Life Imprisonment on Victim Birthday Father Celebrates Justice for Slain Son Siddharth with Police 2018ರಲ್ಲಿ ಬೆಂಗಳೂರಿನಲ್ಲಿ ನಡೆದ ಸಿದ್ಧಾರ್ಥ್ ಕೊಲೆ ಪ್ರಕರಣದಲ್ಲಿ, ಆರೋಪಿಗಳಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಬೆಂಗಳೂರು (ನ.4): ಕಾಕತಾಳೀಯ ಎನ್ನುವಂತೆ ಕೊಲೆಯಾದ ವ್ಯಕ್ತಿಯ ಬರ್ತ್‌ಡೇ ದಿನವೇ ಕೋರ್ಟ್‌ ಆತನನ್ನು ಕೊಲೆ ಮಾಡಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ತನ್ನ ಮಗನನ್ನು ಕೊಂದ ವ್ಯಕ್ತಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಕುಣಿದು ಕುಪ್ಪಳಿಸಿದ ತಂದೆ ಇದಕ್ಕೆ ಕಾರಣರಾದ ಪೊಲೀಸ್‌ ಸಿಬ್ಬಂದಿಗಳಿಗೆ ಸಿಹಿ ಹಂಚಿ ಸಂಭ್ರಮಪಟ್ಟಿದ್ದಾರೆ. 2018ರಲ್ಲಿ ಬೆಂಗಳೂರಿನಲ್ಲಿ ಸಿದ್ಧಾರ್ಥ್‌ ಎನ್ನುವ ವ್ಯಕ್ತಿಯ ದಾರುಣ ಕೊಲೆಯಾಗಿತ್ತು. ಇದರ ಬೆನ್ನಲ್ಲಿಯೇ ಬೆಂಗಳೂರಿನ ಮೈಕೋ ಲೇ ಔಟ್‌ ಪೊಲೀಸರು ಅತ್ಯಂತ ಕಟ್ಟುನಿಟ್ಟಾದ ತನಿಖೆ ನಡೆಸಿದ್ದರು.

ಪಾಟ್ನಾ ಮೂಲದ ಸಿದ್ದಾರ್ಥ್‌ ಎನ್ನುವ ವ್ಯಕ್ತಿಯನ್ನು 2018ರ ಜುಲೈನಲ್ಲಿ ಕೊಲೆ ಮಾಡಲಾಗಿತ್ತು. ಬೈಕ್‌ ಟಚ್‌ ಆಗಿರುವ ವಿಚಾರಕ್ಕೆ ಗಲಾಟೆ ಮಾಡಿದ್ದ ವ್ಯಕ್ತಿಗಳು ಬಳಿಕ ಸಿದ್ಧಾರ್ಥ್‌ನನ್ನು ಕೊಲೆ ಮಾಡಿದ್ದರು. ಸಿದ್ದಾರ್ಥನ ತಲೆಯ ಭಾಗಕ್ಕೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿತ್ತು. ಆರೋಪಿಗಳಾದ ಗಿರೀಶ್ ಹಾಗೂ ಮಹೇಶನನ್ನು ಪೊಲೀಸರು ತಕ್ಷಣವೇ ಬಂಧಿಸಿದ್ದರು. CCH 59 ರಲ್ಲಿ ಇಡೀ ಕೇಸ್‌ನ ವಿಚಾರಣೆ ನಡೆದಿತ್ತು. ಸಾಕ್ಷ್ಯಾಧಾರಗಳನ್ನ ಕಲೆಹಾಕಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು.

ಅ.24 ರಂದು ಶಿಕ್ಷೆ ಪ್ರಕಟ ಮಾಡಿದ ಕೋರ್ಟ್‌

ಇದೀಗ ಕೋರ್ಟ್ ಆರೋಪಿಗಳ ಶಿಕ್ಷೆಯ ಪ್ರಮಾಣವನ್ನ ಪ್ರಕಟಿಸಿದ್ದು, ಇಬ್ಬರೂ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ. ಅಕ್ಟೋಬರ್‌ 24 ರಂದು ಸಿದ್ಧಾರ್ಥ್‌ ಜನ್ಮದಿನವಾಗಿತ್ತು. ಅದೇ ದಿನ ಕಾಕತಾಳೀಯ ಎನ್ನುವ ಪ್ರಕರಣದ ತೀರ್ಪನ್ನು ಕೋರ್ಟ್‌ ನೀಡಿದೆ.

ಕೊಲೆಗಾರರಿಗೆ ತಕ್ಕ ಶಾಸ್ತಿಯಾಗಿದೆ ಅಂತ ಇದೀಗ ಕೊಲೆಯಾದ ಸಿದ್ಧಾರ್ಥರ ತಂದೆ ನಿಟ್ಟುಸಿರು ಬಿಟ್ಟಿದ್ದಾರೆ. ಸಿದ್ದಾರ್ಥರ ತಂದೆ ಕೌಶಲೇಂದ್ರ ಪಾಂಡೆಯವರ ಕಣ್ಣೀರಿಗೆ ಇದೀಗ ಉತ್ತರ ಸಿಕ್ಕಿದ್ದು, ಮಗನ ಸಾವಿನ ನೋವಿಗೆ ಇದೀಗ ಉತ್ತರ ಸಿಕ್ಕಿದೆ ಎಂಬ ಸಣ್ಣ ಖುಷಿ ಪಾಂಡೆಯವರ ಕಣ್ಣಾಲೆಯನ್ನ ಒದ್ದೆಯಾಗಿಸಿದೆ.