ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಟ ಧನ್ವೀರ್ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಈ ಧಾವೆಗೆ ಸಂಬಂಧಿಸಿ ದರ್ಶನ್ ಪರ ವಕೀಲರು ಮಾಹಿತಿ ನೀಡಿದ್ದಾರೆ. ಅದರ ಡಿಟೈಲ್ಸ್ ಇಲ್ಲಿದೆ.
ಬೆಂಗಳೂರು: ನಟ ದರ್ಶನ್ ಅವರನ್ನು ನಂಬಿಸಿ ಧನ್ವೀರ್ ಮೋಸ ಮಾಡಿದ್ದಾರೆ. ತಮಗಾದ ದ್ರೋಹವನ್ನ ಕೋರ್ಟ್ನಲ್ಲಿ ಹೇಳಿಕೊಂಡಿದ್ದಾರೆ ಎಂದು ದರ್ಶನ್ ಪರ ವಕೀಲ ರಂಗನಾಥ್ ರೆಡ್ಡಿ ತಿಳಿಸಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದ ಆರೋಪಿ ದರ್ಶನ್ ಕುಟುಂಬ ಹಾಗೂ ನಟ ಧನ್ವೀರ್ ನಡುವಿನ ಗಲಾಟೆ ಈಗ ಕೋರ್ಟ್ ಮೆಟ್ಟಿಲೇರಿದೆ. ತಮ್ಮ ಹಾಗೂ ತಮ್ಮ ಪತ್ನಿಯ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಆಗಲಿ ನನ್ನ ಕುಟುಂಬದ ವಿರುದ್ಧವಾಗಲಿ ಯಾವುದೇ ಹೇಳಿಕೆ ನೀಡಬಾರದೆಂದು ತಡೆ ಕೋರಿ ಧನ್ವೀರ್ ವಿರುದ್ಧ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಸಲ್ಲಿಕೆ ಮಾಡಿದ್ದಾರೆ.
ದರ್ಶನ್ ಪರ ವಕೀಲರು ಹೇಳಿದ್ದೇನು?
ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ದರ್ಶನ ಪರ ವಕೀಲ ರಂಗನಾಥ್ ರೆಡ್ಡಿ.. ಪ್ರತಿವಾದಿ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ಮಾನ್ಯ ಸಿವಿಲ್ ನ್ಯಾಯಾಲಯದ ಮುಂದೆ ನಾವು ಹೋಗಿದ್ದೀವಿ. ದರ್ಶನ್ ಹಾಗೂ ಅವರ ಕುಟುಂಬದ ವಿರುದ್ಧ ಪ್ರತಿವಾದಿಯಿಂದ ತೇಜೋವಧೆ ಆಗುತ್ತಿದೆ. ಇತ್ತೀಚೆಗೆ ನಡೆದ ಬೆಳವಣಿಗೆಯಿಂದ ಅವರಿಗೆ ತುಂಬಾ ನೋವು ಉಂಟಾಗಿದೆ. ಸುಳ್ಳು ಮಾಹಿತಿಯನ್ನು ಕೊಟ್ಟು ಅವರ ಕುಟುಂಬದ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅವರನ್ನು ನೆಗೆಟಿವ್ ಶೇಡ್ ಮಾಡುವ ರೀತಿಯಲ್ಲಿ ಮಾತನಾಡಬಾರದು. ಹೀಗಾಗಿ ನಿರ್ಬಂಧಕಾಜ್ಞೆ ಅರ್ಜಿಯನ್ನು ಸಲ್ಲಿಸಲಾಗಿದೆ. ದರ್ಶನ್ ಹೊರಗಡೆ ಬರುವಂತದ್ದು ವಿಜಯಲಕ್ಷ್ಮಿಗೆ ಇಷ್ಟ ಇಲ್ಲ ಎಂಬ ಹೇಳಿಕೆಯನ್ನೂ ಗಂಭೀರವಾಗಿ ಪರಿಗಣಿಸಲಾಗಿದೆ. ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಇಬ್ಬರೂ ಸೇರಿ ಈ ದಾವೆಯನ್ನು ಸಲ್ಲಿಸಿದ್ದಾರೆ. ಇದೆಲ್ಲಾ ಸತ್ಯಕ್ಕೆ ದೂರವಾದ ಮಾತು. ಇದೆಲ್ಲಾ ಊಹಾಪೋಹ ದರ್ಶನ್ ಅವರೇ ಖುದ್ದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಆಗಿನಿಂದಲೂ ದರ್ಶನ್ ಪತ್ನಿಯವರೇ ಕಾನೂನು ಹೋರಾಟ ಮಾಡ್ತಾ ಇದ್ದಾರೆ. ಯಾರನ್ನಾದರೂ ಸರಿ ಕಾನೂನಾತ್ಮಕವಾಗಿ ಮಾತ್ರ ಒಳಗೆ ಇರಿಸಲು ಸಾಧ್ಯ. ಮಾಫಿ ಸಾಕ್ಷಿ ಹಿಂದೆ ವಿಜಯಲಕ್ಷ್ಮಿ ಕೈವಾಡ ಊಹಾಪೋಹ ವಿಚಾರಕ್ಕೆ ಪ್ರತಿಕ್ರಿಯಿಸಿ.. ಇದು ಕೂಡ ಸತ್ಯಕ್ಕೆ ದೂರವಾದಂಥ ಮಾತು. ಅವರು ನ್ಯಾಯಾಲಯದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ದರ್ಶನ್ ಅವರನ್ನು ನಂಬಿಸಿ ಧನ್ವೀರ್ ಮೋಸ ಮಾಡಿದ್ದಾರೆ. ತಮಗಾದ ದ್ರೋಹವನ್ನ ದರ್ಶನ್ ದಾವೆಯಲ್ಲಿ ಹೇಳಿಕೊಂಡಿದ್ದಾರೆ. ಹಣದ ಬಗ್ಗೆ ದಾವೆಯಲ್ಲಿ ಪ್ರಸ್ತಾಪ ಆಗಿಲ್ಲ. ದುಡ್ಡಿಗೂ ಈ ದಾವೆಗೂ ಯಾವುದೇ ಸಂಬಂಧ ಇಲ್ಲ ಎಂದು ದರ್ಶನ್ ಪರ ವಕೀಲರು ಸ್ಪಷ್ಟಪಡಿಸಿದ್ದಾರೆ.
ಧನ್ವೀರ್ ವಿರುದ್ಧ ದರ್ಶನ್ ಆರೋಪ
ಅರ್ಜಿಯಲ್ಲಿ ನಟ ಧನ್ವೀರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ದರ್ಶನ್, ನನ್ನ ಅಭಿಮಾನಿಗಳ ಬೆಂಬಲದಿಂದ ಧನ್ವೀರ್ ಬೆಳೆದಿದ್ದಾನೆ. ಈಗ ನನ್ನ ಮತ್ತು ನನ್ನ ಪತ್ನಿಯ ಮರ್ಯಾದೆಯನ್ನು ಹರಾಜು ಹಾಕುತ್ತಿದ್ದಾನೆ. ನನ್ನ ಹೆಸರನ್ನು ಬಳಸಿಕೊಂಡು ಬೆಳೆದು, ಕೊನೆಗೆ ನನ್ನ ಕುಟುಂಬದ ಬೆನ್ನಿಗೇ ಚೂರಿ ಹಾಕುವ ಕೆಲಸ ಮಾಡಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರದೋಷ್ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಪತ್ನಿಯ ಮೇಲೆ ಧನ್ವೀರ್ ಮಾಡಿರುವ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ಸುಳ್ಳು ಎಂದು ದರ್ಶನ್ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದು. ಧನ್ವೀರ್ ನೀಡುತ್ತಿರುವ ಬೇಜವಾಬ್ದಾರಿ ಹೇಳಿಕೆಗಳಿಂದಾಗಿ ತಮ್ಮ ಪತ್ನಿಯ ಚಾರಿತ್ರ್ಯ ಹರಣವಾಗುತ್ತಿದ್ದು, ತೀವ್ರ ಮಾನಸಿಕ ನೆಮ್ಮದಿ ಹಾಳಾಗಿದೆ ಎಂದು ಕೋರ್ಟ್ಗೆ ತಿಳಿಸಿದ್ದಾರೆ.






