತಿಯ ಕಾರ್ಯಕ್ರಮದ ನಿರ್ವಹಣೆ ಹೊಣೆಗಾರಿಕೆಯನ್ನು ಎಚ್‌ಎಎಲ್‌ ವಹಿಸಿಕೊಂಡಿದೆ.

ವಸ್ತು ಪ್ರದರ್ಶನಕ್ಕೆ ಅವಶ್ಯವಿರುವ ಮಳಿಗೆಗಳು, ವಿಐಪಿಗಳು ಕುಳಿತು ವೈಮಾನಿಕ ಪ್ರದರ್ಶನಕ್ಕೆ ಬೇಕಿರುವ ಆಸನಗಳ ವ್ಯವಸ್ಥೆ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ರಕ್ಷಣಾ ಸಿಬ್ಬಂದಿ, ರನ್‌ವೇಗಳ ಸಿದ್ಧತೆ, ವಿಚಾರ ಸಂಕಿರಣಗಳ ನಡೆಸುವುದಕ್ಕೆ ತಯಾರಿ ಸೇರಿದಂತೆ ಹತ್ತಾರು ರೀತಿಯಲ್ಲಿ ರಕ್ಷಣಾ ಇಲಾಖೆಯು ವೈಮಾನಿಕ ಪ್ರದರ್ಶನಕ್ಕೆ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ.

ಫೆಬ್ರವರಿ 20ರ ಬೆಳಗ್ಗೆ ಏರೋ ಶೋ ಹಾಗೂ ವಸ್ತು ಪ್ರದರ್ಶನಕ್ಕೆ ಚಾಲನೆ ಸಿಗಲಿದೆ. ಫೆ.24ರ ವರೆಗೂ ವೈಮಾನಿಕ ಹಾರಾಟ ಮತ್ತು ಪ್ರದರ್ಶನ ನಡೆಯಲಿದೆ. ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ವಿಮಾನ ಹಾರಾಟ ಪ್ರದರ್ಶನ ಇರಲಿದೆ.

ಫೆ.20ರಿಂದ 24ರ ವರೆಗೂ ನಿರಂತರವಾಗಿ ವಿಚಾರ ಸಂಕಿರಣ, ವ್ಯವಹಾರ ಸಭೆ ಹಾಗೂ ವಸ್ತು ಪ್ರದರ್ಶನ ನಡೆಯಲಿದೆ. ಫೆ.21ರಂದು ಡ್ರೋಣ್‌ ಒಲಿಂಪಿಕ್ಸ್‌, ಬಾಹ್ಯಾಕಾಶ ಕ್ಷೇತ್ರದ ನವೋದ್ಯಮಗಳ ಚರ್ಚೆ, ಫೆ.22ರಂದು ನಾಗರಿಕ ಮತ್ತು ರಕ್ಷಣಾ ಕ್ಷೇತ್ರದಲ್ಲಿನ ವೈಮಾನಿಕ ತಂತ್ರಜ್ಞಾನ ಕುರಿತು ‘ತಂತ್ರಜ್ಞಾನ ದಿನ’ ನಡೆಸಲಾಗುತ್ತದೆ. ಫೆ.23ರಂದು ದೇಶ ಹಾಗೂ ವಿದೇಶಿ ವೈಮಾನಿಕ ವಲಯದಲ್ಲಿ ಮಹಿಳೆಯರ ಕೊಡುಗೆ ಕುರಿತ ಕಾರ್ಯಕ್ರಮಕ್ಕೆ ಮೀಸಲಿಡಲಾಗಿದೆ. ವೈಮಾನಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳೆಯರು ಭಾಗವಹಿಸಲಿದ್ದಾರೆ.

50ಕ್ಕೂ ಹೆಚ್ಚಿನ ವಿಮಾನಗಳ ಹಾರಾಟ:

ವೈಮಾನಿಕ ಪ್ರದರ್ಶನದ ಸಿದ್ಧತೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಲಹಂಕ ವಾಯುನೆಲೆಯ ಏರ್‌ ಆಫೀಸರ್‌ ಕಮಾಂಡಿಂಗ್‌ ರಾವುರಿ ಶೀತಲ್‌, ಫ್ಲೈಯಿಂಗ್‌ ಡಿಸ್‌ಪ್ಲೇ ವಿಭಾಗದಲ್ಲಿ ವಿವಿಧ ಬಗೆಯ 36 ಏರ್‌ಕ್ರಾಫ್ಟ್‌, ಇತರೆ ಏಜೆನ್ಸಿಗಳ ಏಳು ಏರ್‌ಕ್ರಾಫ್ಟ್‌ ಮತ್ತು ಸ್ಟ್ಯಾಟಿಕ್‌ ಡಿಸ್‌ಪ್ಲೇ ವಿಭಾಗದಲ್ಲಿ ಐಎಎಫ್‌ ಏರ್‌ಕ್ರಾಫ್ಟ್‌ ಹಾಗೂ ಎಚ್‌ಎಎಲ್‌ ಮತ್ತು ಇತರೆ ಏಜೆನ್ಸಿಗಳ ತಲಾ 11 ಏರ್‌ಕ್ರಾಫ್ಟ್‌ ಪ್ರದರ್ಶನ ನಡೆಸಲಿವೆ ಎಂದು ಮಾಹಿತಿ ನೀಡಿದರು.

ರಕ್ಷಣಾ ಕ್ಷೇತ್ರದ ವಸ್ತು ಪ್ರದರ್ಶನ ಮತ್ತು ಮಾರಾಟಕ್ಕಾಗಿ ಈಗಾಗಲೇ 196 ದೇಶಿ ಹಾಗೂ 164 ವಿದೇಶಿ ಕಂಪನಿಗಳು ನೋಂದಣಿ ಮಾಡಿಕೊಂಡಿವೆ. ಪ್ರತಿದಿನ 10 ಸಾವಿರ ವಿದ್ಯಾರ್ಥಿಗಳು ಪ್ರದರ್ಶನಕ್ಕೆ ಬರಬಹುದಾದ ವ್ಯವಸ್ಥೆ ಮಾಡಿದ್ದೇವೆ ಎಂದು ವಿವರಿಸಿದರು.

ಸ್ಥಳದಲ್ಲಿಯೂ ಪಾಸ್‌ ವಿತರಣೆ:

ಸಾರ್ವಜನಿಕರು ಆನ್‌ಲೈನ್‌ ಮೂಲಕ ಪಾಸ್‌ ಖರೀದಿಸಬಹುದು. ಸ್ಥಳದಲ್ಲಿಯೂ ಖರೀದಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೂ ಆನ್‌ಲೈನ್‌ ಮೂಲಕವೇ ಪಾಸ್‌ ಖರೀದಿಸುವುದು ಉತ್ತಮ. ಇದರ ಜತೆಗೆ ಫುಡ್‌ ಕೋರ್ಟ್‌, ಕುಡಿಯುವ ನೀರು, ಶೌಚಾಲಯ ಮತ್ತು ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗುತ್ತಿದೆ. 

ಡ್ರೋಣ್‌ ಸ್ಪರ್ಧೆ ಈ ಬಾರಿಯ ವಿಶೇಷ:

ಫೆ.21ರಂದು ಜಕ್ಕೂರು ವಾಯುನೆಲೆಯಲ್ಲಿ ಡ್ರೋಣ್‌ ಸ್ಪರ್ಧೆ ನಡೆಯಲಿದ್ದು, ಫೈನಲ್‌ ಸ್ಪರ್ಧೆ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ. ಇದರ ಜತೆಗೆ ಫೋಟೋಗ್ರಫಿ ಸ್ಪರ್ಧೆ, ವಿದ್ಯಾರ್ಥಿಗಳಿಗೆ ಹಾಗೂ ನವೋದ್ಯಮಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಲಾಂಛನಕ್ಕೆ ‘ತೇಜಸ್‌’ ಎಲ್‌ಸಿಎ ಪ್ರೇರಣೆ

‘ತೇಜಸ್‌’ ಲಘು ಯುದ್ದ ವಿಮಾನ (ಎಲ್‌ಸಿಎ) ಪ್ರೇರಣೆಯೊಂದಿಗೆ 2019ರ ವೈಮಾನಿಕ ಪ್ರದರ್ಶನಕ್ಕೆ ಲಾಂಛನ ಕೂಡ ಬಿಡುಗಡೆ ಮಾಡಲಾಗಿದೆ. ಕೇಸರಿ, ಬಿಳಿ, ಹಸಿರು ಮೂರು ಬಣ್ಣಗಳ ಸಮ್ಮಿಳಿತ ತೇಜಸ್‌ ಯುದ್ಧವಿಮಾನದ ಪ್ರತಿಕೃತಿ ಮಧ್ಯದಲ್ಲಿ ಅಶೋಕ ಚಕ್ರ ಇರುವುದು ಈ ಬಾರಿಯ ಏರೋ ಶೋ ಲಾಂಛನದ ವಿಶೇಷ. ‘ಎ’ ಚಿನ್ಹೆಯು ಜೆಟ್‌ ಯುದ್ಧ ವಿಮಾನ ಮತ್ತು ಏರೋ ಇಂಡಿಯಾ ಜಾಗತಿಕ ಪ್ರದರ್ಶನದ ಭಾರತದ ಹೆಮ್ಮೆಯನ್ನು ಎತ್ತಿ ತೋರಿಸಲಿದೆ. ವಿಮಾನ ಯಾನ ಕ್ಷೇತ್ರದಲ್ಲಿರುವ ಅವಕಾಶ ಮತ್ತು ಭಾರತೀಯ ಮೌಲ್ಯಗಳ ಸಂವಹನ ಮಾಧ್ಯಮವನ್ನು ಆಧಾರವಾಗಿಟ್ಟುಕೊಂಡು ‘ದಿ ರನ್‌ವೇ ಟು ಎ ಬಿಲಿಯನ್‌ ಆಪರ್ಚುನಿಟಿಸ್‌’ ಟ್ಯಾಗ್‌ಲೈನ್‌ ಕೂಡ ಹೊಂದಿದೆ.

Follow Us:
Download App:
  • android
  • ios