Asianet Suvarna News Asianet Suvarna News

ಪೊಲೀಸರ ಮೇಲಿನ ಸಿಟ್ಟಿದೆ ಕಳ್ಳನಾದ ಹಾಕಿ ಆಟಗಾರ!

ಕ್ಷುಲ್ಲಕ ಕಾರಣಕ್ಕೆ ತನ್ನನ್ನು ಅಪರಾಧ ಪ್ರಕರಣದಲ್ಲಿ ಸಿಲುಕಿಸಿದ ಪೊಲೀಸರ ಮೇಲೆ ದ್ವೇಷಕ್ಕೆ ಹಾಕಿ ಆಟಗಾರನೋರ್ವ ಕಳ್ಳನಾದ ಘಟನೆಯೊಂದು ನಡೆದಿದೆ. 

Hockey Player Arrested For Stolen Bike in Bengaluru
Author
Bengaluru, First Published Oct 20, 2019, 7:47 AM IST

ಬೆಂಗಳೂರು [ಅ.20]:  ಕ್ಷುಲ್ಲಕ ಕಾರಣಕ್ಕೆ ತನ್ನನ್ನು ಅಪರಾಧ ಪ್ರಕರಣದಲ್ಲಿ ಸಿಲುಕಿಸಿದ ಪೊಲೀಸರ ಮೇಲೆ ದ್ವೇಷಕ್ಕೆ ವೃತ್ತಿಪರ ವಾಹನ ಕಳ್ಳನಾಗಿದ್ದ ತಮಿಳುನಾಡಿನ ಮಾಜಿ ಹಾಕಿ ಆಟಗಾರನೊಬ್ಬ, ಈಗ ನಗರದಲ್ಲಿ ಬೈಕ್‌ ಕದ್ದು ತನ್ನ ಸಹಚರನೊಂದಿಗೆ ಹುಳಿಮಾವು ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮಧುರೈ ಮೂಲದ ಪರಮೇಶ್ವರನ್‌ (38) ಹಾಗೂ ಚೆನ್ನೈನ ಸದ್ದಾಂ ಹುಸೇನ್‌ (28) ಬಂಧಿತರಾಗಿದ್ದು, ಆರೋಪಿಗಳಿಂದ 1.70 ಕೋಟಿ ರು. ಮೌಲ್ಯದ 15 ಕಾರುಗಳನ್ನು ಜಪ್ತಿ ಮಾಡಲಾಗಿದೆ.

ಆರೋಪಿ ಪರಮೇಶ್ವರನ್‌ ಮೂಲತಃ ಮಧುರೈನವರಾಗಿದ್ದು, ರಾಜ್ಯ ಹಾಕಿ ತಂಡದಲ್ಲಿದ್ದ. ಆತನ ತಾಯಿ ವಕೀಲರಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಅಪರಾಧ ಪ್ರಕರಣದ ಪಾತ್ರವಹಿಸಿರುವ ಬಗ್ಗೆ ಶಂಕಿಸಿದ ಚೆನ್ನೈ ಪೊಲೀಸರು, ಪರಮೇಶ್ವರ್‌ನನ್ನು ವಶಕ್ಕೆ ಪಡೆದ್ದಿದ್ದರು. ಬಳಿಕ ಕಾರು ಕಳ್ಳತನ ಪ್ರಕರಣದಲ್ಲಿ ಸಿಲುಕಿಸಿ ಆತನನ್ನು ಜೈಲಿಗೆ ಕಳುಹಿಸಿದ್ದರು. ಇದರಿಂದ ರಾಜ್ಯ ಹಾಕಿ ತಂಡದಲ್ಲಿ ಆತನಿಗೆ ಸ್ಥಾನ ತಪ್ಪಿತು. ಈ ಸೇಡಿಗೆ ಪರಮೇಶ್ವರ್‌, ‘ನಾನು ಕಳ್ಳತನ ಮಾಡದಿದ್ದರೂ ಕಳ್ಳತನದ ಸುಳ್ಳು ಆರೋಪ ಹೊರಿಸಲಾಯಿತು. ಇನ್ನು ಮುಂದೆ ಕಾರುಗಳ್ಳನವನ್ನೇ ನನ್ನ ವೃತ್ತಿಯಾಗಿಸಿಕೊಳ್ಳುತ್ತೇನೆ. ನನ್ನನ್ನು ಪೊಲೀಸರು ಬಂಧಿಸಲಿ ನೋಡೋಣ’ ಎಂದು ಸವಾಲೆಸೆದಿದ್ದ. ಕೊನೆಗೆ ಅಂತಾರಾಜ್ಯ ಮಟ್ಟದಲ್ಲಿ ಕುಖ್ಯಾತ ವಾಹನ ಕಳ್ಳನಾಗಿ ಬೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತನ ವಿರುದ್ಧ ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ತಿರುವನಂತಪುರಂ, ಮಧುರೈ ಮತ್ತು ಆಂಧ್ರಪ್ರದೇಶ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಸಹ ಕಳುಹಿಸಿದ್ದರು. ಇದುವರೆಗೆ ಆತನ ಮೇಲೆ ಸುಮಾರು 120 ಕಾರು ಕಳ್ಳತನ ಪ್ರಕರಣಗಳಿವೆ ಎಂದು ಮೂಲಗಳು ಹೇಳಿವೆ.

ರಾತ್ರಿ ವೇಳೆ ಕಾರುಗಳನ್ನು ಪರಮೇಶ್ವರನ್‌ನ ಟಾರ್ಗೆಟ್‌ ಮಾಡುತ್ತಿದ್ದ. ಅವುಗಳನ್ನು ನಕಲಿ ಕೀ ಬಳಸಿ ಲಾಕ್‌ ತೆಗೆದು ಕಳ್ಳತನ ಮಾಡುತ್ತಿದ್ದ. ನಕಲಿ ಕೀಲಿಯನ್ನು ತಯಾರಿಕೆಗೆ ಸದಾ ತನ್ನೊಂದಿಗೆ ಟೂಲ್‌ ಕಿಟ್‌ ಇಟ್ಟುಕೊಳ್ಳುತ್ತಿದ್ದ. ಕದ್ದ ಕಾರಿನಲ್ಲಿ ಜಾಲಿ ರೈಡ್‌ ಮಾಡುತ್ತಿದ್ದ. ಆನಂತರ ಕಳವು ಕಾರುಗಳ ನೋಂದಣಿ ಸಂಖ್ಯೆ ಬದಲಿಸಿ ಸಹಚರನ ಮೂಲಕ ತಮಿಳುನಾಡಿಗೆ ಕಳುಹಿಸುತ್ತಿದ್ದ. ಪರಿಚಿತರ ಮೂಲಕ ಅವುಗಳನ್ನು ಮಾರಾಟ ಮಾಡಿ ಹಣ ಸಂಪಾದಿಸಿ ವೈಭವನದ ಜೀವನ ನಡೆಸುತ್ತಿದ್ದ. ಕಳ್ಳತನ ಬಿಡುವಂತೆ ಪತ್ನಿ ಬುದ್ಧಿವಾದ ಹೇಳಿದರೂ ಕೇಳದೆ ತನ್ನ ಕೃತ್ಯಗಳನ್ನು ಆತ ಮುಂದುವರೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಾಹನ ಕಳ್ಳತನ ಕೃತ್ಯದಲ್ಲಿ ಪರಮೇಶ್ವರನ್‌ ಕುಖ್ಯಾತ ಪಡೆದಿದ್ದು, ಆರು ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿ ಮತ್ತೆ ಕಳ್ಳತನ ಆರಂಭಿಸಿದ್ದ. ಆತನ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸೂಕ್ತ ಕ್ರಮ ಜರುಗಿಸಲಾಗುತ್ತದೆ.

-ಇಶಾ ಪಂತ್‌, ಡಿಸಿಪಿ, ಆಗ್ನೇಯ ವಿಭಾಗ.

Follow Us:
Download App:
  • android
  • ios