ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೈದರಾಬಾದ್-ಬೆಂಗಳೂರು ಮತ್ತು ಬೆಂಗಳೂರು-ಚೆನ್ನೈ ಹೈಸ್ಪೀಡ್ ರೈಲು ಯೋಜನೆಗಳಿಗೆ ಆಡಳಿತಾತ್ಮಕ ಅಂಗೀಕಾರ ನೀಡಲಾಗಿದೆ. ಇದರೊಂದಿಗೆ, ನವಜಾತ ಶಿಶುಗಳ ತಪಾಸಣಾ ಯೋಜನೆ, ಸೆಮಿಕಂಡಕ್ಟರ್ ಕಂಪನಿಗೆ ಜಮೀನು ಹಂಚಿಕೆಗೂ ಸಂಪುಟ ಒಪ್ಪಿಗೆ ನೀಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು (ಮೇ.1): ಕೇಂದ್ರ ಸರ್ಕಾರದ ಪ್ರಾಯೋಜಿತ ಹೈದರಾಬಾದ್-ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಹಾಗೂ ಬೆಂಗಳೂರು-ಚೆನ್ನೈ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗಳ ಅನುಷ್ಠಾನಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅಂಗೀಕಾರ ನೀಡಲಾಗಿದೆ. ಹೈದರಾಬಾದ್-ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯು 607 ಕಿ.ಮೀ. ಉದ್ದದ ಕಾರಿಡಾರ್ ಆಗಿದ್ದು, ರಾಜ್ಯದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ 101 ಕಿ.ಮೀ. ವ್ಯಾಪ್ತಿಯಲ್ಲಿದೆ.
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ನಿಲುಗಡೆ ಇರಲಿದ್ದು, ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಈ ಯೋಜನೆಗೆ ಆಡಳಿತಾತ್ಮಕ ಹಾಗೂ ಶಾಸನಬದ್ಧ ಅಂಗೀಕಾರವನ್ನು ಸಚಿವ ಸಂಪುಟ ಸಭೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಇದೇ ವೇಳೆ ಬೆಂಗಳೂರು-ಚೆನ್ನೈ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗೂ ಅಂಗೀಕಾರ ನೀಡಲಾಗಿದೆ. ಈ ಯೋಜನೆಯಿಂದ ರಾಜ್ಯದ ಕೋಲಾರ, ಬಂಗಾರಪೇಟೆ, ವೈಟ್‌ಫೀಲ್ಡ್, ಬೈಯಪ್ಪನಹಳ್ಳಿ ಭಾಗಗಳ ನಾಗರಿಕರಿಗೆ ಚೆನ್ನೈ ಪ್ರಯಾಣಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.
ನವಜಾತ ಶಿಶು ತಪಾಸಣೆಗೆ ಯೋಜನೆ
ನವಜಾತ ಶಿಶುಗಳಲ್ಲಿ ಅಪರೂಪದ ಜನ್ಮಜಾತ ಮತ್ತು ಚಯಾಪಚಯ ಅಸ್ವಸ್ಥತೆಗಳನ್ನು ಪತ್ತೆ ಹಚ್ಚಲು ಸಾರ್ವಜನಿಕ ನವಜಾತ ಶಿಶು ತಪಾಸಣೆ (ಯುಎನ್‌ಬಿಎಸ್) ಯೋಜನೆಯನ್ನು ₹55.89 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಜತೆಗೆ ರಾಷ್ಟ್ರೀಯ ಉಚಿತ ಆರೋಗ್ಯ ಪತ್ತೆ (ಡಯಾಗ್ನಸಿಸ್ ಸರ್ವಿಸ್) ಸೇವಾ ಕಾರ್ಯಕ್ರಮದ ಅಡಿ 81 ಕೋಟಿ ರು. ಅಂದಾಜು ವೆಚ್ಚದಲ್ಲಿ 6 ಎಂಆರ್‌ಐ ಯಂತ್ರಗಳನ್ನು ಆರು ಜಿಲ್ಲಾ ಆಸ್ಪತ್ರೆಗಳಿಗೆ ಪೂರೈಸಲು ಆಡಳಿತಾತ್ಮಕ ಅನುಮೋದನೆ ನೀಡಲು ಸಂಪುಟ ತೀರ್ಮಾನಿಸಿದೆ.
ವಿಮಾನ ಸೇವೆಗೆ ವಿಶೇಷ ಪ್ರೋತ್ಸಾಹಧನ
ರಾಜ್ಯದ ಪ್ರಮುಖ ನಗರಗಳ ನಡುವೆ ವಿಮಾನ ಸೇವೆ ನಿರ್ವಹಣೆ ಉತ್ತೇಜಿಸಲು ಸರ್ಕಾರ ಉದ್ದೇಶಿಸಿದೆ. ಅದಕ್ಕಾಗಿ ವಿಶೇಷ ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಗಿದೆ. ಪ್ರಮುಖವಾಗಿ ಬೆಂಗಳೂರು-ಬೀದರ್ -ಬೆಂಗಳೂರು ಹಾಗೂ ಬೆಂಗಳೂರು -ಕಲಬುರಗಿ -ಬೆಂಗಳೂರು ನಡುವೆ ವಿಮಾನ ಸೇವೆ ನಿರ್ವಹಣೆಗೆ ವಾರ್ಷಿಕ 28.47 ಕೋಟಿ ರು. ಪ್ರೋತ್ಸಾಹಧನ ನೀಡಲು ಅಂಗೀಕಾರ ದೊರೆತಿದೆ.
21.35 ಕೋಟಿ ವೆಚ್ಚದಲ್ಲಿ ಗೋಣಿ ಚೀಲ ಖರೀದಿ
2025-26ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಋುತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ ಬಿಳಿ ಜೋಳ ಖರೀದಿಸಲು ಅಗತ್ಯವಿರುವ ಹೆಚ್ಚುವರಿ ಗೋಣಿ ಚೀಲಗಳನ್ನು 21.35 ಕೋಟಿ ರು. ವೆಚ್ಚದಲ್ಲಿ ಖರೀದಿಸಿರುವುದಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್
ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ 1 ರಿಂದ 12ನೇ ತರಗತಿಯಲ್ಲಿರುವ ಶಾಲಾ ಮಕ್ಕಳಿಗೆ ವಿವಿಧ ಲೇಖನ ಸಾಮಗ್ರಿಗಳು ಹಾಗೂ ಪುಸ್ತಕಗಳನ್ನು ಒಳಗೊಂಡ ಶಾಲಾ ಕಿಟ್‌ಗಳನ್ನು ಕಾರ್ಮಿಕ ಇಲಾಖೆಯಿಂದ ವಿತರಿಸಲು 115.84 ಕೋಟಿ ರು. ವೆಚ್ಚಕ್ಕೆ ಸಂಪುಟ ಅಂಗೀಕಾರ ನೀಡಿದೆ. ಪ್ರತಿ ಕಿಟ್‌ಗೆ 8,625 ರು. ವೆಚ್ಚ ಆಗಲಿದ್ದು, ಪುಸ್ತಕ, ನೋಟ್ ಪುಸ್ತಕ, ಪೆನ್, ಪೆನ್ಸಿಲ್ ಸೇರಿದಂತೆ ಶೈಕ್ಷಣಿಕ ಸಾಮಗ್ರಿ ಕಿಟ್‌ನಲ್ಲಿ ಇರಲಿದೆ.
ಸೆಮಿ ಕಂಡಕ್ಟರ್ ಕಂಪೆನಿಗೆ 140 ಎಕರೆ ಜಮೀನು
ಕ್ಯಾಲಿಫೋರ್ನಿಯಾದ ಅಪ್ಲೈಡ್ ಮೆಟೀರಿಯಲ್ಸ್ ಇಂಕಾರ್ಪೊರೇಷನ್ ಕಂಪೆನಿಗೆ ಅತ್ಯಾಧುನಿಕ ತಂತ್ರಜ್ಞಾನದ ಸೆಮಿಕಂಡಕ್ಟರ್ ಸಂಶೋಧನಾ ಕೇಂದ್ರ ಹಾಗೂ ಇನ್ನೋವೇಷನ್ ಇಕೋಸಿಸ್ಟಮ್ ಸ್ಥಾಪಿಸಲು ಬೆಂಗಳೂರಿನ ದೇವನಹಳ್ಳಿ ಬಳಿಯ ಸಿಗ್ನೇಚರ್ ಬ್ಯುಸಿನೆಸ್ ಪಾರ್ಕ್‌ನಲ್ಲಿ 140 ಎಕರೆ ಜಮೀನನ್ನು ಗುತ್ತಿಗೆ ಹಾಗೂ ಮಾರಾಟದ ಆಧಾರದ ಮೇಲೆ ಹಂಚಿಕೆ ಮಾಡಲು ಸಂಪುಟ ನಿರ್ಧರಿಸಿದೆ. ಪ್ರತಿ ಚದರಡಿಗೆ ₹1,288 ನಂತೆ ನಿಗದಿ ಮಾಡಲಾಗಿದೆ. ರಾಜ್ಯ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಅನುಮೋದನೆಗೊಂಡ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ಮಾಹಿತಿ ನೀಡಿದರು.


