ಬೆಂಗಳೂರು [ನ.03]: ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ)ವು ಕರ್ತವ್ಯ ನಿರ್ವಹಣೆ ವೇಳೆ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುವ ನೌಕರರಿಗೆ ಪರ್ಯಾಯ ಕೆಲಸ ಕಲ್ಪಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವುದರಿಂದ ನೌಕರರು ಸಂಕಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ನೌಕರರು ಕರ್ತವ್ಯ ನಿರ್ವಹಣೆ ವೇಳೆ ಹೃದಯಾಘಾತ, ಅಪಘಾತ, ಪಾಶ್ರ್ವವಾಯು, ಮಾನಸಿಕ ಒತ್ತಡ ಸೇರಿದಂತೆ ಹಲವು ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಇಂತಹ ಸಂದರ್ಭದಲ್ಲಿ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಲಘು ಕೆಲಸ ನೀಡಲು ಕಾರ್ಮಿಕ ಕಾನೂನಿನಲ್ಲಿ ಅವಕಾಶವಿದೆ. ಅಂದರೆ, ಶೇ.40ಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿದ್ದರೆ ಅವರನ್ನು ಶಾಶ್ವತ ಅಂಗವಿಕಲ ನೌಕರರು ಎಂದು ಪರಿಗಣಿಸಬೇಕು. ಅವರು ನಿವೃತ್ತಿಯಾಗುವವರೆಗೂ ಲಘು ಕೆಲಸ ಕಲ್ಪಿಸಿ ನಿಯಮಾನುಸಾರ ವೇತನ ಹಾಗೂ ಸೌಲಭ್ಯಗಳನ್ನು ನೀಡಬೇಕು ಎಂದು ನಿಯಮದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೂ ಬಿಎಂಟಿಸಿಯಲ್ಲಿ ಈ ಶಾಶ್ವತ ಅಂಗವಿಕಲರಿಗೆ ಲಘು ಕೆಲಸ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎನ್ನಲಾಗುತ್ತಿದೆ.

ಸ್ವಯಂ ನಿವೃತ್ತಿಗೆ ಒತ್ತಡ :  ಶಾಶ್ವತ ಅಂಗವಿಕಲ ನೌಕರರಿಗೆ ಲಘು ಕೆಲಸ ಕಲ್ಪಿಸುವಲ್ಲಿ ಕಾರ್ಮಿಕ ಕಾನೂನಿನ ಉಲ್ಲಂಘನೆಯಾಗುತ್ತಿದೆ. ಅಧಿಕಾರಿಗಳು ಈ ನೌಕರರನ್ನು ಬಹಳ ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ಬಾಯಿಗೆ ಬಂದಂತೆ ಮಾತನಾಡಿ, ಸಕಾಲಕ್ಕೆ ಕೆಲಸ ನೀಡದೇ ಅಲೆದಾಡಿಸುತ್ತಾರೆ. ನಿಗಮವೇ ಸೂಚಿಸುವ ಸರ್ಕಾರಿ ವೈದ್ಯರಿಂದ ಶಾಶ್ವತ ಅಂಗವೈಕಲ್ಯದ ಬಗ್ಗೆ ಪ್ರಮಾಣಪತ್ರ ಪಡೆದು ಹಾಜರು ಪಡಿಸಿದರೂ ಆ ಪ್ರಮಾಣಪತ್ರವನ್ನೇ ಅನುಮಾನದಿಂದ ನೋಡುತ್ತಾರೆ. ಲಘು ಕೆಲಸ ಮಾಡುವ ಬದಲು ಸ್ವಯಂ ನಿವೃತ್ತಿ ಪಡೆಯಿರಿ ಎಂದು ನೌಕರರ ಮೇಲೆ ಒತ್ತಡ ಹೇರುತ್ತಾರೆ ಎಂದು ಕೆಎಸ್‌ಆರ್‌ಟಿಸಿ ಸ್ಟ್ಯಾಫ್‌ ಅಂಡ್‌ ವರ್ಕ​ರ್ಸ್  ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಅನಂತ ಸುಬ್ಬರಾವ್‌ ಆರೋಪಿಸುತ್ತಾರೆ.

ಬಲವಂತ ರಜೆ:  ಬಿಎಂಟಿಸಿಯಲ್ಲಿ ಸುಮಾರು 700 ಮಂದಿ ಶಾಶ್ವತ ಅಂಗವಿಕಲ ನೌಕರರು ಇದ್ದಾರೆ. ವೈದ್ಯಕೀಯ ಪ್ರಮಾಣ ಪತ್ರ ಹಿಡಿದು ಲಘು ಕೆಲಸ ಕಲ್ಪಿಸುವಂತೆ ಪ್ರತಿ ನಿತ್ಯ ಕನಿಷ್ಠ 100 ಮಂದಿ ನೌಕರರು ಕೇಂದ್ರ ಕಚೇರಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ನೌಕರರೆಂದರೆ, ಅಧಿಕಾರಿಗಳು ತಾತ್ಸಾರ ತೋರುತ್ತಾರೆ. ನೌಕರರು ಲಘು ಕೆಲಸ ಮಾಡಲು ಸಿದ್ಧರಿದ್ದರೂ ಬಲವಂತವಾಗಿ ವೈದ್ಯಕೀಯ ರಜೆ ಕೊಟ್ಟು ಮನೆಗೆ ಕಳುಹಿಸುತ್ತಾರೆ. ಈ ಅವಧಿಯಲ್ಲಿ ನೌಕರರಿಗೆ ವೇತನ ಕೊಡುತ್ತಾರೆ. ರಜೆಗಳು ಖಾಲಿಯಾದ ಬಳಿಕ ಗೈರು ಹಾಜರಿ ಹಾಕುತ್ತಾರೆ. ಇದರಿಂದ ಕೆಲಸವೂ ಇಲ್ಲದೆ ವೇತನವೂ ಇಲ್ಲದೆ ನೌಕರರ ಸಂಕಷ್ಟಎದುರಿಸುತ್ತಿದ್ದಾರೆ ಎಂದು ಬಿಎಂಟಿಸಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಯೋಗೇಶ್‌ಗೌಡ ಹೇಳಿದರು.

ಹೆಚ್ಚಿನ ಜಿಲ್ಲಾಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅವಕಾಶಗಳಿಗೆ ಕೊರತೆ ಇಲ್ಲ:  ಶಾಶ್ವತ ಅಂಗವಿಕಲ ನೌಕರರಿಗೆ ಲಘು ಕೆಲಸ ನೀಡಲು ನಿಗಮದಲ್ಲಿ ಸಾಕಷ್ಟುಅವಕಾಶಗಳಿವೆ. ಡಿಪೋಗಳು, ಕಚೇರಿಗಳು, ಬಸ್‌ ನಿಲ್ದಾಣಗಳು, ಟಿಟಿಎಂಸಿಗಳು ಹಾಗೂ ಕಾರ್ಯಾಗಾರಗಳಲ್ಲಿ ಈ ನೌಕರರಿಗೆ ಲಘು ಕೆಲಸ ಕಲ್ಪಿಸಬಹುದು. ಆದರೆ, ಅಧಿಕಾರಿಗಳು ಇತ್ತ ಮನಸು ಮಾಡುತ್ತಿಲ್ಲ. ಎಲ್ಲಿಯೂ ಲಘು ಕೆಲಸ ಖಾಲಿ ಇಲ್ಲ ಎಂದು ಸಾಬೂಬು ಹೇಳಿಕೊಂಡು ನೌಕರರು ಹಾಗೂ ಅವರ ಕುಟುಂಬದವರನ್ನು ಅಲೆದಾಡಿಸುತ್ತಿದ್ದಾರೆ ಎಂದರು.

ಕಾನೂನು ಹೋರಾಟಕ್ಕೆ ಸಿದ್ಧತೆ :  ಅಂಗವಿಕಲ ನೌಕರರಿಗೆ ಲಘು ಕೆಲಸ ಕಲ್ಪಿಸುವ ನಿಟ್ಟಿನಲ್ಲಿ ಬಿಎಂಟಿಸಿಯ ವಿಳಂಬ ಧೋರಣೆ ವಿರುದ್ಧ ಕಾರ್ಮಿಕ ನ್ಯಾಯಾಲಯದಲ್ಲಿ ಹೋರಾಟ ನಡೆಸಲು ನೌಕರರ ಮುಖಂಡರು ಸಿದ್ಧತೆಯಲ್ಲಿ ತೊಡಗಿದ್ದಾರೆ. ಲಘು ಕೆಲಸ ವಿಚಾರದಲ್ಲಿ ಕಾರ್ಮಿಕ ಕಾನೂನಿನ ಉಲ್ಲಂಘನೆಯಾಗುತ್ತಿರುವ ಬಗ್ಗೆಯೂ ನ್ಯಾಯಾಲಯದ ಗಮನ ಸೆಳೆಯಲು ನಿರ್ಧರಿಸಿದ್ದಾರೆ.