11 ಕೋಟಿ ರು. ಸಾಲ ಮರುಪಾವತಿ ಮಾಡಿಲ್ಲ ಎಂದು ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ್‌ ವಿರುದ್ಧ ಆರೋಪ ಮಾಡಿದ್ದ ಮಹಿಳಾ ಉದ್ಯಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಬೆಂಗಳೂರು [ನ.04]:  ತಮಗೆ 11 ಕೋಟಿ ರು. ಸಾಲ ಮರುಪಾವತಿ ಮಾಡಿಲ್ಲ ಎಂದು ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ್‌ ವಿರುದ್ಧ ಆರೋಪ ಮಾಡಿದ್ದ ಮಹಿಳಾ ಉದ್ಯಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಚಂದ್ರಾ ಲೇಔಟ್‌ ನಿವಾಸಿ ಅಂಜನಾ (35) ಮೃತರು. ಅ.30ರಂದು ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್‌ನಲ್ಲಿ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿಟ್ಟಿದ್ದಾರೆ. ಡೆತ್‌ನೋಟ್‌ನಲ್ಲಿ ಯಾರ ಹೆಸರನ್ನೂ ಉಲ್ಲೇಖ ಮಾಡಿಲ್ಲ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಚಂದ್ರಾ ಲೇಔಟ್‌ ಠಾಣೆ ಪೊಲೀಸರು ಹೇಳಿದ್ದಾರೆ.

ಅಂಜನಾ ಅವರು ತಾವು ನೀಡಿದ್ದ ಸಾಲ ಮರುಪಾವತಿಸಲು ಚಿಂಚನಸೂರ್‌ ನೀಡಿದ್ದ ಚೆಕ್‌ ಬೌನ್ಸ್‌ ಆಗಿದೆ ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಮಗನಿಗೆ ತಿಳಿಸಿ ಆತ್ಮಹತ್ಯೆ:

ಅ.30ರಂದು ಅಂಜನಾ ಅವರ ಪುತ್ರ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದರು. ಈ ವೇಳೆ ಪುತ್ರನಿಗೆ ಕರೆ ಮಾಡಿದ್ದ ಅಂಜನಾ, ‘ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಅಂತ್ಯಕ್ರಿಯೆಯನ್ನು ನೀನೇ ಮಾಡಬೇಕು’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದರು. ಪುತ್ರ ಮತ್ತು ಸಂಬಂಧಿಕರು ಆತಂಕದಿಂದ ಮನೆಗೆ ಬಂದು ನೋಡುವಷ್ಟರಲ್ಲಿ ಅಂಜನಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತರ ಪುತ್ರ ಕೊಟ್ಟದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಡೆತ್‌ನೋಟ್‌ ಮತ್ತು ಅಂಜನಾ ಬಳಸುತ್ತಿದ್ದ ಮೊಬೈಲನ್ನು ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಇತ್ತೀಚೆಗೆ ಅಂಜನಾ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಇದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ಒಂದೇ ಆಸ್ತಿ ಮೇಲೆ ಮೃತರು ಎರಡು ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಈ ಬಗ್ಗೆ ಬ್ಯಾಂಕ್‌ನವರು ಕಬ್ಬನ್‌ ಪಾರ್ಕ್ ಮತ್ತು ಚಂದ್ರಾ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಎಲ್ಲಾ ಆಯಾಮಾಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ವಿವರಿಸಿದರು.

ನನ್ನ ಆತ್ಮಹತ್ಯೆಗೆ ನಾನೇ ಕಾರಣ:

‘ನಾನು ನಂಬಿದವರು ಬಹಳ ಜನ ವಂಚನೆ ಮಾಡಿದ್ದಾರೆ. ಇದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ನನ್ನ ಆತ್ಮಹತ್ಯೆಗೆ ನಾನೇ ಕಾರಣ. ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ತೆಗೆದುಕೊಂಡಿದ್ದಕ್ಕೆ ನನ್ನ ಪೋಷಕರು ಕ್ಷಮಿಸಬೇಕು’ ಎಂದು ಅಂಜನಾ ಡೆತ್‌ನೋಟ್‌ ಬರೆದಿಟ್ಟಿದ್ದಾರೆ. ಆದರೆ ಡೆತ್‌ನೋಟ್‌ನಲ್ಲಿ ಯಾರೊಬ್ಬರ ಹೆಸರನ್ನೂ ಕೂಡ ಉಲ್ಲೇಖ ಮಾಡಿಲ್ಲ.

ಮಾಜಿ ಸಚಿವರೂ ಆದ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್‌ ಚಿಂಚನಸೂರ್‌ ಅವರು ತಮ್ಮಿಂದ .11 ಕೋಟಿ ಸಾಲ ಪಡೆದು ಹಿಂತಿರುಗಿಸಿಲ್ಲ ಎಂದು ಅಂಜನಾ ಆರೋಪಿಸಿದ್ದಲ್ಲದೇ ಈ ಸಂಬಂಧ ಚೆಕ್‌ ಬೌನ್ಸ್‌ ಪ್ರಕರಣ ದಾಖಲಿಸಿ ಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದರು.