ಬಿಎಂಟಿಸಿ ಬಸ್‌ಗಳ ಸುಗಮ ಸಂಚಾರಕ್ಕೆ ಅನುವಾಗುವಂತೆ ನಿರ್ಮಿಸುತ್ತಿರುವ ಪ್ರತ್ಯೇಕ ಬಸ್‌ ಪಥದಲ್ಲಿ  ಇಂದಿನಿಂದ  ಪ್ರಾಯೋಗಿಕ ಬಸ್‌ ಕಾರ್ಯಾಚರಣೆ ಪ್ರಾರಂಭವಾಗಲಿದೆ.

ಬೆಂಗಳೂರು [ಅ.20]: ಬಿಎಂಟಿಸಿ ಬಸ್‌ಗಳ ಸುಗಮ ಸಂಚಾರಕ್ಕೆ ಅನುವಾಗುವಂತೆ ನಿರ್ಮಿಸುತ್ತಿರುವ ಪ್ರತ್ಯೇಕ ಬಸ್‌ ಪಥದಲ್ಲಿ ಭಾನುವಾರದಿಂದ ಪ್ರಾಯೋಗಿಕ ಬಸ್‌ ಕಾರ್ಯಾಚರಣೆ ಪ್ರಾರಂಭವಾಗಲಿದೆ.

ಪ್ರತ್ಯೇಕ ಬಸ್‌ ಪಥ ನಿರ್ಮಾಣಕ್ಕಾಗಿ ಮೊದಲ ಹಂತದಲ್ಲಿ ಅಧಿಕ ಸಂಚಾರ ದಟ್ಟಣೆ ಇರುವ ಕೆ.ಆರ್‌.ಪುರಂನ ಟಿನ್‌ ಫ್ಯಾಕ್ಟರಿ-ಸೆಂಟ್ರಲ್‌ ಸಿಲ್‌್ಕ ಬೋರ್ಡ್‌ (18.5 ಕಿ.ಮೀ) ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸದರಿ ಮಾರ್ಗದಲ್ಲಿ ಈಗಾಗಲೇ ಬಿಬಿಎಂಪಿ, ಬಿಎಂಟಿಸಿ ಹಾಗೂ ಬೆಂಗಳೂರು ನಗರ ಸಂಚಾರ ಪೊಲೀಸರ ಸಹಯೋಗದಲ್ಲಿ ಪ್ರತ್ಯೇಕ ಬಸ್‌ ಪಥ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ನವೆಂಬರ್‌ 1ರ ವೇಳೆಗೆ ಸದರಿ ಮಾರ್ಗದಲ್ಲಿ 10 ಕಿ.ಮೀ. ಪ್ರತ್ಯೇಕ ಪಥ ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದೆ. ಈ ನಡುವೆ ಸದರಿ ಮಾರ್ಗದಲ್ಲಿ ಭಾನುವಾರದಿಂದ ಪ್ರಾಯೋಗಿಕವಾಗಿ ಬಿಎಂಟಿಸಿ ಬಸ್‌ ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿದೆ.

ಪ್ರತ್ಯೇಕ ಪಥ ನಿರ್ಮಾಣ ಕಾಮಗಾರಿ ಮುಂದುವರಿದಿದೆ. ಸಾಧಕ-ಬಾಧಕ ಅಧ್ಯಯನದ ಉದ್ದೇಶದಿಂದ ಭಾನುವಾರದಿಂದಲೇ ಬಸ್‌ಗಳ ಪ್ರಾಯೋಗಿಕ ಕಾರ್ಯಾಚರಣೆಗೆ ತೀರ್ಮಾನಿಸಿದ್ದು, ಈ ಸಂಬಂಧ ಡಿಪೋ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ. ಹಾಗಾಗಿ ಈ ರಸ್ತೆಯ ಎಡಭಾಗದಲ್ಲಿ ನಿರ್ಮಿಸುತ್ತಿರುವ ಪ್ರತ್ಯೇಕ ಪಥದಲ್ಲೇ ಬಸ್‌ಗಳು ಸಂಚರಿಸಲಿವೆ. ಇದರಿಂದ ಚಾಲಕರಿಗೂ ಪಥ ಶಿಸ್ತು ಬರಲಿದೆ. ಪ್ರಯಾಣಿಕರಿಗೂ ಈ ಪ್ರತ್ಯೇಕ ಪಥದ ಬಗ್ಗೆ ಅರಿವು ಮೂಡಲಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರಾಯೋಗಿಕ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಶನಿವಾರವೇ ಸದರಿ ಮಾರ್ಗದಲ್ಲಿ ಬಿಎಂಟಿಸಿ ಸಿಬ್ಬಂದಿ, ಸಂಚಾರ ಪೊಲೀಸರನ್ನು ನಿಯೋಜಿಸಲಾಗಿತ್ತು. ಬಿಎಂಟಿಸಿ ಬಸ್‌ ಹೊರತುಪಡಿಸಿ ಉಳಿದ ವಾಹನಗಳು ಈ ಪ್ರತ್ಯೇಕ ಪಥ ಬಳಕೆ ಮಾಡದಂತೆ ಸ್ಥಳದಲ್ಲೇ ನಿಂತು ಜಾಗೃತಿ ಮೂಡಿಸಿದರು.

ಬಿಬಿಎಂಪಿ ನಗರದ ಅಧಿಕ ದಟ್ಟಣೆಯಿರುವ 12 ಮಾರ್ಗಗಳನ್ನು ಪ್ರತ್ಯೇಕ ಬಸ್‌ ಪಥ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಂಡಿದೆ. ಈಗ ಪ್ರಾಯೋಗಿಕವಾಗಿ ಕೆ.ಆರ್‌.ಪುರಂನ ಟಿನ್‌ ಫ್ಯಾಕ್ಟರಿ- ಸೆಂಟ್ರಲ್‌ ಸಿಲ್‌್ಕ ಬೋರ್ಡ್‌ ಮಾರ್ಗದಲ್ಲಿ ಪ್ರತ್ಯೇಕ ಪಥ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದೆ. ಈ ಪ್ರಯೋಗ ಯಶಸ್ವಿಯಾದಲ್ಲಿ ಉಳಿದ 12 ಮಾರ್ಗಗಳಿಗೂ ಪ್ರತ್ಯೇಕ ಬಸ್‌ ವಿಸ್ತರಿಸಲು ಬಿಬಿಎಂಪಿ ನಿರ್ಧರಿಸಿದೆ.