ಅನಧಿಕೃತವಾಗಿ ಪಟಾಕಿ ಅಂಗಡಿ ಇಟ್ಟಿರುವುದು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ತೆರವಿಗೆ ಕ್ರಮ ಕೈಗೊಳ್ಳಿ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಬೆಂಗಳೂರು [ಅ.20]: ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಪಟಾಕಿ ಅಂಗಡಿ ಇಟ್ಟಿರುವುದು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ತೆರವಿಗೆ ಕ್ರಮ ಕೈಗೊಳ್ಳಿ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದೀಪಾವಳಿ ಹಬ್ಬದ ಅಂಗವಾಗಿ ಆಟದ ಮೈದಾನಗಳಲ್ಲಿ ಪಟಾಕಿ ಮಳಿಗೆ ಸ್ಥಾಪಿಸಲು ಅನುಮತಿ, ಸ್ವಚ್ಛತೆ ಹಾಗೂ ಮುಂಜಾಗೃತಾ ಕ್ರಮಗಳ ಕುರಿತು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಹಾಗೂ ಹೆಚ್ಚುವರಿ ಪೊಲೀಸ್‌ ಆಯುಕ್ತ (ಆಡಳಿತ) ಹೇಮಂತ್‌ ನಿಂಬಾಳ್ಕರ್‌ ಅಧ್ಯಕ್ಷತೆಯಲ್ಲಿ ಶನಿವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಆಯುಕ್ತ ಅನಿಲ್‌ಕುಮಾರ್‌, ನಗರದ ಆಟದ ಮೈದಾನಗಳಲ್ಲಿ ಪಟಾಕಿ ಮಳಿಗೆ ಸ್ಥಾಪಿಸುವುದಕ್ಕೆ ಅವಕಾಶ ಮಾಡಿಕೊಡಬೇಕು. ಕಾನೂನು ಬಾಹಿರವಾಗಿ ಮಳಿಗೆ ಸ್ಥಾಪಿಸುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಿ. ಪೊಲೀಸ್‌ ಇಲಾಖೆಯಿಂದ ಪಟಾಕಿ ಮಳಿಗೆಗೆ ನೀಡಲಾದ ಪರವಾನಗಿ ಪಟ್ಟಿಪಡೆಯಿರಿ. ಅನಧಿಕೃತವಾಗಿ ಮಳಿಗೆ ಸ್ಥಾಪನೆ ಮತ್ತು ಮಾರಾಟಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಆಟದ ಮೈದಾನಗಳ ಪ್ರವೇಶ ಹಾಗೂ ನಿರ್ಗಮನ ದ್ವಾರದಲ್ಲಿ ಪಟಾಕಿ ಮಳಿಗೆ ನಿರ್ಮಿಸಲು ಅವಕಾಶ ಕೊಡಬೇಡಿ. ಮೈದಾನದ ಸುತ್ತ ಮುತ್ತ ಅಗ್ನಿಶಾಮಕ ವಾಹನದ ಸಂಚಾರಕ್ಕೆ ವ್ಯವಸ್ಥೆ ಮಾಡಿ. ಬೀದಿ ದೀಪ, ಸಿಸಿ ಕ್ಯಾಮೆರಾ ಅಳವಡಿಸಿ ಎಂದು ಸೂಚಿಸಿದರು.

ಪಟಾಕಿ ಮಳಿಗೆ ಇರುವ ಕಡೆ ತುರ್ತು ಚಿಕಿತ್ಸೆ, ಆ್ಯಂಬುಲೆನ್ಸ್‌, ಅಗ್ನಿಶಾಮಕ ದಳ, ವೈದ್ಯರು, ಪೊಲೀಸ್‌ ಇಲಾಖೆ ಹಾಗೂ ಪಾಲಿಕೆ ನಿಯಂತ್ರಣ ಕೊಠಡಿ ಸೇರಿದಂತೆ ಅವಶ್ಯಕತೆ ಇರುವ ವಿವರ ಹಾಗೂ ದೂರವಾಣಿ ಸಂಖ್ಯೆಯ ಫಲಕ ಅಳವಡಿಸಿ. ವ್ಯಾಪಾರಿಗಳಿಗೆ ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಸೂಚನೆ ಕೊಡಿ ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್‌ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಮಾತನಾಡಿ, ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿತದಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತವೆ. ಹಾಗಾಗಿ, ಆಸ್ಪತ್ರೆಗಳಲ್ಲಿ ಅಗತ್ಯವಿರುವ ಔಷಧಿ ಸಂಗ್ರಹಿಸಿ. ಜತೆಗೆ, ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಎಂದು ಹೇಳಿದರು.

ಈ ವೇಳೆ ಬಿಬಿಎಂಪಿ ವಿಶೇಷ ಆಯುಕ್ತರಾದ ರಂದೀಪ್‌, ಎಂ.ಲೋಕೇಶ್‌, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಸೈಯದ್‌ ಖಾಜ ಮೊದಲಾದವರು ಉಪಸ್ಥಿತರಿದ್ದರು.