ಬೆಂಗಳೂರು [ಅ.21]:  ರಸ್ತೆಯಲ್ಲಿ ಚಾಕು ಹಿಡಿದು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರು ಕಿಡಿಗೇಡಿಗಳನ್ನು ಸಿ.ಟಿ.ಮಾರುಕಟ್ಟೆಠಾಣೆ ಪೊಲೀಸರು ಬಂಧಿಸಿದ್ದಕ್ಕೆ ಉದ್ರಿಕ್ತರ ಗುಂಪು  ರಾತ್ರಿ ಠಾಣೆ ಬಳಿ ಜಮಾಯಿಸಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಘಟನೆಯಿಂದಾಗಿ ಠಾಣೆಯ ಎರಡು ಚೀತಾ ಬೈಕ್‌ ಹಾಗೂ ಸಾರ್ವಜನಿಕರ ಎರಡು ವಾಹನಗಳಿಗೆ ಹಾನಿಯಾಗಿದೆ. ಕೃತ್ಯ ಎಸಗಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಪ್ರಕರಣದಲ್ಲಿ ಚಾಕು ಹಿಡಿದು ಓಡಾಡುತ್ತಿದ್ದ ಚಂದ್ರ ಲೇಔಟ್‌ ನಿವಾಸಿ ಮೊಹಮ್ಮದ್‌ ಸುಹೇಲ್‌ (21), ಪಾದರಾಯನಪುರದ ಸೈಯದ್‌ ಮುಬಾರಕ್‌ (19) ಹಾಗೂ ನಾಯಂಡಹಳ್ಳಿಯ ಇಮ್ರಾನ್‌ ಖಾನ್‌ (20) ಬಂಧಿತರು. ಆರೋಪಿಗಳಿಂದ ಚಾಕು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಭಾನುವಾರ ರಾತ್ರಿ ಉರುಸ್‌ ಮೆರವಣಿಗೆ ಬಿವಿಕೆ ಅಯ್ಯಂಗಾರ್‌ ರಸ್ತೆ, ಚಿಕ್ಕಪೇಟೆ, ಅವಿನ್ಯೂ ರಸ್ತೆಯಲ್ಲಿ ಸಂಚಾರಿಸಿ ಕಾಟನ್‌ಪೇಟೆಯಲ್ಲಿರುವ ಮಸೀದಿಗೆ ತಲುಪ ಬೇಕಿತ್ತು. ಮೆರವಣಿಗೆಯಲ್ಲಿ ಸುಮಾರು ಎಂಟರಿಂದ ಹತ್ತು ಸಾವಿರ ಮಂದಿ ಪಾಲ್ಗೊಂಡಿದ್ದರು. ಮೂವರು ಆರೋಪಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಸ್ಥಳದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಚಾಕು ಪತ್ತೆಯಾಯಿತು. ಕೂಡಲೇ ಪೊಲೀಸರು ಆರೋಪಿಗಳನ್ನು ಬಂಧಿಸಿ, ಠಾಣೆಗೆ ಕರೆದೊಯ್ದಿದ್ದರು.

ಈ ವೇಳೆ ಪೊಲೀಸರನ್ನು ಹಿಂಬಾಲಿಸಿಕೊಂಡಿದ್ದ ಉದ್ರಿಕ್ತರ ಗುಂಪು, ಠಾಣೆ ಎದುರು ಜಮಾಯಿಸಿ ಮೂವರನ್ನು ಬಿಡುಗಡೆ ಮಾಡುವಂತೆ ಕೂಗಾಡಿದ್ದಾರೆ. ಸಿಬ್ಬಂದಿ ಉದ್ರಿಕ್ತ ಕೂಗಾಟಕ್ಕೆ ಸ್ಪಂದಿಸಿಲ್ಲ. ಈ ಸಂದರ್ಭದಲ್ಲಿ ಆರೋಪಿಗಳು ಠಾಣೆಯ ಎರಡು ಬೈಕ್‌ ಹಾಗೂ ಸಾರ್ವಜನಿಕರ ಬೈಕ್‌ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.