ಸೋಮಣ್ಣ ಗೊಂದಲ ಏನು? ಹಾಸನ ಟಿಕೆಟ್‌ ಸೊಸೆಗೆ ಕೊಡಲು ದೇವೇಗೌಡರಿಗೆ ಮನಸ್ಸಿಲ್ಲವೇ?

ಬಿಜೆಪಿಯಲ್ಲೀಗ ಮೂರು ಗುಂಪುಗಳಾಗಿವೆ. ಬಿಎಸ್‌ವೈ ಒಂದು ಗುಂಪು, ಬೊಮ್ಮಾಯಿ ಇನ್ನೊಂದು ಗುಂಪು, ಸಂತೋಷ್‌ ಮತ್ತೊಂದು ಗುಂಪು. ಮೋದಿ ಮತ್ತು ಅಮಿತ್‌ ಶಾ ರಾಜ್ಯಕ್ಕೆ ಬಂದಾಗ ಮಾತ್ರ ಮೂರು ಗುಂಪುಗಳು ಒಟ್ಟಿಗೇ ಕೆಲಸ ಮಾಡುತ್ತವೆ. ಆದರೆ ಅವರು ಇಲ್ಲದೇ ಇದ್ದಾಗ ಮನೆಯೊಂದು ಮೂರು ಬಾಗಿಲು. ಇದಕ್ಕೆಲ್ಲ ಫುಲ್‌ಸ್ಟಾಪ್‌ ಹಾಕುವಂತೆ ಧರ್ಮೇಂದ್ರ ಪ್ರಧಾನ್‌ಗೆ ಅಮಿತ್‌ ಶಾ ಸೂಚಿಸಿದ್ದಾರೆ.'

India Gate what is somanna confusion why devegowda opposing daughter in law bhavani competition and why bjp silent on corrupted madal virupakshappa akb

ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಕೂಡ ಭ್ರಷ್ಟಾಚಾರ ಇವತ್ತು ಸರ್ಕಾರಿ ವ್ಯವಸ್ಥೆಯ ಎಲ್ಲ ಅವಯವಗಳಲ್ಲೂ ಧಮನಿ ಧಮನಿಗಳಲ್ಲೂ ಹರಿಯುತ್ತಿದೆ ಎಂಬುದು ಒಂದು ಬಹಿರಂಗ ರಹಸ್ಯ. ಹೀಗಾಗಿ ಇವತ್ತಿನ ಸ್ಥಿತಿ ಏನಪ್ಪಾ ಎಂದರೆ ಸಿಕ್ಕಿ ಹಾಕಿಕೊಂಡವರಷ್ಟೇ ಭ್ರಷ್ಟರು. ಉಳಿದಂತೆ ಲಂಚ ಹೊಡೆದು ತಂದು ಕಮಾಯಿಸಿದ ಹಣದಲ್ಲಿ ಬಾಡೂಟ, ಕುಕ್ಕರು, ಮಿಕ್ಸರು, ಉಂಗುರ, ಬೆಳ್ಳಿ ಲೋಟ, ಎಣ್ಣೆ ಪಾರ್ಟಿ ಹೀಗೆ ಎಲ್ಲವೂ ಸಂಭ್ರಮದಿಂದ ನಡೆಯುತ್ತಲೇ ಇರುತ್ತದೆ. ಹೀಗಾಗಿ ವಿಪರ್ಯಾಸ ನೋಡಿ, 40 ಲಕ್ಷ ರು. ಹಣ ತೆಗೆದುಕೊಳ್ಳುವಾಗ ಸ್ವತಃ ಮಾಡಾಳು ಪುತ್ರ ಸಿಕ್ಕಿಹಾಕಿಕೊಂಡರೂ ಕೂಡ ಬಿಜೆಪಿಗೆ ಮಾಡಾಳು ವಿರೂಪಾಕ್ಷಪ್ಪ ಮೇಲೆ ಕನಿಷ್ಠ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಅನ್ನಿಸುವುದಿಲ್ಲ. ಇದಕ್ಕೆ ಹಲವು ಕಾರಣಗಳು: 1.ಕರ್ನಾಟಕದ ಚುನಾವಣೆಗಳಲ್ಲಿ ಭ್ರಷ್ಟಾಚಾರ ವಿಷಯವೇ ಆಗುವುದಿಲ್ಲ, ಜನರ ನೆನಪಿನ ಶಕ್ತಿ ಕಡಿಮೆ ಎಂದು ನಾಯಕರಿಗೆ ಅನ್ನಿಸಿಬಿಟ್ಟಿದೆ. 2.ಸಾದರ ಲಿಂಗಾಯತ ಉಪ ಪಂಗಡಕ್ಕೆ ಸೇರಿದ ಮಾಡಾಳು ಮೇಲೆ ಕ್ರಮ ತೆಗೆದುಕೊಂಡರೆ ಚುನಾವಣೆಯಲ್ಲಿ ಸಾದರು ಮುನಿಸಿಕೊಂಡಾರು, ಮಧ್ಯ ಕರ್ನಾಟಕದಲ್ಲಿ ನಷ್ಟಆದೀತು ಎಂಬ ಭೀತಿ. 3.ರಾಜ್ಯ ಬಿಜೆಪಿಯಲ್ಲಿ ಕೆಲವರು ಕಠಿಣ ಕ್ರಮ ಅನಿವಾರ್ಯ ಎಂದರೆ ಇನ್ನು ಕೆಲವರು ಗಡಿಬಿಡಿ ಬೇಡ ಸುಮ್ಮನಿರೋಣ ಎಂದು ಅಭಿಪ್ರಾಯ ಹೇಳಿದ್ದಾರೆ. ಯಾರು ಏನೇ ಹೇಳಲಿ, ಕೋಟಿ ಕೋಟಿ ಹಣ ಸಮೇತ ಸಿಕ್ಕಿಬಿದ್ದು ಮಾಡಾಳು ಕುಟುಂಬ ಮಾಡಿರುವ ಮುಜುಗರ ಅಳಿಸಿಹಾಕುವುದು ಚುನಾವಣೆಯ ಹೊಸ್ತಿಲಲ್ಲಿ ರಾಜ್ಯ ಬಿಜೆಪಿಗೆ ಅಷ್ಟೊಂದು ಸುಲಭವಲ್ಲ. ಒಂದು ಕಡೆಯಿಂದ ಮೋದಿ ಕಸ ಗುಡಿಸಿದರೆ ಇನ್ನೊಂದು ಕಡೆಯಿಂದ ಕಸ ಚೆಲ್ಲುತ್ತಾ ಬರುವುದು ಕೆಲ ನಾಯಕರಿಗೆ ಅಭ್ಯಾಸವಾಗಿಬಿಟ್ಟಿದೆ.

ಬಿಜೆಪಿಯ 4 ವಿಧದ ಮತದಾರರು

ಕರ್ನಾಟಕದ ಬಿಜೆಪಿ ಮತದಾರಲ್ಲಿ ನಾಲ್ಕು ಗುಂಪುಗಳಿವೆ. 1.ಬರೀ ಹಿಂದುತ್ವದ ಆಧಾರದ ಮೇಲೆ ವೋಟು ನೀಡುವವರು. 2.ಅಭ್ಯರ್ಥಿ ಮುಖ ಮತ್ತು ಕೆಲಸ ನೋಡಿ ವೋಟು ನೀಡುವವರು. 3.ಜಾತಿ ಮೇಲೆ ವೋಟು ಹಾಕುವವರು. 4.ಮೋದಿ ಇಮೇಜ್‌ ಕಾರಣಕ್ಕೆ ಮಾತ್ರ ವೋಟು ಹಾಕುವವರು. ಇವತ್ತಿನ ಸ್ಥಿತಿಯಲ್ಲಿ ಮಧ್ಯ ಕರ್ನಾಟಕದಲ್ಲಿ ಸಾದರು ಬಿಟ್ಟುಹೋದರೆ ಎಂಬ ಹೆದರಿಕೆಯಿಂದ ಬಿಜೆಪಿ ಮಾಡಾಳು ಮೇಲೆ ಶಿಸ್ತು ಕ್ರಮಕ್ಕೆ ಹಿಂದೇಟು ಹಾಕಿತು ಎಂಬುದು ಸ್ಪಷ್ಟ. ಆದರೆ ಮೋದಿಯವರ ಸ್ವಚ್ಛ ಇಮೇಜ್‌ ನೋಡಿ ವೋಟು ಹಾಕುವ ಬಿಜೆಪಿ ಮತದಾರರು ಇದರಿಂದ ಬೇಸರಗೊಂಡಿದ್ದಾರೆ. ಪ್ರವೀಣ ನೆಟ್ಟಾರು ಹತ್ಯೆ ಆದಾಗ ಹಿಂದುತ್ವದ ಆಧಾರದ ಮೇಲೆ ಬಿಜೆಪಿ ಜೊತೆಗಿರುವ ಕಾರ್ಯಕರ್ತರು ಮತ್ತು ಮತದಾರರು ತಮ್ಮ ಆಕ್ರೋಶ ಹೊರಹಾಕಿದ್ದರು. ಹಿಂದುತ್ವದ ಕಾರಣದಿಂದ ಜೊತೆಗಿರುವವರು ಸಂಘ ಪರಿವಾರದ ಒಂದಿಲ್ಲೊಂದು ಸಂಘಟನೆಗಳ ಜೊತೆಗೆ ಇರುವವರು. ಅವರಿಗೆ ಆಕ್ರೋಶ ಹೊರಹಾಕಲು ಮಾರ್ಗಗಳಿವೆ. ಆದರೆ ಮೋದಿ ಇಮೇಜ್‌ ನೋಡಿ ಬಿಜೆಪಿಗೆ ವೋಟು ಹಾಕುವ ಹೊಸ ಮತದಾರರು 5 ವರ್ಷಕ್ಕೊಮ್ಮೆ ದುಡ್ಡು ಕೇಳದೆ ಮತಗಟ್ಟೆಗೆ ಬಂದು ವೋಟು ಹಾಕುವವರು. ಅವರೇನಾದರೂ ಲೋಕಸಭೆಗೆ ನೋಡೋಣ ಬಿಡು, ಈಗ ಯಾಕೆ ಎಂದು ಈ ಬಾರಿ ಮನೆಯಲ್ಲಿ ಕುಳಿತುಕೊಂಡರೆ ರಾಜ್ಯ ಬಿಜೆಪಿಗೆ ಕಷ್ಟವಾಗಬಹುದು.

From the India Gate: ಬಿಎಸ್‌ವೈ ಚೀಟಿ ಅಭ್ಯಾಸದ ಬಗ್ಗೆ ನಿಮಗೆಷ್ಟು ಗೊತ್ತು..? ಯುಪಿ ಸಿಎಂ ಎದುರು ರಾಜಿಯಾದ ಅಖಿಲೇಶ್‌..!

ಬಿಜೆಪಿಯಲ್ಲಿ ತಾಳಮೇಳದ ಸಮಸ್ಯೆ

ಗಾಯಕನ ಜೊತೆಗೆ ತಂಬೂರ, ತಬಲಾ ಮತ್ತು ಪೇಟಿ ನುಡಿಸುವವರು ಜೊತೆಗೂಡಿದರೆ ತಾನೇ ಸುಶ್ರಾವ್ಯ ಸಂಗೀತ ಎಂದು ಕರೆಸಿಕೊಳ್ಳುವುದು. ಅದೇ ರೀತಿ ಎಲ್ಲ ನಾಯಕರು ಒಂದು ನಿರ್ದಿಷ್ಟ ಮತ್ತು ನಿಶ್ಚಿತ ಗುರಿಗಾಗಿ ಕೆಲಸ ಮಾಡಿದರೆ ಮಾತ್ರ ಮತದಾರರಿಗೂ ಅಡ್ಡಿಯಿಲ್ಲ ಮಾರಾಯಾ ಅನ್ನಿಸುವುದು. ಆದರೆ ರಾಜ್ಯ ಬಿಜೆಪಿ ಕಾರುಬಾರು ನೋಡಿದರೆ ಹಾಗೆ ಕಾಣುತ್ತಿಲ್ಲ. ಇಲ್ಲಿ ಮೊದಲು ಎರಡು ಗುಂಪುಗಳಿದ್ದವು, ಈಗ ಮೂರು ಗುಂಪುಗಳಾಗಿವೆ. ಮೊದಲನೆಯ ಗುಂಪು ಯಡಿಯೂರಪ್ಪನವರದು. ಬಿಎಸ್‌ವೈಗೆ ರಾಜ್ಯದಲ್ಲಿ ಎಲ್ಲೇ ಹೋದರೂ 5ರಿಂದ 6 ಪ್ರತಿಶತ ವೋಟು ಹಾಕಿಸುವ ಶಕ್ತಿಯಿದೆ. ಎರಡನೆಯ ಗುಂಪು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರದು. ಅಧಿಕಾರದಲ್ಲಿ ಇರುವುದರಿಂದ ಇವರಿಗೆ ಸಹಜವಾಗಿ ಸಂಪನ್ಮೂಲ ಕ್ರೋಢೀಕರಣದ ಶಕ್ತಿಯಿದೆ. ಬೊಮ್ಮಾಯಿ ಸಾಹೇಬರಿಗೆ ದಿಲ್ಲಿ ಮಟ್ಟದಲ್ಲಿ ಸಹಾಯ ಮಾಡಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿದ್ದಾರೆ. ಮೂರನೆಯ ಗುಂಪು ಸಂಘಟನೆ ಹಿನ್ನೆಲೆ ಇರುವ ಬಿ.ಎಲ್‌.ಸಂತೋಷ್‌, ನಿರ್ಮಲ್‌ ಕುಮಾರ್‌ ಸುರಾನಾ, ನಳಿನ್‌ ಕಟೀಲು ಅವರದು. ಇವರ ಬಳಿ ಆರ್‌ಎಸ್‌ಎಸ್‌ನಿಂದ ಬಿಜೆಪಿಗೆ ಬಂದಿರುವ ಕೇಡರ್‌ ಅನ್ನು ಚುನಾವಣಾ ಕೆಲಸಕ್ಕೆ ಹಚ್ಚುವ ಶಕ್ತಿಯಿದೆ. ಮೋದಿ ಮತ್ತು ಅಮಿತ್‌ ಶಾ ರಾಜ್ಯಕ್ಕೆ ಬಂದಾಗ ಮೂರು ಗುಂಪುಗಳು ಒಟ್ಟಿಗೆ ಕೆಲಸ ಮಾಡುತ್ತವೆ. ಆದರೆ ಅವರು ಇಲ್ಲದೇ ಇದ್ದಾಗ ಮರಳಿ ಮನೆಯೊಂದು ಮೂರು ಬಾಗಿಲು. ಇದು ಗೊತ್ತಿದ್ದೇ ಅಮಿತ್‌ ಶಾ ರಾಜ್ಯ ಬಿಜೆಪಿ ಚುನಾವಣಾ ಪ್ರಭಾರಿ ಧರ್ಮೇಂದ್ರ ಪ್ರಧಾನರನ್ನು ವಾರಕ್ಕೆ ಮೂರು ದಿನ ಕರ್ನಾಟಕದಲ್ಲಿ ಹೋಗಿ ಕುಳಿತು ಮೊದಲು ಈ ಕಿತ್ತಾಟಕ್ಕೆ ಫುಲ್‌ಸ್ಟಾಪ್‌ ಹಾಕುವಂತೆ ಸೂಚಿಸಿದ್ದಾರೆ. ಆದರೆ ಅದು ಅಂದುಕೊಂಡಷ್ಟುಸುಲಭ ಅಲ್ಲ.

ಚುನಾವಣೆಗೆ ಎಷ್ಟುಹಣ ಬೇಕು?

2004ರಲ್ಲಿ ಒಂದು ರಾಷ್ಟ್ರೀಯ ಪಕ್ಷದ ಚುನಾವಣಾ ಪ್ರಬಂಧನಕ್ಕೆ 100ರಿಂದ 150 ಕೋಟಿ ಖರ್ಚಾಗುತ್ತಿತ್ತಂತೆ. ಆಗ ಕರ್ನಾಟಕದ ಉಸ್ತುವಾರಿ ವಹಿಸಿಕೊಂಡಿದ್ದ ಬಿಜೆಪಿ ನಾಯಕರೊಬ್ಬರು ನನಗೆ ಖಾಸಗಿಯಾಗಿ ಹೇಳಿದ್ದ ಪ್ರಕಾರ ಆಗ ರಾಜ್ಯ ಬಿಜೆಪಿ 38 ಕೋಟಿ ಹಣ ಸಂಗ್ರಹ ಮಾಡಿತ್ತಂತೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಎಸ್‌.ಎಂ.ಕೃಷ್ಣ ಆಪ್ತರು ಹೇಳುವ ಪ್ರಕಾರ ಕಾಂಗ್ರೆಸ್‌ 150 ಕೋಟಿವರೆಗೆ ಸಂಗ್ರಹ ಮಾಡಿತ್ತು. ಅಭ್ಯರ್ಥಿಗಳು ಮಾಡುವ ಖರ್ಚುವೆಚ್ಚ ಬಿಟ್ಟು ಜಾಹೀರಾತು, ಓಡಾಟ, ಪಾರ್ಟಿ ಫಂಡು ಎಲ್ಲವೂ ಇದರಲ್ಲಿ ಮುಗಿದು ಹೋಗುತ್ತಿತ್ತು. ಅದಾಗಿ ಸರಿಯಾಗಿ 19 ವರ್ಷಗಳ ನಂತರ ನೋಡಿದರೆ ಬೆಂಗಳೂರಿನ ಕ್ಷೇತ್ರವೊಂದರಲ್ಲಿ ಸ್ಪರ್ಧಿಸಲು 30ರಿಂದ 40 ಕೋಟಿ ಬೇಕಾದರೆ, ಉತ್ತರ ಕರ್ನಾಟಕದಲ್ಲಿ ಎಷ್ಟೇ ಕೆಲಸ ಮಾಡಿದರೂ ಕೂಡ ಚುನಾವಣೆ ಅಂದರೆ ಒಬ್ಬ ಅಭ್ಯರ್ಥಿಯ ಖರ್ಚು ಹತ್ತು ಕೋಟಿಯೊಳಗೆ ಮುಗಿಯುವುದಿಲ್ಲ. ನನಗೊಬ್ಬ ಸಂಸದರು ಹೇಳಿದ ಪ್ರಕಾರ 2004ರಲ್ಲಿ ಅವರಿಗೆ ಇಡೀ ಲೋಕಸಭಾ ಕ್ಷೇತ್ರಕ್ಕೆ 58 ಲಕ್ಷ ರು. ಖರ್ಚಾಗಿತ್ತು. ಈಗ 2019ರಲ್ಲಿ ಗೆದ್ದಾಗ ಮಾಡಿದ ಖರ್ಚು 25 ಕೋಟಿ. ಒಂದು ಅಂದಾಜಿನ ಪ್ರಕಾರ ಇವತ್ತಿನ ಸ್ಥಿತಿಯಲ್ಲಿ ಒಂದು ರಾಷ್ಟ್ರೀಯ ಪಾರ್ಟಿಗೆ ಬರೀ ಚುನಾವಣಾ ಮೇಲುಸ್ತುವಾರಿಗೆ 800ರಿಂದ 1000 ಕೋಟಿ ಹಣ ಬೇಕು. ಒಂದೊಂದು ಗೆಲ್ಲುವ ಕ್ಷೇತ್ರಕ್ಕೆ ಕನಿಷ್ಠ 3ರಿಂದ 5 ಕೋಟಿ ಪಾರ್ಟಿ ಫಂಡ್‌ ಕೊಡಬೇಕು. ಇವತ್ತಿಗೂ ಬಿಹಾರ, ಯು.ಪಿ., ಮಧ್ಯಪ್ರದೇಶದಲ್ಲಿ 50ರಿಂದ 75 ಲಕ್ಷದಲ್ಲಿ ಒಂದು ಕ್ಷೇತ್ರದ ಚುನಾವಣಾ ಖರ್ಚು ಮುಗಿದುಹೋಗುತ್ತದೆ. ಚುನಾವಣೆ ಪಕ್ಕಾ ಬಿಸಿನೆಸ್‌ ಆಗಿದೆ ಬಿಡಿ.

From the India Gate: ಕಾಂಗ್ರೆಸ್‌ ಒಗ್ಗಟ್ಟಿನ ಮಂತ್ರದ ವಾಸ್ತವ ಹೀಗಿದೆ; ‘ಭಜರಂಗಿ’ಗೆ ನೋಟಿಸ್‌ ಕಳಿಸಿದ ಸರ್ಕಾರ..!

ಸೋಮಣ್ಣ ಒಂದು ಕಾಲ ಹೊರಗಿಟ್ಟರಾ?

ದೇವೇಗೌಡ ಮತ್ತು ಯಡಿಯೂರಪ್ಪನವರ ಥರ 24 ಗಂಟೆ ಓಡಾಡಿ ಕೆಲಸ ಮಾಡುವುದು ಸೋಮಣ್ಣ ಸಾಮರ್ಥ್ಯ. ಆದರೆ ನಿರಂತರ ಒಂದು ಪಾರ್ಟಿಯಲ್ಲಿ ನಿಲ್ಲದೇ ಇರುವುದು ಅವರ ದೌರ್ಬಲ್ಯ. 2018ರಲ್ಲಿ ಅಮಿತ್‌ ಶಾ ಬಳಿ ದುಂಬಾಲು ಬಿದ್ದು ಬಿಜೆಪಿ ಟಿಕೆಟ್‌ ಪಡೆದಿದ್ದ ಸೋಮಣ್ಣರನ್ನು 2019ರಲ್ಲಿ ಮಂತ್ರಿ ಮಾಡಲು ಕೂಡ ಯಡಿಯೂರಪ್ಪ ಮತ್ತು ಬಿ.ಎಲ್‌..ಸಂತೋಷ್‌ ತಯಾರು ಇರಲಿಲ್ಲ. ಆಗ ಪ್ರಹ್ಲಾದ್‌ ಜೋಶಿ ಮೂಲಕ ದಿಲ್ಲಿಗೆ ಹೋಗಿ ಅಮಿತ್‌ ಶಾ ಕಾರಣದಿಂದ ಮಂತ್ರಿ ಆಗಿದ್ದ ಸೋಮಣ್ಣ ಈಗ ಮತ್ತೆ ಮುನಿಸಿಕೊಂಡು ಕಾಂಗ್ರೆಸ್‌ಗೆ ಹೋಗಲೋ ಬೇಡವೋ ಎಂಬ ದ್ವಂದ್ವದಲ್ಲಿದ್ದಾರೆ. ಸೋಮಣ್ಣ ಗೋವಿಂದರಾಜನಗರ ಮಗನಿಗೆ ಕೊಟ್ಟು ಹನೂರಿಗೆ ಹೋಗಿ ನಿಲ್ಲುತ್ತೇನೆ, ಟಿಕೆಟ್‌ ಕೊಡಿ ಎನ್ನುತ್ತಿದ್ದಾರೆ. ಆದರೆ ಅಲ್ಲಿ ಯಡಿಯೂರಪ್ಪ ಪ್ರೀತಮ್… ನಾಗಪ್ಪಗೆ ಟಿಕೆಟ್‌ ಕೊಡಬೇಕು, ನೀವು ಬೇಕಾದರೆ ಚಾಮರಾಜನಗರಕ್ಕೆ ಹೋಗಿ ಎನ್ನುತ್ತಿದ್ದಾರೆ. ಆದರೆ ಸೋಮಣ್ಣ ಅವರಿಗೆ ಅದು ಇಷ್ಟವಿಲ್ಲ. ಇದು ಗೊತ್ತಾಗಿ ಡಿ.ಕೆ. ಸಹೋದರರು ಸೋಮಣ್ಣಗೆ ನಿಮ್ಮ ಮಗನಿಗೆ ಗೋವಿಂದರಾಜನಗರಕ್ಕೆ ಕೊಡುತ್ತೇವೆ, ವಿಜಯನಗರಕ್ಕೆ ಪ್ರಿಯಕೃಷ್ಣರನ್ನು ಒಪ್ಪಿಸುತ್ತೇವೆ ಎನ್ನುತ್ತಿದ್ದಾರೆ. ಆದರೆ ಸೋಮಣ್ಣ ಗೋವಿಂದರಾಜನಗರಕ್ಕೆ ನನಗೆ ಕೊಡಿ, ರಾಜಾಜಿನಗರಕ್ಕೆ ಮಗ ಡಾ.ಅರುಣ್‌ ಸೋಮಣ್ಣಗೆ ಕೊಡಿ ಎಂದು ಕೇಳುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್‌ನಲ್ಲಿ ಒಪ್ಪಿಗೆಯಿಲ್ಲ. ಇನ್ನೊಂದು ಸಮಸ್ಯೆ ಎಂದರೆ ಕಾಂಗ್ರೆಸ್‌ಗೆ ಸೋಮಣ್ಣ ಹೋಗಿ ಕರ್ಮಧರ್ಮ ಸಂಯೋಗದಿಂದ ಅಧಿಕಾರ ಬಂತು ಅಂದುಕೊಳ್ಳೋಣ. ಆಗ ಮಂತ್ರಿ ಆಗಲು ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ, ಜಮೀರ್‌ ಅಹ್ಮದ್‌, ಭೈರತಿ ಸುರೇಶ್‌, ಹ್ಯಾರಿಸ್‌ ನಂತರ ಕ್ಯೂನಲ್ಲಿ ನಿಲ್ಲಬೇಕು. ರಾಜಕೀಯ ಅಂದಮೇಲೆ ರಿಸ್ಕ್‌ ಇದ್ದಿದ್ದೇ.

ಸ್ವರೂಪ್‌ ಬಗ್ಗೆ ಗೌಡರ ಒಲವು?

ಹಾಸನದಲ್ಲಿ ಪ್ರೀತಂ ಗೌಡ ವಿರುದ್ಧ ಸ್ಪರ್ಧಿಸಲು ಸೊಸೆ ಭವಾನಿ ರೇವಣ್ಣ ಅವರಿಗೆ ತುಂಬಾ ಆಸಕ್ತಿ ಇದ್ದರೂ ಕೂಡ ಪದ್ಮನಾಭನಗರದಿಂದ ಬರುತ್ತಿರುವ ಮಾಹಿತಿ ಪ್ರಕಾರ ದೇವೇಗೌಡರ ಒಲವು ಸೊಸೆಗಿಂತ ಸ್ವರೂಪ್‌ ಪರವಾಗಿ ಜಾಸ್ತಿ ಇದೆ. 1991ರಲ್ಲಿ ನನಗೆ ಕೈಹಿಡಿದಿದ್ದೇ ಹಾಸನ ವಿಧಾನಸಭಾ ಕ್ಷೇತ್ರದ ಜನ, ಅದರಲ್ಲೂ ಅಲ್ಲಿನ ದಾಸ ಒಕ್ಕಲಿಗರು. ಆ ಋುಣ ನನ್ನ ಮೇಲಿದೆ. ಈಗ ಸೊಸೆಗೆ ಟಿಕೆಟ್‌ ಕೊಟ್ಟು ಸ್ವರೂಪ್‌ಗೆ ಕೈಕೊಟ್ಟರೆ ಕೆಟ್ಟಹೆಸರು ಬರುತ್ತದೆ ಎಂದು ದೊಡ್ಡಗೌಡರು ಮಕ್ಕಳ ಬಳಿ ಹೇಳಿಕೊಂಡಿದ್ದಾರಂತೆ. ಆದರೆ ಹಾಸನದಿಂದ ಬರುತ್ತಿರುವ ಸುದ್ದಿಗಳ ಪ್ರಕಾರ ಪ್ರೀತಮ… ಗೌಡಗೆ ಸ್ವರೂಪ್‌ ಕಠಿಣ ಸ್ಪರ್ಧೆ ಒಡ್ಡಬೇಕಾದರೆ ಗೌಡರ ಕುಟುಂಬವೇ ‘ವಿಟಮಿನ್‌ ಎಂ’ ಪೂರೈಕೆ ಮಾಡಬೇಕು.

ಸ್ಪೀಕರ್‌ ಸಾಹೇಬರ ದ್ವಂದ್ವ

ವಿಧಾನಸಭೆ ಕೊನೆಯ ಅಧಿವೇಶನ ಮುಗಿದು ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಠಿಕಾಣಿ ಹೂಡಿ ಪಕ್ಷದ ಬಾವುಟ ಹಚ್ಚಿಕೊಂಡು ಮತ ಕೇಳುತ್ತಿದ್ದಾರೆ. ಆದರೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತ್ರ ಸ್ವಲ್ಪ ದ್ವಂದ್ವದಲ್ಲಿದ್ದಾರೆ. ನಿಯಮಾವಳಿ ಪ್ರಕಾರ ಸ್ಪೀಕರ್‌ ಆದವರು ಹೊಸ ಚುನಾವಣೆಗೆ ನಾಮಪತ್ರ ಸಲ್ಲಿಸಿಯೇ ಪಾರ್ಟಿ ಬಾವುಟ ಹಚ್ಚಿ ಮತ ಕೇಳಬಹುದು. ಆದರೆ ಆಗ ದೊರೆಯುವುದು ಕೇವಲ 15 ದಿನಗಳು ಮಾತ್ರ. ಹೀಗಾಗಿ ಈಗಿನಿಂದಲೇ ಓಡಾಡಬೇಕು. ಆದರೆ ಬಾವುಟ ಹಚ್ಚಿ ಪಾರ್ಟಿ ಪರವಾಗಿ ಯಾತ್ರೆಯಲ್ಲಿ ಸ್ಪೀಕರ್‌ ಓಡಾಡಬೇಕೋ ಬೇಡವೋ ಎಂಬುದಕ್ಕೆ ಹೀಗೆ ಎಂದು ಗೆರೆ ಕೊರೆದಂತೆ ನಿಯಮಗಳಿಲ್ಲ. ಇಂಥ ದ್ವಂದ್ವಗಳೇ ಅಲ್ಲವೇ ಹೊಸ ಪರಂಪರೆಗಳಿಗೆ ನಾಂದಿ ಹಾಡುವುದು.

Latest Videos
Follow Us:
Download App:
  • android
  • ios