ಬೆಂಗಳೂರು [ಅ.23]:  ಪುತ್ರಿಯ ಹೆಸರನ್ನೇ ಬಂಡವಾಳ ಮಾಡಿಕೊಂಡ ದಂಪತಿ, ‘ನಮ್ಮ ಪುತ್ರಿಯೊಂದಿಗೆ ಇರುವ ನಿಮ್ಮ ಪುತ್ರನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆ’ ಎಂದು ಬೆದರಿಸಿ ಪ್ರಾಧ್ಯಾಪಕ ತಂದೆ ತಾಯಿಯಿಂದ ಬರೋಬ್ಬರಿ 42 ಲಕ್ಷ ರು. ಸುಲಿಗೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಾಧ್ಯಾಪಕರಿಗೆ ವಂಚಿಸಿದ್ದ ದಂಪತಿ ಇದೀಗ ಮಲ್ಲೇಶ್ವರಂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಲ್ಲೇಶ್ವರ ನಿವಾಸಿಗಳಾದ ಲೀನಾ ಕವಿತಾ (45) ಹಾಗೂ ಈಕೆಯ ಪತಿ ಪ್ರಮೋದ್‌ ಕುಮಾರ್‌ ಬಂಧಿತರು. ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಪ್ರಾಧ್ಯಾಪಕರ ಪುತ್ರನೊಬ್ಬ ಡೇಟಿಂಗ್‌ ಆ್ಯಪ್‌ನಲ್ಲಿ ಯುವತಿಯೊಬ್ಬರನ್ನು ಪರಿಚಯ ಮಾಡಿಕೊಂಡಿದ್ದ. ಯುವತಿಯನ್ನು ಯುವಕ ನಗರದ ಲಾಡ್ಜ್‌ವೊಂದಕ್ಕೆ ಕರೆದೊಯ್ದಿದ್ದ. ಈ ವಿಚಾರ ತಿಳಿದ ಆರೋಪಿ ದಂಪತಿ ಪ್ರಾಧ್ಯಾಪಕ ದಂಪತಿಗೆ ಕರೆ ಮಾಡಿ, ನಿಮ್ಮ ಪುತ್ರ ನಮ್ಮ ಪುತ್ರಿಯೊಂದಿಗೆ ಇರುವ ಖಾಸಗಿ ಫೋಟೋ ಮತ್ತು ವಿಡಿಯೋಗಳಿವೆ. ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆ ಎಂದು ಬೆದರಿಸಿದ್ದರು. ಹೆದರಿದ ಪ್ರಾಧ್ಯಾಪಕ ದಂಪತಿ ಆರೋಪಿಗಳನ್ನು ಹೋಟೆಲ್‌ವೊಂದರಲ್ಲಿ ಭೇಟಿಯಾಗಿದ್ದರು. ಈ ವೇಳೆ ಆರೋಪಿಗಳು ನಮ್ಮ ಪುತ್ರಿ ಗರ್ಭಿಣಿಯಾಗಿದ್ದಾಳೆ. ಇದಕ್ಕೆ ನಿಮ್ಮ ಪುತ್ರ, ನಮ್ಮ ಪುತ್ರಿಯೊಂದಿಗೆ ಲಾಡ್ಜ್‌ನಲ್ಲಿರುವ ವಿಡಿಯೋಗಳೇ ಸಾಕ್ಷಿ. ಪುತ್ರಿಗೆ ಆಗಿರುವ ಅನ್ಯಾಯದ ಬಗ್ಗೆ ಮಾಧ್ಯಮಗಳ ಬಳಿ ತೆರಳಿ ನ್ಯಾಯಾ ಕೇಳುತ್ತೇವೆ. 1 ಕೋಟಿ ರು. ನೀಡಿದರೆ ಸುಮ್ಮನಾಗುತ್ತೇವೆ ಎಂದಿದ್ದರು. ಗೌರವಕ್ಕೆ ಅಂಜಿದ ದಂಪತಿ 22 ಲಕ್ಷ ರು. ಚೆಕ್‌ ನೀಡಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಚೆಕ್‌ ಪಡೆದ ಮರುದಿನವೇ ಪುನಃ ಪ್ರಾಧ್ಯಾಪಕ ದಂಪತಿಗೆ ಕರೆ ಮಾಡಿ ಪುತ್ರಿಗೆ ಗರ್ಭಪಾತ ಮಾಡಿಸಲು 20 ಲಕ್ಷ ರು. ವೆಚ್ಚ ಆಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. 20 ಲಕ್ಷ ರು. ಕೊಡುವಂತೆ ಒತ್ತಾಯಿಸಿದ್ದರು. ಎರಡನೇ ಬಾರಿ ದೂರುದಾರರು ಲೀನಾ ಕವಿತಾಳ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು. ಇಷ್ಟಾದರೂ ಸುಮ್ಮನಾಗದ ಆರೋಪಿಗಳು ಪುನಃ ಹಣಕ್ಕೆ ಬೇಡಿಕೆ ಇಟ್ಟಾಗ ಠಾಣೆ ಮೆಟ್ಟಿಲೇರಿದ್ದಾರೆ. ಆರೋಪಿಗಳು ಐದು ತಿಂಗಳ ಅವಧಿಯಲ್ಲಿ ಬರೋಬ್ಬರಿ 42 ಲಕ್ಷ ರು. ಸುಲಿಗೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.