ಬಂದೂಕು ತೋರಿಸಿ ಸಾರ್ವಜನಿಕರಿಂದ ಬಡ್ಡಿ ವಸೂಲಿಗೆ ಮಾಡುತ್ತಿದ್ದ ಕುಖ್ಯಾತ ಬಡ್ಡಿ ದಂಧೆಕೋರನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು [ಅ.21]: ಬಂದೂಕು ತೋರಿಸಿ ಸಾರ್ವಜನಿಕರಿಂದ ಬಡ್ಡಿ ವಸೂಲಿಗೆ ಮಾಡುತ್ತಿದ್ದ ಕುಖ್ಯಾತ ಬಡ್ಡಿ ದಂಧೆಕೋರನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜಪೇಟೆಯ ಬಿಎಂಕೆ ಲೇಔಟ್‌ನ ಮಂಜುನಾಥ್‌ ಅಲಿಯಾಸ್‌ ಗೋಲ್ಡ್‌ ಮಂಜ ಬಂಧಿತನಾಗಿದ್ದು, ಆರೋಪಿಯಿಂದ ಹಣ ಹಾಗೂ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಉದ್ಯಮಿ ವಿ.ಶೇಖರ್‌ ಎಂಬುವವರಿಗೆ ಬೆದರಿಸಿ ಮಂಜ ಸಾಲ ವಸೂಲಿಗೆ ಯತ್ನಿಸಿದ್ದ. ಈ ಬಗ್ಗೆ ದಾಖಲಾದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಲವು ವರ್ಷಗಳಿಂದ ಫೈನಾನ್ಸ್‌ ವ್ಯವಹಾರದಲ್ಲಿ ಚಾಮರಾಜಪೇಟೆ ಮಂಜ ತೊಡಗಿದ್ದು, ಈ ದಂಧೆ ರಕ್ಷಣೆಗೆ ಅನಧಿಕೃತವಾಗಿ ಖಾಸಗಿ ಅಂಗರಕ್ಷಕರನ್ನು ನೇಮಿಸಿಕೊಂಡಿದ್ದ. ಇನ್ನು ಜೀವ ರಕ್ಷಣೆ ಸಲುವಾಗಿ ಒಂದು ಪಿಸ್ತೂಲ್‌ ಮತ್ತು ಡಬಲ್‌ ಬ್ಯಾರಲ್‌ ಬಂದೂಕಿಗೆ ಪರವಾನಗಿ ಪಡೆದಿದ್ದ ಆರೋಪಿ, ಆ ಪರವಾನಗಿ ಬಳಸಿಕೊಂಡು ಹೆಚ್ಚುವರಿ ಬಂದೂಕುಗಳನ್ನು ಖರೀದಿಸಿದ್ದ.

ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅ.3ರಂದು ಯಾವುದೇ ಅಧಿಕೃತ ಸಂಸ್ಥೆಯ ಅನುಮತಿ ಪಡೆದುಕೊಳ್ಳದೇ ಡಬಲ್‌ ಬ್ಯಾರಲ್‌ ಗನ್‌ ಹೊಂದಿರುವ ಬಸಯ್ಯ ಸ್ವಾಮಿ ಎಂಬಾತನನ್ನು ಅಂಗರಕ್ಷನನ್ನಾಗಿ ನೇಮಿಸಿಕೊಂಡಿದ್ದ. ಇನ್ನು ಸದಾ ಮೈ ಮೇಲೆ ಕೆ.ಜಿ ತೂಗುವಷ್ಟು ಚಿನ್ನಾಭರಣ ಧರಿಸುತ್ತಿದ್ದ. ಹೀಗಾಗಿ ಆತನಿಗೆ ಗೋಲ್ಡ್‌ ಮಂಜ ಎಂಬ ಅಡ್ಡ ಹೆಸರು ಬಂದಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.

ತನ್ನಿಂದ ಸಾಲ ಪಡೆದ ಜನರು ನಿಗದಿತ ವೇಳೆಗೆ ಸಾಲ ಮತ್ತು ಬಡ್ಡಿ ಪಾವತಿಸದೆ ಹೋದರೆ ಮಂಜ, ತನ್ನ ಅಂಗರಕ್ಷಕರನ್ನು ಕಳುಹಿಸಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ. ಇದೇ ರೀತಿ ಉದ್ಯಮಿ ಶೇಖರ್‌ ಅವರಿಗೆ ಸಹ ಆರೋಪಿ ಕಿರುಕುಳ ನೀಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸರು ವಿವರಿಸಿದ್ದಾರೆ.