Asianet Suvarna News Asianet Suvarna News

ರಾಜಕಾಲುವೆ ಸ್ವಚ್ಛತೆಗೆ ಗುತ್ತಿಗೆದಾರರ ನಿರ್ಲಕ್ಷ್ಯ!

ಬಿಬಿಎಂಪಿ ಬೃಹತ್‌ ರಾಜಕಾಲುವೆಗಳ ವಾರ್ಷಿಕ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಿದ್ದರೂ ಅಸಮರ್ಪಕ ನಿರ್ವಹಣೆಯಿಂದಾಗಿ ನೀರು ಸರಾಗವಾಗಿ ಹರಿಯದೆ ಹಲವೆಡೆ ದುರ್ವಾಸನೆ ಬೀರುತ್ತಿದೆ, ಅಲ್ಲದೆ ವಿವಿಧೆಡೆ ಮಳೆಯಿಂದ ಪ್ರವಾಹದ ಭೀತಿ ಎದುರಾಗಿದೆ.

Contactor Neglect For Cleaning Rajakaluve in Bengaluru
Author
Bengaluru, First Published Oct 13, 2019, 8:30 AM IST

ಬೆಂಗಳೂರು [ಅ.13]:  ಮಳೆ ಅನಾಹುತ ತಡೆ ಹಾಗೂ ಸ್ವಚ್ಛತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಬಿಬಿಎಂಪಿ ಬೃಹತ್‌ ರಾಜಕಾಲುವೆಗಳ ವಾರ್ಷಿಕ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಿದ್ದರೂ ಅಸಮರ್ಪಕ ನಿರ್ವಹಣೆಯಿಂದಾಗಿ ನೀರು ಸರಾಗವಾಗಿ ಹರಿಯದೆ ಹಲವೆಡೆ ದುರ್ವಾಸನೆ ಬೀರುತ್ತಿದೆ, ಅಲ್ಲದೆ ವಿವಿಧೆಡೆ ಮಳೆಯಿಂದ ಪ್ರವಾಹದ ಭೀತಿ ಎದುರಾಗಿದೆ.

ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣೆಯಲ್ಲಿ ಬೆಂಗಳೂರಿಗೆ ಉತ್ತಮ ಸ್ಥಾನ ಪಡೆಯುವಲ್ಲಿ ಪದೇ ಪದೇ ವಿಫಲವಾಗುತ್ತಿರುವ ಬಿಬಿಎಂಪಿ ಮುಂದಿನ ಭಾರಿ ಹೇಗಾದರೂ ಮಾಡಿ ಸ್ವಚ್ಛತೆಯಲ್ಲಿ ಸಮಾಧಾನಕರ ಸ್ಥಾನಕ್ಕಾದರೂ ಏರುವ ಗುರಿಯೊಂದಿಗೆ ಹಸಿ ತ್ಯಾಜ್ಯ ನಿರ್ವಹಣೆಗೆ ವಾರ್ಡ್‌ವಾರು ಟೆಂಡರ್‌, ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳ ತಡೆ, ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆಯಂತಹ ಪ್ರಕರಣಗಳ ನಿಯಂತ್ರಣಕ್ಕೆ ನಿರಂತರ ದಾಳಿ, ಮಳಿಗೆಗಳಿಗೆ ದಂಡ ವಿಧಿಸಿ ಬೀಗ ಹಾಕುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ.

ಅದೇ ರೀತಿ ನಗರದ ರಾಜಕಾಲುವೆಗಳನ್ನೂ ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆಗೆ ಮಳೆಗಾಲದಲ್ಲಿ ಕಾಲುವೆಗಳು ತುಂಬಿ ಹರಿದು ಅನಾಹುತಗಳಾಗುವುದನ್ನು ತಪ್ಪಿಸಲು ಯೋಜಿಸಿತ್ತು. ಇದಕ್ಕಾಗಿ ನಗರದ 842 ಕಿ.ಮೀ. ಉದ್ದದ ರಾಜಕಾಲುವೆ ಪೈಕಿ ದುರಸ್ತಿ ಕಾರ್ಯ ಪೂರ್ಣಗೊಂಡಿರುವ 440 ಕಿ.ಮೀ. ಉದ್ದದ ರಾಜಕಾಲುವೆಗಳನ್ನು ವರ್ಷ ಪೂರ್ತಿ ನಿರ್ವಹಿಸಲು ಟೆಂಡರ್‌ ನೀಡಿತ್ತು. ಇದೇ ಮೊದಲ ಬಾರಿಗೆ ಇಡೀ ವರ್ಷ ಸ್ವಚ್ಛತೆ ನಿರ್ವಹಣೆಗಾಗಿ ಯೋಗ ಮತ್ತು ಕಂಪನಿ ಎಂಬ ಖಾಸಗಿ ಸಂಸ್ಥೆಗೆ ವಾರ್ಷಿಕ .36 ಕೋಟಿನಂತೆ ಮೂರು ವರ್ಷಕ್ಕೆ ಟೆಂಡರ್‌ ನೀಡಿದೆ. ಉಳಿದೆಡೆ ದುರಸ್ತಿ ಕಾರ್ಯ ಬಾಕಿ ಇದೆ.

ಆದರೂ, ಲಿಂಗರಾಜಪುರ, ದೊಮ್ಮಲೂರು, ಹಲಸೂರು, ಸಂಪಂಗಿ ರಾಮನಗರ, ಗಣೇಶ ದೇವಸ್ಥಾನ, ಸಿಲ್‌್ಕಬೋರ್ಡ್‌ ಜಂಕ್ಷನ್‌, ಕೋರಮಂಗಲ, ವಿಭೂತಿಪುರ ಕೆರೆ, ಹೂಡಿ, ಕೆಂಪಾಪುರ, ಮೈಸೂರು ರಸ್ತೆಯ ಬೆಂಗಳೂರು ವಿವಿ ಗೇಟ್‌ ಸಮೀಪ, ಯಶವಂತಪುರ, ದುಬಾಸಿಪಾಳ್ಯ, ಶಾಂತಿನಗರ, ಕೋರಮಂಗಲ ಸೇರಿದಂತೆ ನಗರದ ಹಲವೆಡೆ ರಾಜಕಾಲುವೆಗಳ ಸಮರ್ಪಕ ನಿರ್ವಹಣೆಯಾಗಿಲ್ಲ. ಇದರಿಂದ ನೀರು ಸರಿಯಾಗಿ ಹರಿಯದೆ ನಿಂತಲ್ಲೇ ನಿಂತು ದುರ್ವಾಸನೆ ಬೀರುತ್ತಿದೆ.

ಇನ್ನು, ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನ ಬಳಿ, ನಾಯಂಡಹಳ್ಳಿ ಜಂಕ್ಷನ್‌, ಕುರುಬರಹಳ್ಳಿ, ವಿವೇಕನಗರ, ಆನೇಪಾಳ್ಯ, ಆಸ್ಟಿನ್‌ ಟೌನ್‌, ಸುಮ್ಮನಹಳ್ಳಿ ಸೇರಿದಂತೆ ಇನ್ನೂ ಹಲವೆಡೆ ರಾಶಿಗಟ್ಟಲೆ ಕಟ್ಟಡ ತ್ಯಾಜ್ಯ, ಬಟ್ಟೆ, ಕಾರ್ಖಾನೆ ತ್ಯಾಜ್ಯಗಳು ಅಲ್ಲಲ್ಲಿ ಕೊಳೆಯುತ್ತಿದ್ದು, ದುರ್ವಾಸನೆ ರಾಚುತ್ತಿದೆ. ಜತೆಗೆ ಜೋರು ಮಳೆ ಬಂದರೆ ಇಂತಹ ಪ್ರದೇಶಗಳಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಪ್ರವಾಹವಾಗುವ ಭೀತಿ ಸ್ಥಳೀಯ ಜನರಲ್ಲಿ ಕಾಡುತ್ತಿದೆ. ರಾಜಕಾಲುವೆ ನಿರ್ವಹಣೆ ಟೆಂಡರ್‌ ನೀಡಿದ ಬಿಬಿಎಂಪಿ ಟೆಂಡರ್‌ ನಿಯಮಾವಳಿಯಂತೆ ನಿರ್ವಹಣೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸದೆ ಕೈಕಟ್ಟಿಕುಳಿತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಗೊಂದಲ:  ಬಿಬಿಎಂಪಿ ರಾಜಕಾಲುವೆಗಳ ವರ್ಷ ಪೂರ್ತಿ ಸ್ವಚ್ಛತೆಗೆ ಟೆಂಡರ್‌ ನೀಡುವ ಮುನ್ನ ಸುಮಾರು 200 ಕಿ.ಮೀ ಉದ್ದದ ರಾಜಕಾಲುವೆಯನ್ನು ಒಂದು ಬಾರಿ ಸ್ವಚ್ಛತೆ (ಒನ್‌ ಟೈಮ್‌ ಕ್ಲೀನಿಂಗ್‌) ಅಡಿ .36.40 ಕೋಟಿ ವೆಚ್ಚ ಮಾಡಿತ್ತು. ನಂತರ ಯೋಗ ಮತ್ತು ಕಂಪನಿ ಸಂಸ್ಥೆಗೆ ಮೂರು ವರ್ಷಗಳ ನಿರ್ವಹಣೆಗೆ ವಾರ್ಷಿಕ .37 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಟೆಂಡರ್‌ ನಿಯಮವಳಿ ಪ್ರಕಾರ ರಾಜಕಾಲುವೆ ಸ್ವಚ್ಛತೆ ನಿರ್ವಹಣೆ ವಿಫಲವಾದರೆ ಟೆಂಡರ್‌ ರದ್ದಿಗೂ ಅವಕಾಶವಿದೆ. ಆದರೆ, ಗುತ್ತಿಗೆ ನೀಡಿದ ನಂತರ ಯಾವ ಮಾರ್ಗ ಅಥವಾ ಯಾವ ಪ್ರದೇಶದ ರಾಜಕಾಲುವೆಯನ್ನು ಗುತ್ತಿಗೆ ಪಡೆದ ಖಾಸಗಿ ಸಂಸ್ಥೆ ನಿರ್ವಹಿಸಬೇಕು, ಬಿಬಿಎಂಪಿಯಿಂದ ಯಾವ ಮಾರ್ಗದ ಕಾಲುವೆ ನಿರ್ವಹಣೆ ಮಾಡಬೇಕೆಂಬ ಸಮರ್ಪಕ ವಿಂಗಡಣೆಯಲ್ಲಿ ಆಗಿರುವ ಎಡವಟ್ಟಿನಿಂದ ಸ್ವಚ್ಛತಾ ಕಾರ್ಯ ತಡವಾಗುತ್ತಿದೆ ಎನ್ನಲಾಗಿದೆ.

ಇದರಿಂದ ಅತ್ತ ಪಾಲಿಕೆಯೂ ನಿರ್ವಹಣೆ ಇಲ್ಲ. ಇತ್ತ ಖಾಸಗಿ ಸಂಸ್ಥೆಯಿಂದಲೂ ನಿರ್ವಹಣೆಯಾಗುತ್ತಿಲ್ಲ. ಪರಿಣಾಮ ರಾಜಕಾಲುವೆಗಳಲ್ಲಿ ಕಸ ಹಾಗೂ ಹೂಳು ತುಂಬಿರುವುದರಿಂದ ನಗರದಲ್ಲಿ ಮಳೆಯ ತೀವ್ರತೆ ನಡುವೆ ಪ್ರವಾಹದ ಆತಂಕ ಸೃಷ್ಟಿಯಾಗಿದೆ. ರಾಜಕಾಲುವೆಗಳ ನಿರ್ವಹಣೆ ಹೊಣೆ ಹೊತ್ತಿದ್ದ ಖಾಸಗಿ ಕಂಪನಿ ಸರ್ಮಪಕವಾಗಿ ನಿರ್ವಹಣೆ ಮಾಡದಿರುವುರಿಂದ ಖಾಸಗಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಬಳಿಯ ರಾಜಕಾಲುವೆಯ ಸಮರ್ಪಕ ನಿರ್ವಹಣೆ ಆಗದಿರುವುದರಿಂದ ಇಲ್ಲಿನ ವ್ಯಾಪಾರಿಗಳಷ್ಟೇ ಅಲ್ಲ, ದೇವಸ್ಥಾನಕ್ಕೆ ಬರುವ ಭಕ್ತರಿಗೂ ಸಮಸ್ಯೆಯಾಗುತ್ತಿದೆ. ಈ ಸ್ಥಳದಲ್ಲಿ ರಾಜಕಾಲುವೆಯಿಂದ ದುರ್ವಾಸನೆ ತಪ್ಪಿದ ದಿನವೇ ಇಲ್ಲ. ಜೋರು ಮಳೆ ಬಂದರೆ ನೀರು ತುಂಬಿ ರಸ್ತೆ ಹಾಗೂ ದೇವಾಲಯದ ಒಳಗೆ ಹರಿಯುವ ಭೀತಿ ಎದುರಾಗುತ್ತದೆ.

-ರುದ್ರಣ್ಣ, ವ್ಯಾಪಾರಿ

ವೃಷಭಾವತಿ ಕಾಲುವೆಯುದ್ದಕ್ಕೂ ಹೂಳು ತುಂಬಿಹೋಗಿದೆ. ಯಾವುದೇ ಸ್ವಚ್ಛತಾ ಕಾರ್ಯ ನಡೆದ ಉದಾಹರಣೆಯೇ ಇಲ್ಲ. ಎರಡು ವರ್ಷಗಳ ಹಿಂದೆ ಈ ಮೋರಿಯಲ್ಲಿ ಓರ್ವ ಅರ್ಚಕರು ಸೇರಿದಂತೆ ಮೂರ್ನಾಲ್ಕು ಜನ ಸಾವನ್ನಪ್ಪಿದ್ದರು. ಈಗಲೂ ಸಮರ್ಪಕ ದುರಸ್ತಿ ಹಾಗೂ ನಿರ್ವಹಣೆ ಕಾರ್ಯ ಆಗುತ್ತಿಲ್ಲ. ಮಳೆ ಬಂದರೆ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗುವ ಭಯ ಕಾಡುತ್ತದೆ.

-ಸುಬ್ರಹ್ಮಣ್ಯ, ಕುರುಬರಹಳ್ಳಿ ನಿವಾಸಿ

ನಗರದ ಸ್ವಚ್ಛತೆ ಕಾಪಾಡುವುದು ಹಾಗೂ ಮಳೆ ಅನಾಹುತ ತಡೆಯುವ ದೃಷ್ಟಿಯಿಂದ ರಾಜಕಾಲುವೆ ನಿರ್ವಹಣೆಯನ್ನು ವರ್ಷಪೂರ್ತಿ ನಿರ್ವಹಿಸಲು ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಪಡೆದಿರುವ ಸಂಸ್ಥೆಯವರು ಟೆಂಡರ್‌ ನಿಯಮಾವಳಿಯಂತೆ ಸಮರ್ಪಕವಾಗಿ ನಿರ್ವಹಣಾ ಕಾರ್ಯ ಮಾಡದಿರುವುದು ಕಂಡುಬಂದರೆ ತಕ್ಷಣ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

-ಅನಿಲ್‌ ಕುಮಾರ್‌, ಬಿಬಿಎಂಪಿ ಆಯುಕ್ತ.

Follow Us:
Download App:
  • android
  • ios