ಬೆಂಗಳೂರು[ಅ.30]: ‘ದೊಡ್ಡವರ ನ್ಯಾಯದ ವಿಚಾರವೇ ನನಗೆ ಬೇಡ. ನನ್ನ ಜಂಜಾಟವೇ ನನಗೆ ಸಾಕಾಗಿದೆ. ಏನೇನು ರಾಜಕೀಯ ನಡೆಯುತ್ತಿದೆಯೋ ನನಗೆ ಗೊತ್ತಿಲ್ಲ.’

ಬಿಜೆಪಿ ಸರ್ಕಾರ ಪತನಗೊಳ್ಳಲು ಬಿಡುವುದಿಲ್ಲ ಎಂಬ ಜೆಡಿಎಸ್‌ ವರಿಷ್ಠ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ ನಂತರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವೆ ನಡೆದಿರುವ ವಾಕ್ಸಮರಕ್ಕೆ ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯೆಯಿದು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವಿನ ವಾಕ್ಸಮರ ಕುರಿತು ತಮಗೆ ಏನೂ ಗೊತ್ತಿಲ್ಲ ಎಂದರು. ಅಷ್ಟೇ ಅಲ್ಲದೆ, ‘ಏನೇನು ರಾಜಕೀಯ ನಡೆಯುತ್ತಿದೆಯೋ ಅದೂ ನನಗೆ ಗೊತ್ತಿಲ್ಲ. ದೊಡ್ಡವರ ನ್ಯಾಯ ನನಗೆ ಬೇಡ. ನನ್ನ ಹಂತದ ವಿಚಾರಗಳನ್ನು ಮಾತ್ರ ನಾನು ಮಾತನಾಡುತ್ತೇನೆ. ನನ್ನ ಜಂಜಾಟವೇ ನನಗೆ ಸಾಕಾಗಿದೆ. ಮೊದಲು ಆರೋಗ್ಯ ಸಮಸ್ಯೆಯನ್ನು ಸರಿ ಮಾಡಿಕೊಂಡರೆ ಸಾಕಾಗಿದೆ. ಆಸ್ಪತ್ರೆಗೆ ಹೋಗೋದಕ್ಕೂ ಆಗುತ್ತಿಲ್ಲ’ ಎಂದರು.

ಸಿಎಂಗೆ ಪತ್ರ-ಪುನರುಚ್ಚಾರ:

ಕನಕಪುರಕ್ಕೆ ಹಿಂದಿನ ಸರ್ಕಾರದಲ್ಲಿ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ಸ್ಥಳಾಂತರಿಸದಂತೆ ಕೋರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆಯುವುದಾಗಿ ಇದೇ ವೇಳೆ ಡಿ.ಕೆ.ಶಿವಕುಮಾರ್‌ ಪುನರುಚ್ಚರಿಸಿದರು. ವೈದ್ಯಕೀಯ ಕಾಲೇಜು ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಿಜ ಸಂಗತಿ ಗೊತ್ತಿಲ್ಲ. ಗೊತ್ತಿದ್ದರೆ ಸ್ಥಳಾಂತರ ಮಾಡುತ್ತಿರಲಿಲ್ಲ. ನಾನು ಸುಧಾಕರ್‌ ವಿಚಾರದಲ್ಲಿ ಟೀಕೆ ಮಾಡೋದಿಲ್ಲ. ಚಿಕ್ಕಬಳ್ಳಾಪುರದ ಜತೆಗೆ ರಾಜ್ಯದ ಇನ್ನೂ ಮೂರು ಕಡೆದ ಬೇಕಾದ್ರೂ ಹೊಸ ಕಾಲೇಜುಗಳನ್ನು ತೆರೆಯಲಿ. ಆದರೆ ನಮ್ಮ ಕ್ಷೇತ್ರಕ್ಕೆ ಹಂಚಿಕೆಯಾಗಿದ್ದ ಕಾಲೇಜನ್ನು ಕಿತ್ತುಕೊಂಡಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮೇಕೆದಾಟು ಯೋಜನೆ ಜಾರಿಗೆ ಬಂದರೆ ಹೆಚ್ಚು ತೊಂದರೆ ಆಗುವುದು ನಮ್ಮ ಕ್ಷೇತ್ರಕ್ಕೆ. ಆದರೂ ನಾವು ಬೆಂಗಳೂರಿಗಾಗಿ ತ್ಯಾಗಕ್ಕೆ ಸಿದ್ಧರಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಮೆಡಿಕಲ್‌ ಕಾಲೇಜ್‌ ಸ್ಥಳಾಂತರ ಮಾಡಲೇಬಾರದು. ಇದರ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವರಿಕೆ ಮಾಡಿಕೊಡುತ್ತೇನೆ ಎಂದರು.