ಬೆಂಗಳೂರು [ಅ.25]:  ವಿದೇಶಿ ಹಣದಾಸೆ ತೋರಿಸಿ ಕೋಟ್ಯಂತರ ರುಪಾಯಿ ವಂಚನೆ ಪ್ರಕರಣದ ತನಿಖೆ ಮುಂದುವರೆಸಿರುವ ಸಿಸಿಬಿ, ಈ ಸಂಬಂಧ ಆರೋಪಿ ಪತ್ನಿ ಮತ್ತು ಮಗ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದೆ.

ಇದುವರೆಗೆ ತನಿಖೆಯಲ್ಲಿ ವಂಚನೆ ಕೃತ್ಯದಲ್ಲಿ ಕೃಷ್ಣೇಗೌಡ ಪಾತ್ರ ಕಂಡು ಬಂದಿದೆ. ಆದರೆ ಸಂತ್ರಸ್ತರು ಹಣ ಕೇಳಲು ಮನೆ ಬಳಿ ಹೋದರೆ ಕೃಷ್ಣೇಗೌಡನ ಕುಟುಂಬದ ಸದಸ್ಯರು ಗಲಾಟೆ ಮಾಡಿದ್ದಾರೆ. ಅಲ್ಲದೆ, ಸುಳ್ಳು ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡುವುದಾಗಿ ಕೂಡಾ ಅವರು ಬೆದರಿಸಿದ್ದಾರೆ. ಹೀಗಾಗಿ ವಂಚನೆ ಕೃತ್ಯ ಗೊತ್ತಿದ್ದರೂ ರಕ್ಷಣೆ ಮಾಡಿರುವ ಆರೋಪದ ಮೇರೆಗೆ ಕುಟುಂಬ ಸದಸ್ಯರ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ರಾಜ್ಯ ಅರಣ್ಯ ಇಲಾಖೆಯಲ್ಲಿ ಕೃಷ್ಣೇಗೌಡನ ಪತ್ನಿ ಉದ್ಯೋಗದಲ್ಲಿದ್ದು, ಪ್ರಸುತ್ತ ಮಲ್ಲೇಶ್ವರದ 18ನೇ ಕ್ರಾಸ್‌ನಲ್ಲಿರುವ ಅರಣ್ಯ ಭವನದಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರಿ ಅಧಿಕಾರಿಯಾಗಿದ್ದರೂ ಪತಿಯ ಅಕ್ರಮ ಚಟುವಟಿಕೆಗಳಿಗೆ ಅವರು ಕಡಿವಾಣ ಹಾಕಿಲ್ಲ ಎಂದು ಪೊಲೀಸರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಪ್ಪು ಹಣ: ದೂರು ನೀಡಲು ಹಿಂದೇಟು?

ವಂಚನೆ ಪ್ರಕರಣ ಸಂಬಂಧ ವಿಚಾರಣೆ ವೇಳೆ ಕೃಷ್ಣೇಗೌಡ ಗೊಂದಲಕಾರಿ ಹೇಳಿಕೆ ನೀಡುತ್ತಿದ್ದಾನೆ. ಒಂದು ಬಾರಿ ತಾನು ಮೋಸ ಮಾಡಿಲ್ಲವೆಂದರೆ, ಮತ್ತೊಂದು ಬಾರಿ ಅಮಾಯಕನಂತೆ ನಡೆದುಕೊಳ್ಳುತ್ತಿದ್ದಾನೆ. ಹೀಗಾಗಿ ವಂಚನೆ ಹಣ ಜಪ್ತಿ ಮಾಡುವುದು ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಂಚಿಸಿದ ಕೃತ್ಯದಲ್ಲಿ ಸಂಪಾದಿಸಿದ ಹಣವನ್ನು ಬೇರೆಡೆ ವ್ಯಯಿಸಿರಬಹುದು. ಆತನ ಆಸ್ತಿ-ಪಾಸ್ತಿ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸದ್ಯ ಬಸವೇಶ್ವರ ನಗರದಲ್ಲಿ ಆತ ಕುಟುಂಬದ ಸದಸ್ಯರೊಂದಿಗೆ ನೆಲೆಸಿದ್ದಾನೆ. ಇನ್ನು ಕೃಷ್ಣೇಗೌಡನ ಬಳಿ ಹಣ ಕಳೆದುಕೊಂಡಿರುವ ಬಹುತೇಕರು ಅಧಿಕೃತವಾಗಿ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈ ನಡವಳಿಕೆ ಹಿನ್ನೆಲೆಯಲ್ಲಿ ಸಂತ್ರಸ್ತರ ಹಣದ ಬಗ್ಗೆ ಸಹ ಅನುಮಾನ ಮೂಡಿದ್ದು, ಕಪ್ಪು ಹಣ ಬದಲಾವಣೆ ನಡೆದಿರುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಕೃಷ್ಣೇಗೌಡನ ಬಲೆಗೆ ಬಿದ್ದವರ ಪೈಕಿ ಇಬ್ಬರು ನಿವೃತ್ತ ಎಸಿಪಿಗಳು ಇದ್ದಾರೆ. ಇದರಲ್ಲಿ ಒಬ್ಬರು ಐದು ವರ್ಷಗಳ ಹಿಂದೆ ಸಿಸಿಬಿಯ ಕನ್ನ ಕಳವು ಮತ್ತು ಕಳ್ಳತನ ವಿಭಾಗದ ಎಸಿಪಿ ಆಗಿದ್ದರು. ಈ ಅಧಿಕಾರಿಗಳು ಸಹ ಅಧಿಕೃತವಾಗಿ ದೂರು ಕೊಡಲು ಹಿಂಜರಿಯುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
 
11 ಕೋಟಿ ವಂಚನೆ: ದೂರು

ವಿದೇಶಿ ಹಣದಾಸೆ ತೋರಿಸಿ ವಂಚನೆ ಕೃತ್ಯ ಸಂಬಂಧ ಕೃಷ್ಣೇಗೌಡನ ವಿರುದ್ಧ ಹನುಮಂತನಗರ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ.

ಗವಿಪುರದ ಗುತ್ತಿಗೆದಾರ ಟಿ.ಶಿವಕುಮಾರ್‌ ಎಂಬುವರಿಗೆ .11.67 ಕೋಟಿ ವಂಚಿಸಿರುವ ಆರೋಪ ಬಂದಿದ್ದು, ಅಮೆರಿಕದ ಬ್ಯಾಂಕ್‌ ಆಫ್‌ ಸ್ಟೇಟ್‌ಮೆಂಟ್‌ನಲ್ಲಿ 34.34 ಕೋಟಿ ಡಾಲರ್‌ ಹಣವಿದೆ ಎಂದು ನಂಬಿಸಿ ಪಂಗನಾಮ ಹಾಕಿದ್ದಾನೆ ಎಂದು ಗೊತ್ತಾಗಿದೆ.