ಬೆಂಗಳೂರು [ಅ.26]:  ಏಕ ಬೆಳೆ ಪದ್ಧತಿಗಿಂತ ಸಮಗ್ರ ಕೃಷಿ ಪದ್ಧತಿ ಅನುಸರಿಸಿ ಸಾಫ್ಟ್‌ವೇರ್‌ ಉದ್ಯೋಗಿಗಿಂತ ಹೆಚ್ಚು ಸಂಪಾದನೆ ಮಾಡಬಹುದು ಎಂಬುದನ್ನು ಸಾಧಿಸಿ ಯಶಸ್ವಿಯಾದ ಕೃಷಿಕ ಮಹಿಳೆಯೊಬ್ಬರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕ್ಯಾನ್‌ಬ್ಯಾಂಕ್‌ ರಾಜ್ಯಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಿದೆ.

ಒಣ ಬೇಸಾಯದಲ್ಲಿ ಒಂದು ಬೆಳೆ ಬೆಳೆದು ಕೈಸುಟ್ಟುಕೊಂಡಿದ್ದ ದೊಡ್ಡಬಳ್ಳಾಪುರದ ಹುಸ್ಕೂರಿನ ಪಿ.ಮಂಜುಳಾ ಅವರು, ಸಮಗ್ರ ಕೃಷಿಯಿಂದ ಇದೀಗ ವರ್ಷಕ್ಕೆ ಎಂಟರಿಂದ ಹತ್ತು ಲಕ್ಷ ರು. ಲಾಭ ಪಡೆಯುತ್ತಿದ್ದಾರೆ. ಮಂಜುಳಾ ಅವರು 10 ವರ್ಷಗಳ ಹಿಂದೆ ಮಳೆ ಆಶ್ರಯದಲ್ಲಿ ಜೋಳ, ರಾಗಿ ಬೆಳೆಯುತ್ತಿದ್ದರು. ಮಳೆ ಬಂದರೆ ಬೆಳೆ, ಇಲ್ಲವೇ ಹೊರೆ ಎನ್ನುವ ಜೀವನದಿಂದ ಬೇಸತ್ತಿದ್ದರು.

ಆನಂತರ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಬೋರ್‌ವೆಲ್‌ ಹಾಕಿಸಿ, ಬಳ್ಳಿ ಬೆಳೆಗಳಾದ ಕುಂಬಳ, ಸೋರೆ ಇತ್ಯಾದಿ ಬೆಳೆದಿದ್ದರು. ಬಳಿಕ ಒಣ ಬೇಸಾಯ ಪದ್ಧತಿಯಲ್ಲಿ ಎರಡು ಎಕರೆ ಜಾಗದಲ್ಲಿ ಬೆಂಗಳೂರು ಬ್ಲೂ ದ್ರಾಕ್ಷಿ ತಳಿ ಬೆಳೆದಿದ್ದರು. ಫಸಲೇನೋ ಚೆನ್ನಾಗಿಯೇ ಬಂದಿತ್ತು. ಆದರೆ, ಮಧ್ಯವರ್ತಿಗಳಿಂದ ಫಸಲಿಗೆ ತಕ್ಕ ಫಲ ಸಿಗಲಿಲ್ಲ.

ಕಡೆಯದಾಗಿ ಕೃಷಿ ಇಲಾಖೆ, ಜಿವಿಕೆ ಕೇಂದ್ರಗಳನ್ನು ಸಂಪರ್ಕಿಸಿದ್ದ ಮಂಜುಳಾ ಅವರು, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಮನಸು ಮಾಡಿದರು. ತಾವು ಬೆಳೆದ ಸೀಬೆ, ಪಪ್ಪಾಯ, ಬಾಳೆ ಇತ್ಯಾದಿ ಹಣ್ಣುಗಳು, ಕುಂಬಳ, ಸೋರೆ ಮುಂತಾದ ತರಕಾರಿಗಳನ್ನು ನೇರವಾಗಿಯೇ ರಿಲಾಯನ್ಸ್‌ ಕಂಪನಿ ಮಾಲ್‌ಗೆ ಮಾರಾಟ ಮಾಡುವ ಮೂಲಕ ಲಾಭ ಗಳಿಸುತ್ತಿದ್ದಾರೆ.

ತಮ್ಮ 6.31 ಎಕರೆ ಪ್ರದೇಶದಲ್ಲಿ ಆಹಾರ ಬೆಳೆಗಳಾದ ರಾಗಿ, ಜೋಳ, ಶೇಂಗಾ, ಹುರುಳಿ ಮತ್ತು ಸಿರಿಧಾನ್ಯಗಳಾದ ಊದಲು, ಕೊರಲೆ ಮತ್ತು ಸೀಬೆ, ಬಾಳೆ, ಪಪ್ಪಾಯ, ಮೆಣಸಿನಕಾಯಿ, ಸಿಹಿ ಕುಂಬಳ, ಹೀರೆಕಾಯಿ, ಸೋರೆಕಾಯಿ ಬೆಳೆಯುತ್ತಿದ್ದಾರೆ. ತೋಟದ ಬದುಗಳ ಮೇಲೆ ಸಿಲ್ವರ್‌, ಓಕ್‌, ಬೇವು, ಹೊಂಗೆ, ಹುಣಸೆ, ನೇರಳೆ ಇತ್ಯಾದಿ ಮರಗಳನ್ನು ಬೆಳೆದು ಅರಣ್ಯ ಕೃಷಿಗೆ ಹೆಚ್ಚು ಒತ್ತು ನೀಡಿದ್ದಾರೆ. ಅರಣ್ಯ ಕೃಷಿಯನ್ನು ರೈತರ ಇನ್ಶೂರೆನ್ಸ್‌ ಎಂದೇ ವ್ಯಾಖ್ಯಾನಿಸಲಾಗುತ್ತಿದ್ದು, ಭವಿಷ್ಯದಲ್ಲಿ ಲಾಭ ತಂದುಕೊಡುವ ಪದ್ಧತಿಯಾಗಿದೆ.

ಇಷ್ಟಕ್ಕೆ ಸುಮ್ಮನಾಗದ ಮಂಜುಳಾ ಅವರು, ಸುಸ್ಥಿರ ಕೃಷಿಗಾಗಿ ಎರಡು ಹಸು, ಎರಡು ಕುರಿ, 12 ಕೋಳಿ ಸಾಕಣೆ ಮಾಡಿ ವಾರ್ಷಿಕ 85ರಿಂದ 90 ಸಾವಿರ ಲಾಭ ಪಡೆಯುತ್ತಿದ್ದಾರೆ. ಜತೆಗೆ ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿ, ಮೀನು ಸಾಕಾಣೆ ಮಾಡುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬದುಕು ನೀಡುವ ಮಣ್ಣು ಮತ್ತು ಆಹಾರಕ್ಕೆ ವಿಷವುಣಿಸಬಾರದು ಎಂದು ನಿರ್ಧರಿಸಿದ್ದು ಸಾವಯವ ಕೃಷಿ ಆರಂಭಿಸಿದ್ದೇವೆ ಎನ್ನುತ್ತಾರೆ ಕ್ಯಾನ್‌ಬ್ಯಾಂಕ್‌ ರಾಜ್ಯಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ ಪಡೆದ ಪಿ.ಮಂಜುಳಾ.

ಐದು ಎಕರೆಗೆ ಕೊಳವೆಬಾವಿ ಹಾಕಿಸಿದ್ದೇನೆ. 640 ಸೀಬೆ ಗಿಡ, ಪಪ್ಪಾಯ, ಬಾಳೆ ಬೆಳೆದಿದ್ದು, ಇದೀಗ ಫಸಲು ಬಿಡುತ್ತಿದೆ. ಮಧ್ಯವರ್ತಿಗಳ ಸಹಾಯವಿಲ್ಲದೇ ನೇರವಾಗಿ ಫಸಲು ಮಾರಾಟ ಮಾಡುತ್ತಿದ್ದು, ವಾರ್ಷಿಕ 8ರಿಂದ 10 ಲಕ್ಷ ರು.ಲಾಭ ಪಡೆಯುತ್ತಿದ್ದೇವೆ. ಕೂಲಿ ಆಳುಗಳ ಬದಲು ಮನೆಯವರೇ ಹೆಚ್ಚಾಗಿ ಕೃಷಿ ಚಟುವಟಿಕೆ ಮಾಡುತ್ತಿದ್ದು ಸಮಗ್ರ ಕೃಷಿ ಕೈ ಹಿಡಿದಿದೆ.

-ಪಿ.ಮಂಜುಳಾ, ಸಾಧಕ ಕೃಷಿ ಮಹಿಳೆ.