ಬೆಂಗಳೂರಿನ ಚಿತ್ರಣವನ್ನೇ ಬದಲಿಸಿದ್ದೇಗೆ ಎಸ್‌ಎಂ ಕೃಷ್ಣ?
ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರು ಬೆಂಗಳೂರಿನ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಐಟಿ ಕಂಪನಿಗಳನ್ನು ಆಕರ್ಷಿಸಿ 'ಸಿಲಿಕಾನ್ ಸಿಟಿ' ಎಂಬ ಹೆಸರು ಬರಲು ಕಾರಣರಾದರು. ಇಂದಿನ ಬೆಂಗಳೂರಿನ ಸ್ವರೂಪಕ್ಕೆ ಅವರ ಕೊಡುಗೆ ಅಪಾರ.
ಬೆಂಗಳೂರು: ಹಿರಿಯ ರಾಜಕೀಯ ಮುಖಂಡ, ಮಾಜಿ ಮುಖ್ಯಮಂತ್ರಿಗಳಾದ ಎಸ್ಎಂ ಕೃಷ್ಣ ಇಂದು ಬೆಳಗಿನ ಜಾವ ಸದಾಶಿವನಗರದ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಸಭ್ಯ ನಾಯಕನಾಗಿ ಗುರುತಿಸಿಕೊಂಡಿದ್ದ ಎಸ್ಎಂ ಕೃಷ್ಣ ಅವರು ತಾವು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ರಾಜ್ಯದಲ್ಲಿ ಹಲವು ಯೋಜನೆಗಳನ್ನು ತಂದಿದ್ದರು. ಅದರಲ್ಲಿಯೂ ಇಂದಿನ ಮಹಾನ್ ಬೆಂಗಳೂರಿನ ಚಿತ್ರಣಕ್ಕೆ ಎಸ್ಎಂ ಕೃಷ್ಣ ಅವರೇ ಕಾರಣರು. ಎಸ್ಎಂ ಕೃಷ್ಣ 1999ರಿಂದ 2004ರವರೆಗೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು. ಈ ಸಂದರ್ಭದಲ್ಲಿ ಬೆಂಗಳೂರು ನಗರ ಬೆಳವಣಿಗೆಗೆ ಮೊದಲ ಆದ್ಯತೆ ನೀಡಿದ್ದರು.
ದೇಶ-ವಿದೇಶದ ಕಂಪನಿಗಳು ಬೆಂಗಳೂರಿನಲ್ಲಿ ಬಂಡವಾ ಹೂಡಿಕೆ ಮಾಡುವಂತೆ ಮಾಡಿದ್ದರು. ಸಿಲಿಕಾನ್ ಸಿಟಿ ಎಂಬ ಹೆಸರಿಗೆ ಎಸ್ಎಂ ಕೃಷ್ಣ ಅಡಿಪಾಯ ಹಾಕಿದ್ದರು. ದೊಡ್ಡ ಐಟಿ ಕಂಪನಿಗಳು ಬೆಂಗಳೂರಿನಲ್ಲಿ ನೆಲೆಯೂರಲು ಎಸ್ ಎಂ ಕೃಷ್ಣ ತಂದ ಹಲವು ಯೋಜನೆಗಳು ಕಾರಣಗಳಾಗಿದ್ದವು. ಈ ಸಂದರ್ಭದಲ್ಲಿ ಬೆಂಗಳೂರಿಗೆ ಹೈದರಾಬಾದ್ ನಗರ ಸ್ಪರ್ಧೆ ನೀಡಿತ್ತು. ಆದರೆ ಬೆಂಗಳೂರಿನ ವಾತಾವರಣದಿಂದ ಹಲವು ಕಂಪನಿಗಳು ಇಂದು ರಾಜಧಾನಿಯಲ್ಲಿ ನೆಲೆಯೂರಿವೆ.
ಬೆಂಗಳೂರು ನಗರವನ್ನು ಸಿಂಗಪುರ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕೆಂದು ಎಸ್ಎಂ ಕೃಷ್ಣ ಕನಸು ಕಂಡಿದ್ದರು. ಇದರ ಮೊದಲ ಭಾಗವಾಗಿಯೇ ಮಾಹಿತಿ ತಂತ್ರಜ್ಞಾನಕ್ಕೆ ಪ್ರಾಶಸ್ತ್ಯ ನೀಡಿದ್ದರು. ಉದ್ಯಮಗಳ ಸ್ಥಾಪನೆಗೆ ವಿವಿಧ ಕಂಪನಿಗಳಿಗೆ ಪೂರಕ ವಾತಾವರಣ ನಿರ್ಮಿಸಿಕೊಟ್ಟರು. ಐಟಿ ಹಬ್, ಸಿಲಿಕಾನ್ ಸಿಟಿ ಅಂತ ಬೆಂಗಳೂರು ಜಾಗತೀಕಮಟ್ಟದಲ್ಲಿ ಗುರುತಿಸಿಕೊಳ್ಳಲು ಎಸ್‌ಎಂ ಕೃಷ್ಣ ಅವರು ಕಾರಣರಾಗಿದ್ದಾರೆ.
ಇದನ್ನೂ ಓದಿ: ಮಿರಾಕಲ್ ಎಂಬಂತೆ ವೆಂಟಿಲೇಟರ್ ನಿಂದ ಹೊರಬಂದು ಡಿಸ್ಚಾರ್ಜ್ ಆಗಿದ್ದ ಎಸ್ ...
ಅಂದು ಎಸ್ಎಂ ಕೃಷ್ಣ ತೆಗೆದುಕೊಂಡ ಕೆಲ ನಿರ್ಧಾರಗಳಿಂದಾಗಿ ಬೆಂಗಳೂರು ಮಹಾನಗರದಲ್ಲಿ ದೇಶದ ಎಲ್ಲಾ ಭಾಗದ ಜನರು ವಾಸವಾಗಿದ್ದಾರೆ. ಕೆಲಸ ಅರಸಿ ಬಂದ ಎಷ್ಟೋ ಜನರು ಇಂದು ಬೆಂಗಳೂರಿನಲ್ಲಿ ಉಳಿಯಲು ಎಸ್ಎಂ ಕೃಷ್ಣ ಕಾರಣರಾಗಿದ್ದಾರೆ. ಹಾಗಾಗಿ ಇಂದು ಬೆಂಗಳೂರಿನಲ್ಲಿ ಎಲ್ಲಾ ಸಮುದಾಯದ ಜನರು ನೆಲೆಯೂರಿದ್ದು, ಸಾಂಸ್ಕೃತಿಕವಾಗಿಯೂ ರಾಜಧಾನಿ ಶ್ರೀಮಂತವಾಗಿದೆ. ಹಾಗಾಗಿ ಬೆಂಗಳೂರಿನಲ್ಲಿ ಎಲ್ಲಾ ಹಬ್ಬಗಳನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.
ಇದನ್ನೂ ಓದಿ: ನಾಳೆ ಹುಟ್ಟೂರಿನಲ್ಲಿ ನಡೆಯಲಿದೆ ಎಸ್ಎಂ ಕೃಷ್ಣ ಅಂತ್ಯಕ್ರಿಯೆ