ಬೆಂಗಳೂರು [ಅ.16]:  ಇತ್ತೀಚೆಗೆ ತಮಿಳುನಾಡಿನ ತಿರುಚಿರಾಪಳ್ಳಿಯ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಗೆ ಕನ್ನ ಹಾಕಿ ದೋಚಿದ ಬಳಿಕ ನದಿ ದಡದಲ್ಲಿ ಹೂತಿಟ್ಟಿದ್ದ 5 ಕೋಟಿ ರು. ಮೌಲ್ಯದ 12 ಕೆ.ಜಿ. ಚಿನ್ನಾಭರಣಗಳನ್ನು ನಗರದ ಪೊಲೀಸರು ಜಪ್ತಿ ಮಾಡಿದ್ದಾರೆ.

ತಿರುಚಿರಾಪಳ್ಳಿಯಲ್ಲಿ ಅ.2ರಂದು ಲಿಲಿತಾ ಜ್ಯುವೆಲ​ರ್ಸ್ ಮಳಿಗೆಯ ಗೋಡೆ ಕೊರೆದು ಕುಖ್ಯಾತ ಮನೆಗಳ್ಳ ಮುರುಗನ್‌ನ ತಂಡವು 30 ಕೆ.ಜಿ. ಚಿನ್ನ, ವಜ್ರ, ಪ್ಲಾಟಿನಂ ಸೇರಿದಂತೆ ಒಟ್ಟು 12.55 ಕೋಟಿ ಮೌಲ್ಯದ ಆಭರಣ ದೋಚಿ ಪರಾರಿಯಾಗಿತ್ತು. ನಂತರ ಎನ್‌ಕೌಂಟರ್‌ ಭೀತಿಯಿಂದ ಮುರುಗನ್‌ ಬೆಂಗಳೂರಿನ 11ನೇ ಎಸಿಎಂಎಂ ಕೋರ್ಟ್‌ ಮುಂದೆ ಶರಣಾಗಿದ್ದ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಳಿಕ ಆತನನ್ನು ಕಳ್ಳತನ ಪ್ರಕರಣದಲ್ಲಿ ವಶಕ್ಕೆ ಪಡೆದ ಆಗ್ನೇಯ ವಿಭಾಗದ ಬೊಮ್ಮನಹಳ್ಳಿ ಪೊಲೀಸರು, ತಿರುಚಿರಾಪಳ್ಳಿಯ ಲಲಿತಾ ಜ್ಯುವೆಲ​ರ್ಸ್ ಮಳಿಗೆಯ ಕನ್ನ ಪ್ರಕರಣದ ಕುರಿತು ಮಾಹಿತಿ ಕಲೆ ಹಾಕಿದ್ದರು. ಜ್ಯುವೆಲರಿಯಲ್ಲಿ ಬಂಗಾರ ದೋಚಿದ ಬಳಿಕ ಮುರುಗನ್‌ ಹಾಗೂ ಆತನ ಸಹಚರರು ಕಳ್ಳತನದ ವಸ್ತುಗಳನ್ನು ಹಂಚಿಕೊಂಡಿದ್ದರು. ಅದರಂತೆ ತನ್ನ ಪಾಲಿಗೆ ಬಂದಿದ್ದ 5 ಕೋಟಿ ರು. ಮೌಲ್ಯದ 12 ಕೆ.ಜಿ. ಚಿನ್ನ, ವಜ್ರ ಹಾಗೂ ಪ್ಲಾಟಿನಂ ಆಭರಣಗಳನ್ನು ಆತ ತಿರುಚ್ಚಿಯ ಕಾವೇರಿ ನದಿ ದಡದಲ್ಲಿ ಗುಂಡಿ ತೆಗೆದು ಹೂತಿಟ್ಟಿದ್ದ. ಅದನ್ನು ಹೊರತೆಗೆಸಿ ಜಪ್ತಿ ಮಾಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ತಮಿಳುನಾಡು ಪೊಲೀಸರ ವಶದಲ್ಲಿರುವ ಮುರುಗನ್‌ ಸಹಚರರಾದ ಸತೀಶ್‌ ಮತ್ತು ಗಣೇಶ್‌ನಿಂದ ತಲಾ 6 ಕೆ.ಜಿ. ಚಿನ್ನವನ್ನು ಆ ರಾಜ್ಯದ ಪೊಲೀಸರು ಜಪ್ತಿ ಮಾಡಿದ್ದಾರೆ. ಹೀಗಾಗಿ ಒಟ್ಟಾರೆ ಲಲಿತಾ ಜ್ಯುವೆಲ​ರ್ಸ್ ಲ್ಲಿ ಕಳುವಾಗಿದ್ದ 30 ಕೆ.ಜಿ. ಚಿನ್ನದ ಪೈಕಿ 24 ಕೆ.ಜಿ. ಚಿನ್ನ, 31 ಕೆ.ಜಿ. ಬೆಳ್ಳಿ ವಸ್ತುಗಳು ಹಾಗೂ 19 ಲಕ್ಷ ರು. ನಗದನ್ನು ಸ್ವಾಧೀನಕ್ಕೆ ತೆಗೆದುಕೊಂಡಂತಾಗಿದೆ. ಇನ್ನು ಮುರುಗನ್‌ ತಂಡದಿಂದ ಇತರೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ 15 ಕೆ.ಜಿ. ಚಿನ್ನವನ್ನು ಜಪ್ತಿ ಮಾಡಿಕೊಳ್ಳಬೇಕಿದ್ದು, ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಕಳ್ಳತನಕ್ಕೆ ಮುರುಗನ್‌ ಕುಖ್ಯಾತ

ಕಳ್ಳತನ ಕೃತ್ಯಗಳಿಂದ ಕುಖ್ಯಾತಿ ಪಡೆದಿರುವ ಮುರುಗನ್‌, ಅ.2ರಂದು ತಿರುಚಿರಾಪಳ್ಳಿಯ ಸುಪ್ರಸಿದ್ಧ ಲಲಿತಾ ಜ್ಯುವೆಲ​ರ್ಸ್ ಮಳಿಗೆಗೆ ಕನ್ನ ಹಾಕಿದ್ದ. ತನ್ನ ಅಕ್ಕನ ಮಗ ಸುರೇಶ್‌ ಹಾಗೂ ಗಣೇಶನ ಜತೆ ಸೇರಿ ಆತ ಮಳಿಗೆಯ ಗೋಡೆ ಕೊರೆದು 12.55 ಕೋಟಿ ರು. ಮೌಲ್ಯದ ಆಭರಣಗಳನ್ನು ದೋಚಿದ್ದ. ಕಳ್ಳತನದ ವೇಳೆ ನಾಯಿ ಹಾಗೂ ಬೆಕ್ಕಿನ ಮುಖವಾಡ ಮತ್ತು ಕೈಗವಸು ಧರಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಸ್ಥಳೀಯ ಪೊಲೀಸರು, ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಮುರುಗನ್‌ ತಂಡದ ಮೇಲೆ ಶಂಕೆಗೊಂಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಮುರುಗನ್‌ನ ಕೆಲ ಸಹಚರರನ್ನು ಸೆರೆಹಿಡಿದಿದ್ದರು. ಅವರು ನೀಡಿದ ಸುಳಿವಿನ ಮೇರೆಗೆ ಮುರುಗನ್‌ನ ಬೆನ್ನುಹತ್ತಿದ್ದರು. ಅಷ್ಟರಲ್ಲಿ ತಮ್ಮ ಮೇಲೆ ಗುಂಡಿನ ದಾಳಿ ನಡೆಯಬಹುದು ಎಂದು ಆತಂಕಗೊಂಡ ಮುರುಗನ್‌ ಹಾಗೂ ಆತನ ಸೋದರ ಸಂಬಂಧಿ ಸುರೇಶ್‌, ನ್ಯಾಯಾಲಯದ ಮುಂದೆ ಶರಣಾಗಲು ನಿರ್ಧರಿಸಿದ್ದರು. ಅದರಂತೆ ಬೆಂಗಳೂರಿನಲ್ಲಿ ತನ್ನ ವಕೀಲರ ಮೂಲಕ ನ್ಯಾಯಾಲಯಕ್ಕೆ ಬಂದು ಮುರುಗನ್‌ ಶರಣಾದರೆ, ಮತ್ತೊಬ್ಬ ಆರೋಪಿ ಸುರೇಶ್‌ ತಿರುಚಿರಾಪಳ್ಳಿಯಲ್ಲೇ ಕೋರ್ಟ್‌ಗೆ ಶರಣಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.