ಕೊಚ್ಚಿ [ಅ.21]: ತನ್ನ ಇಬ್ಬರು ಮಧ್ಯ ವಯಸ್ಕ ಮಕ್ಕಳ ಜತೆ ಬೆಂಗಳೂರಿನ ವೃದ್ಧೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎರ್ನಾಕುಲಂನಲ್ಲಿ ನಡೆದಿದೆ.

ಬೆಂಗಳೂರಿನ ಶಾಸ್ತ್ರಿನಗರ ನಿವಾಸಿಗಳಾದ ರಾಧಾಮಣಿ (69), ಆರ್‌. ಸಂತೋಷ್‌ ಕುಮಾರ್‌ (43) ಹಾಗೂ ಆರ್‌. ಸುರೇಶ್‌ ಕುಮಾರ್‌ (43) ಎಂಬುವವರೇ ಸಾವಿಗೆ ಶರಣಾದವರು. ಮೂಲತಃ ಮಲಯಾಳಿಗಳಾದ ಇವರು, ಬೆಂಗಳೂರಿನಲ್ಲಿ ನೆಲೆಸಿದ್ದರು.

ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುವ ಸಂಬಂಧ ಕೊಚ್ಚಿಗೆ ಆಗಮಿಸಿದ್ದ ಮೂವರು, ಎರ್ನಾಕುಲಂ ರೈಲ್ವೆ ಜಂಕ್ಷನ್‌ ಸಮೀಪವಿರುವ ಲಾಡ್ಜ್‌ವೊಂದರಲ್ಲಿ ತಂಗಿದ್ದರು. ಸುರೇಶ್‌ ಹೆಸರಿನಲ್ಲಿ ಅ.14ರಂದು ಎರಡು ದಿನಗಳ ಮಟ್ಟಿಗೆ ರೂಂ ಬಾಡಿಗೆ ಪಡೆಯಲಾಗಿತ್ತು. ಇನ್ನೆರಡು ದಿನಗಳ ಕಾಲ ರೂಂನಲ್ಲಿ ವಾಸ್ತವ್ಯ ಮುಂದುವರಿಸುವುದಾಗಿ ಹೇಳಿದ್ದರು. ಅವರು ಖಾಲಿ ಮಾಡದ ಹಿನ್ನೆಲೆಯಲ್ಲಿ ಲಾಡ್ಜ್‌ ಸಿಬ್ಬಂದಿ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ಪರಿಶೀಲಿಸಿದಾಗ ಕಿಟಕಿಯಿಂದ ದುರ್ವಾಸನೆ ಬರುತ್ತಿತ್ತು. ಒಳಗೆ ಹೋಗಿ ನೋಡಿದಾಗ ಮೂರೂ ದೇಹಗಳು ಪತ್ತೆಯಾಗಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೋಣೆಯಲ್ಲಿ 2 ಖಾಲಿ ಕೀಟನಾಶಕದ ಬಾಟಲಿಗಳು ಸಿಕ್ಕಿವೆ. ಹೀಗಾಗಿ ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಪೊಲೀಸರು ತಿಳಿಸಿದ್ದಾರೆ.