ಬೆಂಗಳೂರು (ಅ.12) : ಬೈಕ್‌ ಗ್ಯಾರೇಜ್‌ ತೆರೆಯಲು ಕಳ್ಳತನಕ್ಕೆ ಇಳಿದಿದ್ದ ಆರೋಪಿಯೊಬ್ಬ ಬ್ಯಾಟರಾಯನಪುರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕೆಂಗೇರಿ ಸಮೀಪದ ಚೆಟ್ಟುಪಾಳ್ಯ ನಿವಾಸಿ ತೌಸಿಫ್‌ ಪಾಷಾ (28) ಬಂಧಿತ. ಈತನೊಂದಿಗೆ ಕಳವು ಕೃತ್ಯಕ್ಕೆ ಸಹಕರಿಸಿದ್ದ ಸುರೇಂದ್ರ ಕುಮಾರ್‌ (30) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಗಳಿಂದ .40 ಲಕ್ಷ ಮೌಲ್ಯದ 5 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೆಕ್ಯಾನಿಕ್‌ ಆಗಿದ್ದ ತೌಸಿಫ್‌ ಪಾಷಾ ಶಿವಾಜಿನಗರದ ಗ್ಯಾರೇಜ್‌ವೊಂದರಲ್ಲಿ ಹಲವು ವರ್ಷಗಳಿಂದ ಕೆಲಸಕ್ಕಿದ್ದ. ಇದೇ ಗ್ಯಾರೇಜ್‌ನಲ್ಲಿ ಸುರೇಂದ್ರ ಕುಮಾರ್‌ ಭದ್ರತಾ ಸಿಬ್ಬಂದಿಯಾಗಿದ್ದ. ಕ್ಷುಲ್ಲಕ ಕಾರಣಕ್ಕೆ ಇಬ್ಬರು ಮೆಕ್ಯಾನಿಕ್‌ ಮಾಲಿಕನ ಜತೆ ಜಗಳ ಮಾಡಿಕೊಂಡು ಕೆಲಸ ಬಿಟ್ಟಿದ್ದರು. ಬಳಿಕ ತೌಸಿಫ್‌ ಸ್ವಂತ ಗ್ಯಾರೇಜ್‌ ತೆರೆಯಬೇಕು ಎಂದು ತೀರ್ಮಾನಿಸಿದ್ದ. ಇದಕ್ಕೆ ಹಣ ಹೊಂದಿಸಲು ವಾಹನಗಳನ್ನು ಕಳವು ಮಾಡಲು ಮುಂದಾಗಿದ್ದ. ಇದಕ್ಕೆ ಸುರೇಂದ್ರನ ನೆರವು ಪಡೆದುಕೊಂಡಿದ್ದ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಂಧಿತರು ವಿಲ್ಸನ್‌ಗಾರ್ಡನ್‌, ಸಂಜಯ್‌ನಗರ ಮತ್ತು ಮೈಸೂರಿನಲ್ಲಿ ನಾಲ್ಕು ಜನರೇಟರ್‌ ವಾಹನ ಹಾಗೂ ಒಂದು ಕಳವು ಮಾಡಿದ್ದರು. ಕದ್ದ ಕಾರುಗಳನ್ನು ಇಟ್ಟುಕೊಳ್ಳಲು ಚೆಟ್ಟುಪಾಳ್ಯದಲ್ಲಿ ಶೆಡ್‌ ಒಂದನ್ನು ಬಾಡಿಗೆಗೆ ಪಡೆದಿದ್ದರು. ಇದೇ ಶೆಡ್‌ನಲ್ಲಿ ಕದ್ದ ವಾಹನಗಳಿಂದ ಬಿಡಿ ಭಾಗಗನ್ನು ಬೇರ್ಪಡಿಸಿ ಮಾರಾಟ ಮಾಡಲು ಮುಂದಾಗಿದ್ದರು. ಅಷ್ಟರಲ್ಲಿ ಮಾಹಿತಿ ತಿಳಿದ ಬ್ಯಾಟರಾಯನಪುರ ಠಾಣೆ ಪೊಲೀಸರು ಶೆಡ್‌ ಮೇಲೆ ದಾಳಿ ನಡೆಸಿ ಕದ್ದ ವಾಹನಗಳ ಸಮೇತ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.