ಬೆಂಗಳೂರು [ಅ.25]:  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಕೇಂದ್ರ ಸರ್ಕಾರದ 10 ಇಲಾಖೆಗಳ ಕಚೇರಿಗೆ ಬಾಂಬ್‌ ಬೆದರಿಕೆಯ ಇಮೇಲ್‌ ಸಂದೇಶ ಬಂದ ಹಿನ್ನೆಲೆಯಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಜರುಗಿತು.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸೀಮಾ ಸುಂಕದ ಹಾಗೂ ಕ್ವೀನ್ಸ್‌ ರಸ್ತೆಯ ಜಿಎಸ್‌ಟಿ ಮತ್ತು ಸೀಮಾ ಸುಂಕದ ಕಚೇರಿಗಳಿಗೆ ಬುಧವಾರ ರಾತ್ರಿ ಸ್ಫೋಟಿಸುವುದಾಗಿ ಇ.ಮೇಲ್‌ ಸಂದೇಶ ಬಂದಿತ್ತು. ಈ ವಿಚಾರ ತಿಳಿದ ತಕ್ಷಣವೇ ಪೊಲೀಸರ ತಪಾಸಣೆ ನಡೆಸಿದ ಬಳಿಕ ಹುಸಿ ಬೆದರಿಕೆ ಸಂದೇಶ ಎಂಬುದು ಖಚಿತವಾಗಿದೆ. ಬಳಿಕ ಆತಂಕ ದೂರವಾಗಿದೆ.

ಜಿಎಸ್‌ಟಿ ಮತ್ತು ಸೀಮಾ ಸುಂಕದ ಉಪ ಆಯುಕ್ತ ನಾಗಾರ್ಜುನ ಅವರಿಗೆ ‘ನಿಮ್ಮ ಕಚೇರಿಯಲ್ಲಿ ಬಾಂಬ್‌ ಇಡಲಾಗಿದೆ’ ಎಂದು ಗೋವಿಂದ್‌ಸಿಂಗ್‌ ಹೆಸರಿನಲ್ಲಿ ಇಮೇಲ್‌ ಸಂದೇಶ ಬಂದಿದೆ. ಈ ಸಂದೇಶವನ್ನು ರಾತ್ರಿ ನೋಡಿದ ಉಪ ಆಯುಕ್ತರು, ತಕ್ಷಣವೇ ನಗರದ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.

ಕೂಡಲೇ ಜಿಎಸ್‌ಟಿ ಕಚೇರಿ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್‌್ತ ಕಲ್ಪಿಸಿದ ಅಧಿಕಾರಿಗಳು, ರಾತ್ರಿಯಿಂದಲೇ ಸುತ್ತಮುತ್ತ ತಪಾಸಣೆ ನಡೆಸಿದ್ದಾರೆ. ಬಳಿಕ ಗುರುವಾರ ಬೆಳಗ್ಗೆ ಕಚೇರಿಯಂದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಹೊರ ಕಳುಹಿಸಿ ಜಿಎಸ್‌ಟಿ ಕಚೇರಿಯನ್ನು ಶ್ವಾನದಳ ಹಾಗೂ ಬಾಂಬ್‌ ನಿಷ್ಕಿ್ರಯ ದಳಗಳು ತೀವ್ರ ತಪಾಸಣೆ ನಡೆಸಿವೆ. ಈ ಶೋಧನ ಕಾರ್ಯಾಚರಣೆ ಬಳಿಕ ಅದೊಂದು ಹುಸಿ ಬಾಂಬ್‌ ಬೆದರಿಕೆ ಎಂದು ಪೊಲೀಸರು ಖಚಿತಪಡಿಸಿದ ನಂತರ ಜಿಎಸ್‌ಟಿ ಕಚೇರಿ ಅಧಿಕಾರಿ ಮತ್ತು ಸಿಬ್ಬಂದಿ ಸಹ ನಿರಾಳರಾಗಿದ್ದಾರೆ.

ಕ್ವೀನ್ಸ್‌ ರಸ್ತೆ ಬಳಿಕ ವಿಮಾನ ನಿಲ್ದಾಣದ ಕಾರ್ಗೋ ವಿಭಾಗದ ವ್ಯವಸ್ಥಾಪಕರಿಗೆ ಸಹ ಇಮೇಲ್‌ ಸಂದೇಶ ಗೊತ್ತಾಗಿದೆ. ಕೂಡಲೇ ಅವರು ಸಹ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 ಸರ್ಚ್ ವಾರೆಂಟ್‌ ಕೇಳಿದ!

ಬಾಂಬ್‌ ಬೆದರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೂರ್ವ ವಿಭಾಗದ ಪೊಲೀಸರು, ಇಮೇಲ್‌ ಸಂದೇಶದ ಮೂಲವನ್ನು ಹುಡುಕಾಟ ಶುರು ಮಾಡಿದ್ದಾರೆ. ಈ ಸಂಬಂಧ ಶಂಕೆ ಮೇರೆಗೆ ವ್ಯಕ್ತಿಯೊಬ್ಬನನ್ನು ರಾತ್ರಿಯೇ ಮಿಂಚಿನ ಕಾರ್ಯಾಚರಣೆ ನಡೆಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಮೇಲ್‌ ಸಂದೇಶದ ಐಪಿ ಹಾಗೂ ಮೊಬೈಲ್‌ ಕರೆಗಳು ಮಾಹಿತಿ ಆಧರಿಸಿ ಹುಸಿ ಬೆದರಿಕೆ ಸಂದೇಶ ಕಳುಹಿಸಿದ್ದ ವ್ಯಕ್ತಿಯನ್ನು ಜೆ.ಪಿ.ನಗರದಲ್ಲಿ ಪತ್ತೆ ಹಚ್ಚಲಾಗಿದೆ. ಆತನ ಮನೆಗೆ ತೆರಳಿದಾಗ ಪೊಲೀಸರಿಗೆ ಸಚ್‌ರ್‍ ವಾರೆಂಟ್‌ ಬಗ್ಗೆ ಮೂರ್ಖತನದಿಂದ ಪ್ರಶ್ನಿಸಿದ್ದಾನೆ. ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಮನೆ ತಪಾಸಣೆಗೆ ವಾರೆಂಟ್‌ ಅಗತ್ಯವಿಲ್ಲ. ಆ ಶಂಕಿತ ವ್ಯಕ್ತಿಯ ವಿಚಾರಣೆ ನಡೆದಿದೆ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಸುದ್ದಿಗಾರರಿಗೆ ತಿಳಿಸಿದರು.

ಈ ಘಟನೆ ಸಂಬಂಧ ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.