ಕೆನಡಾ ಪ್ರಜೆಯೊಬ್ಬರು ಇಂದಿರಾ ನಗರದ ಫುಟ್‌ಪಾತ್‌ಗಳ ದುಸ್ಥಿತಿ ಬಗ್ಗೆ ವಿಡಿಯೋ ಮಾಡಿ ವೈರಲ್ ಆದ ಬಳಿಕ ಪಾಲಿಕೆ ಎಚ್ಚೆತ್ತುಕೊಂಡು ರಿಪೇರಿ ಆರಂಭಿಸಿದೆ. ಲೋಕಾಯುಕ್ತರು ಕೂಡ ಸ್ಥಳ ಪರಿಶೀಲನೆ ನಡೆಸಿ, ತ್ವರಿತವಾಗಿ ಸುರಕ್ಷಿತ ಪಾದಚಾರಿ ಮಾರ್ಗ ನಿರ್ಮಿಸುವಂತೆ ಸೂಚನೆ ನೀಡಿದ್ದಾರೆ.

ಬೆಂಗಳೂರು (ಅ.04): ಬೆಂಗಳೂರಿನ ಪ್ರತಿಷ್ಠಿತ ಜನವಸತಿ ಪ್ರದೇಶಗಳಲ್ಲಿ ಒಂದಾದ ಇಂದಿರಾ ನಗರದಲ್ಲಿ ಪಾದಚಾರಿ ಮಾರ್ಗಗಳ ಅದ್ವಾನ ಸ್ಥಿತಿ ಕುರಿತು ಕೆನಡಾ ದೇಶದ ಪ್ರಜೆಯೊಬ್ಬರು ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೇಂದ್ರ ನಗರ ಪಾಲಿಕೆ ರಿಪೇರಿ ಕೆಲಸ ಆರಂಭಿಸಿದೆ.

ಮತ್ತೊಂದೆಡೆ ಈ ಕುರಿತು ಶನಿವಾರ 'ಕನ್ನಡಪ್ರಭ' ಪ್ರಕಟಿಸಿದ್ದ ವರದಿ ಆಧರಿಸಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತ್ವರಿತವಾಗಿ ಸುರಕ್ಷಿತ ಪಾದಚಾರಿ ಮಾರ್ಗ ನಿರ್ಮಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೆ, ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ಅ.9ರ ಒಳಗೆ ವರದಿ ನೀಡಬೇಕು ಎಂದು ಡಿವೈಎಸ್ಪಿ ವಸಂತ ಅವರ ನೇತೃತ್ವದ ತಂಡಕ್ಕೆ ಲೋಕಾಯುಕ್ತರು ಸೂಚನೆ ನೀಡಿದ್ದಾರೆ.

ರಿಪೇರಿ ಕಾರ್ಯ:

ಇಂದಿರಾ ನಗರದ 12ನೇ ಮುಖ್ಯರಸ್ತೆ ಯುದ್ಧಪೀಡಿತ ಪ್ರದೇಶದಂತಿದೆ. ಕೆಲವೆಡೆ ಫುಟ್‌ಪಾತ್‌ ಸ್ಥಿತಿ ಭೂಮಿಗೆ ಕ್ಷುದ್ರಗ್ರಹ ಅಪ್ಪಳಿಸಿದಾಗ ಉಂಟಾಗುವ ಕುಳಿಯಂತಿದೆ. ಫುಟ್‌ಪಾತ್‌ನಲ್ಲೇ ಗುಂಡಿ, ತ್ಯಾಜ್ಯ ಬಿದ್ದಿದೆ ಎಂದು ತಮ್ಮ ವಿಡಿಯೋದಲ್ಲಿ ಕೆನಡಾ ಪ್ರಜೆ ಫ್ರೆಸನ್ ವಿವರಿಸಿದ್ದರು. ಈ ಹಿನ್ನೆಲೆಯಲ್ಲಿ ಆ ಸ್ಥಳದಲ್ಲಿನ ತ್ಯಾಜ್ಯ ತೆರವು ಮಾಡಿರುವ ಪಾಲಿಕೆ ಸಿಬ್ಬಂದಿ, ಗುಂಡಿಯನ್ನು ಸಿಮೆಂಟ್ ಕಾಂಕ್ರೀಟ್‌ನಿಂದ ಮುಚ್ಚಿದ್ದಾರೆ. ಪುಟ್‌ಪಾತ್‌ನ ಅಲ್ಲಲ್ಲಿ ಬಿದ್ದಿದ್ದ ಕಟ್ಟಡ ತ್ಯಾಜ್ಯ ತೆರವುಗೊಳಿಸಿ ಸ್ಲ್ಯಾಬ್‌ ರಿಪೇರಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ನೇತಾಡುವ ವೈರ್‌ಗಳನ್ನು ತೆರವು ಮಾಡಲಾಗುತ್ತಿದೆ. ಈ ಕುರಿತಾದ ಫೋಟೋವೊಂದನ್ನು ಫ್ರೆಸನ್ ಹಂಚಿಕೊಂಡಿದ್ದಾರೆ.

ವಿದೇಶಿಗ ಹೇಳಿದ ಬಳಿಕ ರಿಪೇರಿ:

ನಗರದ ರಸ್ತೆ, ಫುಟ್‌ಪಾತ್‌ಗಳ ಅದ್ವಾನ ಸ್ಥಿತಿ ಕುರಿತು ಸಾರ್ವಜನಿಕರು ಅನೇಕ ದೂರುಗಳು ನೀಡಿದ್ದರೂ ಏನಾಗಿದೆ ಎಂದು ತಿರುಗಿ ಕೂಡ ನೋಡದ ಪಾಲಿಕೆಯವರು ವಿದೇಶಿ ವ್ಯಕ್ತಿ ವಿಡಿಯೋ ಮಾಡಿದ ಬಳಿಕ ರಿಪೇರಿ ಮಾಡಿದ್ದಾರೆಂದು ಜಾಲತಾಣಗಳಲ್ಲಿ ಟೀಕಿಸಿದ್ದಾರೆ.

ವೈರಲ್ ಆಗಿದ್ದ ವಿಡಿಯೋ:

ನಗರದ ಪ್ರತಿಷ್ಠಿತ ವಸತಿ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಒಂದಾಗಿರುವ ಇಂದಿರಾ ನಗರ 12ನೇ ಮುಖ್ಯರಸ್ತೆಯ ಪಾದಚಾರಿ ಮಾರ್ಗ ಯುದ್ಧಪೀಡಿತ ದೇಶದಂತಿವೆ ಎಂದು ಕೆನಡಾ ದೇಶದ ಪ್ರಜೆ ಫ್ರೆಸನ್ ಎಂಬುವರು ಟೀಕಿಸಿದ್ದಾರೆ. ಪಾದಚಾರಿ ಮಾರ್ಗದ ಅದ್ವಾನ ಸ್ಥಿತಿಯ ವಿಡಿಯೋವನ್ನು ಫ್ರೆಸನ್ ಅವರು ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದು ವೈರಲ್ ಆಗಿದೆ. ಫುಟ್‌ಪಾತ್‌ನ ಅಲ್ಲಲ್ಲಿ ಬಿದ್ದಿರುವ ದೊಡ್ಡ ಗುಂಡಿಗಳ ಕುರಿತು, ‘ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಿದಾಗ ಸೃಷ್ಟಿಯಾಗುವ ಕುಳಿಯಂತೆ ಈ ಗುಂಡಿ ಇದೆ. ಇದರಲ್ಲಿ ಜನರು ಈಗ ಕಸ ಸುರಿಯುತ್ತಿದ್ದಾರೆ. ನಗರದಲ್ಲಿ ತಂತ್ರಜ್ಞಾನ ಕಂಪನಿಗಳ ಸಿಇಒ, ಸಂಸ್ಥಾಪಕರನ್ನು ಭೇಟಿ ಮಾಡಲು ಹೊರ ದೇಶಗಳಿಂದ ಬೆಂಗಳೂರಿಗೆ ಬರುವವರಿಗೆ ಇಂತಹ ಕಳಪೆ ಮೂಲಸೌಕರ್ಯ ನೋಡಿ ನಿರಾಸೆ ಮತ್ತು ಬೇಸರವಾಗುತ್ತದೆ ಎಂದಿದ್ದಾರೆ.

Scroll to load tweet…