ಬೆಂಗಳೂರು[ಅ.21]:  ನಗರದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಯತ್ನಿಸಿರುವ ಸಿಸಿಬಿ, ಎರಡು ತಿಂಗಳ ಅವಧಿಯಲ್ಲಿ 81 ದಾಳಿ ನಡೆಸಿ 556 ಮಂದಿಯನ್ನು ಬಂಧಿಸಿದ್ದಾರೆ.

ಮಾದಕ ವಸ್ತು ಮಾಫಿಯಾ, ವೈದ್ಯಕೀಯ ಸೀಟ್‌ ದಂಧೆ, ಕ್ರಿಕೆಟ್‌ ಬೆಟ್ಟಿಂಗ್‌, ಕ್ಲಬ್‌ಗಳ ಇಸ್ಪೀಟ್‌ ಅಡ್ಡೆ, ಲೈವ್‌ ಬ್ಯಾಂಡ್‌ ಹಾಗೂ ರೌಡಿಗಳ ವಿರುದ್ಧ ಕಾರ್ಯಾಚರಣೆ ನಡೆದಿದೆ. ಈ ವೇಳೆ ಬಂಧಿತರಿಂದ .2.15 ಕೋಟಿ ಹಣ ಜಪ್ತಿ ಮಾಡಲಾಗಿದೆ ಎಂದು ಜಂಟಿ ಪೊಲೀಸ್‌ ಆಯುಕ್ತ (ಅಪರಾಧ) ಸಂದೀಪ್‌ ಪಾಟೀಲ್‌ ತಿಳಿಸಿದರು.

ಮಾದಕ ವಸ್ತು ಸಂಬಂಧಿಸಿದ 13 ಪ್ರಕರಣಗಳು ಪತ್ತೆ ಹಚ್ಚಲಾಗಿದ್ದು, 30 ಮಂದಿ ಬಂಧಿತರಾಗಿದ್ದಾರೆ. ಮೂರು ವೈದ್ಯಕೀಯ ಸೀಟು ವಂಚನೆ ಪ್ರಕರಣಗಳಲ್ಲಿ ಆರೋಪಿಗಳ ಬಂಧನವಾಗಿದೆ. ಕ್ರಿಕೆಟ್‌ ಬೆಟ್ಟಿಂಗ್‌, ಮಟ್ಕಾ ಹಾಗೂ ಜೂಜಾಟ ಸಂಬಂಧ 23 ಪ್ರಕರಣಗಳಲ್ಲಿ 379 ಮಂದಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ. ದರೋಡೆಗೆ ಯತ್ನ, ಭದ್ರತಾ ಕಾಯ್ದೆ ಉಲ್ಲಂಘನೆ ಸೇರಿದಂತೆ ಇತರೆ ಕೃತ್ಯಗಳ ಸಂಬಂಧ 63 ರೌಡಿಗಳನ್ನು ಬಂಧಿಸಲಾಗಿದೆ ಎಂದು ಜಂಟಿ ಆಯುಕ್ತರು ವಿವರಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಭೂ ಮಾಫಿಯಾ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ. ಭೂ ವಿವಾದದ ಸಂಬಂಧ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಆಸ್ತಿ-ಪಾಸ್ತಿ ಕಬಳಿಕೆ ಸಂಬಂಧ ದಬ್ಬಾಳಿಕೆ ಬಗ್ಗೆ ಸಂತ್ರಸ್ತರು ನಿರ್ಭಯವಾಗಿ ದೂರು ದಾಖಲಿಸಿದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಸಂದೀಪ್‌ ಪಾಟೀಲ್‌ ಮನವಿ ಮಾಡಿದರು.

ಜೈಲಿನಲ್ಲಿ ಸಿಕ್ಕ ಮೊಬೈಲ್‌ ಪರಿಶೀಲನೆ

ಇತ್ತೀಚೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ನಡೆದಿದ್ದ ದಾಳಿ ವೇಳೆ ಪತ್ತೆಯಾಗಿರುವ ಎರಡು ಮೊಬೈಲ್‌ ಮೂಲಕ ಕೈದಿಗಳ ಹೊರಗಿನ ಸಂಪರ್ಕ ಜಾಲವನ್ನು ಭೇದಿಸಲು ಸಿಸಿಬಿ ಮುಂದಾಗಿದೆ. ಜೈಲಿನಲ್ಲಿ ಸಿಕ್ಕಿರುವ ಮೊಬೈಲ್‌ಗಳ ಕರೆಗಳ ವಿವರವನ್ನು ಕಲೆ ಹಾಕಲಾಗುತ್ತಿದೆ. ಆ ಮೊಬೈಲ್‌ನಲ್ಲಿ ಹತ್ತಾರು ಸಿಮ್‌ಗಳು ಬಳಕೆಯಾಗಿವೆ. ಹೀಗಾಗಿ ಪ್ರತಿಯೊಂದು ಸಿಮ್‌ನ ಒಳ ಮತ್ತು ಹೊರ ಬಂದಿರುವ ಕರೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಕೈದಿಗಳ ಸಂಪರ್ಕವನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಹೇಳಿದರು.