ಗುಜರಾತ್‌ನಲ್ಲಿ ಸೆ.12ರಿಂದ 15ರವರೆಗೆ ವಿಶ್ವ ಡೇರಿ ಶೃಂಗಸಭೆ ನಡೆಯಲಿದ್ದು ಕೆಎಂಎಫ್‌ ಈ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ವಹಿಸಿದೆ

ಕನ್ನಡಪ್ರಭ ವಾರ್ತೆ, ಬೆಂಗಳೂರು

ಅಂತಾರಾಷ್ಟ್ರೀಯ ಡೇರಿ ಫೆಡರೇಷನ್‌(ಐಡಿಎಫ್‌) ವತಿಯಿಂದ ಸೆ.12ರಿಂದ 15ರವರೆಗೆ ಗುಜರಾತ್‌ನ ಆನಂದ್‌ನಲ್ಲಿ ‘ವಿಶ್ವ ಡೇರಿ ಶೃಂಗ’ ಸಭೆ ನಡೆಯುತ್ತಿದ್ದು ಅಮೂಲ್‌ನೊಂದಿಗೆ ಕರ್ನಾಟಕ ಹಾಲು ಮಹಾಮಂಡಳಿ(ಕೆಎಂಎಫ್‌) ಸಹ ಮುಖ್ಯ ಪ್ರಾಯೋಜಕತ್ವ ಪಡೆದಿದೆ. ಕೆಎಂಎಫ್‌ ದೇಶದ 2ನೇ ಅತಿದೊಡ್ಡ ಸಹಕಾರಿ ಸಂಸ್ಥೆಯಾಗಿದ್ದು ನಾಲ್ಕೂವರೆ ದಶಕಗಳಿಂದ ಸಹಕಾರ ಚಳವಳಿಯ ತತ್ವಗಳನ್ನು ಮೈಗೂಡಿಸಿಕೊಂಡು ಗ್ರಾಮೀಣ ಹಾಲು ಉತ್ಪಾದಕರ ಅರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಅಲ್ಲದೇ ಗ್ರಾಮೀಣ ಉದ್ಯೋಗ ಮತ್ತು ಹಾಲು ಉತ್ಪಾದನೆಗೆ ಆದ್ಯತೆ ನೀಡಿದೆ. ಇದೀಗ ವಿಶ್ವ ಡೇರಿ ಶೃಂಗ ಸಭೆಯ ಪ್ರಾಯೋಜಕತ್ವ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌ ತಿಳಿಸಿದ್ದಾರೆ.

ಐಡಿಎಫ್‌ ರಾಷ್ಟ್ರೀಯ ಸಂಸ್ಥೆಯಾಗಿದ್ದು, ದೇಶದ ಗ್ರಾಮೀಣ ಪ್ರದೇಶದ ಲಕ್ಷಾಂತರ ಹಾಲು ಉತ್ಪಾದಕರಿಗೆ ವೈಜ್ಞಾನಿಕ ಮತ್ತು ತಾಂತ್ರಿಕ ಹೈನೋದ್ಯಮ ಕಾರ್ಯಕ್ರಮಗಳನ್ನು ಏರ್ಪಡಿಸಿ ಆರ್ಥಿಕವಾಗಿ ಸದೃಢಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಅಂತಾರಾಷ್ಟ್ರೀಯ ಡೇರಿ ಫೆಡರೇಷನ್‌ನ ವಿಶ್ವ ಡೇರಿ ಶೃಂಗಸಭೆಗೆ ವಿಶ್ವದಾದ್ಯಂತ ಸುಮಾರು 1500 ಸಂಖ್ಯೆ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಡೇರಿ ಸಂಸ್ಕರಣಾ ಕಂಪನಿಗಳ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳು ಮತ್ತು ಉದ್ಯೋಗಿಗಳು, ಡೇರಿ ರೈತರು, ಡೇರಿ ಉದ್ಯಮಕ್ಕೆ ಪೂರೈಕೆದಾರರು, ಶಿಕ್ಷಣ ತಜ್ಞರು, ಸರ್ಕಾರಿ ಪ್ರತಿನಿಧಿಗಳು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಡೇರಿ ಫೆಡರೇಷನ್‌ ವಿಶ್ವದ ಡೇರಿ ಉತ್ಪನ್ನಗಳು ಸುರಕ್ಷಿತ ಮತ್ತು ಸಮರ್ಥನೀಯವೆಂದು ಖಚಿತಪಡಿಸಿಕೊಳ್ಳಲು ನೀತಿ, ನಿಬಂಧನೆಗಳು, ಮಾನದಂಡಗಳನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ವಿಶ್ವದ 43 ಸದಸ್ಯ ರಾಷ್ಟ್ರಗಳಲ್ಲಿ 1200ಕ್ಕೂ ಹೆಚ್ಚು ಅರ್ಹ ಡೇರಿ ತಜ್ಞರೊಂದಿಗೆ ಐಡಿಎಫ್‌ ಜಾಗತಿಕ ಹಾಲು ಉತ್ಪಾದನೆಯ ಶೇ.75ರಷ್ಟನ್ನು ಪ್ರತಿನಿಧಿಸುತ್ತಿದೆ. ಅಲ್ಲದೇ ಡೇರಿ ವಲಯಕ್ಕೆ ಸಂಬಂಧಿಸಿದ ಅಧಿಕೃತ ವೈಜ್ಞಾನಿಕ ಮತ್ತು ತಾಂತ್ರಿಕ ಮಾಹಿತಿಯ ಶಾಶ್ವತ ಮೂಲವನ್ನು ಒದಗಿಸುತ್ತದೆ. ಆದ್ದರಿಂದ ಆಸಕ್ತಿ ಹೊಂದಿರುವ ಡೇರಿ ಉತ್ಸಾಹಿಗಳು, ರೈತರು, ಶಿಕ್ಷಣ ತಜ್ಞರು ಮತ್ತು ಉದ್ಯಮಿಗಳು ವಿಶ್ವ ಡೇರಿ ಶೃಂಗ ಸಭೆಯಲ್ಲಿ ಪಾಲ್ಗೊಂಡು ಉದ್ಯಮದ ಬಗ್ಗೆ ಮತ್ತಷ್ಟುಅರಿವು ಹೊಂದಬಹುದು ಎಂದು ಕೆಎಂಎಫ್‌ ತಿಳಿಸಿದೆ.

ಗುಜರಾತ್‌ ರಾಜ್ಯದ ಆನಂದ್‌ನಲ್ಲಿ ನಡೆದ ವಿಶ್ವ ಡೇರಿ ಶೃಂಗದ ಪೂರ್ವಭಾವಿ ಸಭೆಯಲ್ಲಿ ದೆಹಲಿಯ ಮದರ್‌ ಡೇರಿ ವ್ಯವಸ್ಥಾಪಕ ನಿರ್ದೇಶಕ ಮನಿಷ್‌, ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌, ಅಮೂಲ್‌ ಅಧ್ಯಕ್ಷ ಶಾಮಲಭಾಯಿ ಪಟೇಲ್‌ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.