ಪೊಲೀಸ್ ನಾಗರಿಕರ ಮಧ್ಯೆ ಸಂಬಂಧದಲ್ಲಿ ಸುಧಾರಣೆ ತರಬಲ್ಲದೇ ಜನರಲ್ ಕಾರ್ಯಪ್ಪನವರ ಪ್ರೇರಣೆ?

ಜನವರಿ 15ರಂದು ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಜನರಲ್ ಕೆ ಎಂ ಕಾರ್ಯಪ್ಪನವರು ಭಾರತೀಯ ಸೇನೆಯ ಮೊದಲ ಭಾರತೀಯ ಮಹಾದಂಡನಾಯಕರಾದರು. 

Can General Cariappa's inspiration bring improvements in Karnataka police citizen relationship

ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಜನರಲ್ ಕೆ ಎಂ ಕಾರ್ಯಪ್ಪನವರು ಭಾರತೀಯ ಸೇನೆಯ ಪ್ರಥಮ ಮಹಾ ದಂಡನಾಯಕರಾಗಿ ನೇಮಕಗೊಂಡ ದಿನವನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷವೂ ಜನವರಿ 15ನ್ನು ಭಾರತೀಯ ಸೇನಾ ದಿನವನ್ನಾಗಿ ಆಚರಿಸಲಾಗುತ್ತದೆ. ಅದೇ ಮೊದಲಬಾರಿಗೆ ಓರ್ವ ಭಾರತೀಯ ವ್ಯಕ್ತಿ ಭಾರತೀಯ ಸೇನೆಯ ಮುಖ್ಯಸ್ಥನಾಗಿ ನೇಮಕಗೊಂಡಿದ್ದರಿಂದ, ಆ ದಿನ ಭಾರತದ ಇತಿಹಾಸದಲ್ಲಿ ಬಹಳ ಮುಖ್ಯ ದಿನವಾಗಿದೆ. ಆ ಬೆಳವಣಿಗೆ ಭಾರತದ ಸ್ವಾತಂತ್ರ್ಯದಲ್ಲಿ ಬಹಳ ದೊಡ್ಡ ಹೆಜ್ಜೆಯಾಗಿತ್ತು.

ಇನ್ನು ಮೂರು ದಿನಗಳಲ್ಲಿ ಭಾರತೀಯ ಸೇನೆ ಮತ್ತು ಭಾರತ ಜನವರಿ 15, 1949ರಂದು ಮೊದಲ ಭಾರತೀಯ ಜನರಲ್ (ಬಳಿಕ ಫೀಲ್ಡ್ ಮಾರ್ಷಲ್) ಜನರಲ್ ಕೆ ಎಂ ಕಾರ್ಯಪ್ಪನವರು ಭಾರತೀಯ ಸೇನೆಯ ಮುಖ್ಯಸ್ಥರಾದ ದಿನವನ್ನು ಸ್ಮರಿಸಲಿದ್ದಾರೆ. ಈ ದಿನ ಜನರಿಗೆ ಸೇವೆ ಸಲ್ಲಿಸುವಲ್ಲಿ ಭಾರತೀಯ ಸೇನೆಯ ಬದ್ಧತೆ ಮತ್ತು ಕೆ ಎಂ ಕಾರ್ಯಪ್ಪನವರು ಬಲವಾಗಿ ನಂಬಿದ್ದ ಜಾತ್ಯಾತೀತ ಮೌಲ್ಯಗಳನ್ನು ಎತ್ತಿಹಿಡಿಯಲು ಎಲ್ಲರಿಗೂ ನೆನಪಿಸುತ್ತದೆ.

ಭಾರತೀಯ ಸೇನೆಯ ಮಹಾ ದಂಡನಾಯಕರಾಗಿ ನೇಮಕಗೊಂಡ ಬಳಿಕ, ಜನರಲ್ ಕಾರ್ಯಪ್ಪನವರು ಶ್ರೀನಗರದಲ್ಲಿ ಮಾತನಾಡುತ್ತಾ, "ಭಾರತೀಯ ಸೇನೆ ಭಾರತದ ಜನರಿಗೆ ಸೇವೆ ಸಲ್ಲಿಸಲು, ಪ್ರಜಾಪ್ರಭುತ್ವವನ್ನು ರಕ್ಷಿಸಲು, ಮತ್ತು ದೇಶ ಬಹಳ ಕಷ್ಟಪಟ್ಟು ಹೋರಾಡಿ ಗಳಿಸಿದ ಸ್ವಾತಂತ್ರ್ಯವನ್ನು ರಕ್ಷಿಸಲು ಬದ್ಧವಾಗಿದೆ" ಎಂದಿದ್ದರು. ಭಾರತೀಯ ಸೇನೆಯ ಮೌಲ್ಯಗಳು ಮಹಾತ್ಮಾ ಗಾಂಧಿಯವರು ಬೋಧಿಸಿದ ಸತ್ಯ, ಪ್ರೀತಿ ಮತ್ತು ತ್ಯಾಗಗಳ ಮೌಲ್ಯಗಳನ್ನು ಆಧರಿಸಿವೆ ಎಂದು ಕಾರ್ಯಪ್ಪ ಹೇಳಿದ್ದರು.

ಸೇನೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಬಳಿಕ, ವಿಶೇಷ ಭಾಷಣ ಮಾಡಿದ್ದ (ಸ್ಪೆಷಲ್‌ ಆರ್ಡರ್ ಆಫ್ ದ ಡೇ) ಜನರಲ್ ಕಾರ್ಯಪ್ಪನವರು ಸ್ವತಂತ್ರ ಭಾರತದ ಸೇನೆ ಹೇಗೆ ತನ್ನ ಕಾರ್ಯಗಳನ್ನು ನಡೆಸಬೇಕು ಎಂಬ ಕುರಿತು ತನ್ನ ದೃಷ್ಟಿಯನ್ನು ವಿವರಿಸಿದ್ದರು. "ನಾವು ಎಂದಿಗೂ ಅತ್ಯಂತ ಹೆಚ್ಚಿನ ಗುಣಮಟ್ಟದ ಶಿಸ್ತು, ನೈತಿಕ ಮೌಲ್ಯಗಳು ಮತ್ತು ನಿಯತ್ತನ್ನು ಹೊಂದಿರಬೇಕು. ಇವುಗಳನ್ನು ಕೇವಲ ನಮ್ಮ ಹಿರಿಯ ಅಧಿಕಾರಿಗಳಿಗೆ ಮಾತ್ರ ತೋರಿಸುವುದಲ್ಲದೆ, ನಮ್ಮ ಸಹೋದ್ಯೋಗಿಗಳೊಡನೆಯೂ ಹಾಗೆಯೇ ನಡೆದುಕೊಳ್ಳಬೇಕು. ನಮ್ಮಲ್ಲಿ ಜವಾಬ್ದಾರಿಯ ಪ್ರಜ್ಞೆ ಸದಾ ಜಾಗೃತವಾಗಿರಬೇಕು" ಎಂದು ಕಾರ್ಯಪ್ಪನವರು ಹೇಳಿದ್ದರು.

"ಯಾವತ್ತಿಗೂ ನೆನಪಿಟ್ಟುಕೊಳ್ಳಬೇಕಾದ ವಿಚಾರವೆಂದರೆ, ಸೇನೆ ಮತ್ತು ಸೇನೆಯಲ್ಲಿರುವ ಎಲ್ಲವೂ ತೆರಿಗೆ ಪಾವತಿಸುತ್ತಿರುವ ನಾಗರಿಕರಿಗೆ ಸೇರಿದ್ದು, ಅದರ ಜವಾಬ್ದಾರಿ ನಿಭಾಯಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಇದರಲ್ಲಿ, ಜನರು, ಪ್ರಾಣಿಗಳು, ವಾಹನಗಳು, ಆಹಾರ, ಬಟ್ಟೆ, ಮನೆಗಳನ್ನು ರಕ್ಷಿಸುವುದೂ ಸೇರಿದೆ" ಎಂದು ಕಾರ್ಯಪ್ಪ ವಿವರಿಸಿದ್ದರು. ಅವರ ಭಾಷಣ ಸೇನೆಯಲ್ಲಿರುವ ಎಲ್ಲರಿಗೂ ಮಾರ್ಗದರ್ಶನ ನೀಡುವಂತಹ ಕೆಡೆಟ್‌ನ ಪ್ರಾರ್ಥನೆಯನ್ನೂ ಒಳಗೊಂಡಿತ್ತು.

ಈ ಪ್ರಾರ್ಥನೆ ದೇವರನ್ನು ಪ್ರಾಮಾಣಿಕತೆ ಮತ್ತು ಸತ್ಯಗಳ ಮೂಲಕ ಸಮೀಪಿಸಲು ಮಾರ್ಗದರ್ಶನವನ್ನು ಬೇಡುತ್ತದೆ. ನಂಬಿಕೆಯನ್ನಿಟ್ಟು, ಖುಷಿಯಿಂದ ಬದುಕಲು ಮತ್ತು ಪ್ರಾರ್ಥನೆಗಳಲ್ಲಿ ನಿಷ್ಠೆ ಹೊಂದಿರುವುದನ್ನು ಪ್ರತಿಪಾದಿಸುತ್ತದೆ. ಪ್ರಾಮಾಣಿಕತೆಯನ್ನು ಗೌರವಿಸುವ ಶಕ್ತಿ, ಸ್ಪಷ್ಟವಾಗಿ ಚಿಂತಿಸುವ ಸಾಮರ್ಥ್ಯ, ಬೂಟಾಟಿಕೆಗಳನ್ನು ತಿರಸ್ಕರಿಸುವ ಶಕ್ತಿ, ಮತ್ತು ಉನ್ನತ ಜೀವನಮಟ್ಟವನ್ನು ಸಾಧಿಸುವ ಗುರಿಯನ್ನು ಹೊಂದಲು ನೆರವಾಗುವಂತೆ ದೇವರಲ್ಲಿ ಕೋರುತ್ತದೆ. ಈ ಪ್ರಾರ್ಥನೆ, ತಪ್ಪು ಮಾಡುವುದು ಸುಲಭವಾದರೂ, ಅದರ ಬದಲು ಕಷ್ಟಕರವಾದರೂ ಸರಿಯಾದ ಮಾರ್ಗವನ್ನು ಆರಿಸಲು ಪ್ರೇರೇಪಿಸುತ್ತದೆ. ಅದರೊಡನೆ, ಅರ್ಧ ಸತ್ಯಗಳಿಗೆ ತೃಪ್ತಿ ಹೊಂದುವ ಬದಲು, ಪೂರ್ಣ ಸತ್ಯವನ್ನು ಪಡೆಯಲು ಶ್ರಮಿಸುವಂತೆ ಸೂಚಿಸುತ್ತದೆ.

ಸ್ವಯಂಪ್ರೇರಿತ ನಾಗರಿಕ ಮಿಲಿಟರಿ ತರಬೇತಿ

ಭಾರತೀಯ ಸೇನೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಜನರಲ್ ಕಾರ್ಯಪ್ಪನವರ ಆರಂಭಿಕ ನಿರ್ಧಾರಗಳಲ್ಲಿ ಆಸಕ್ತಿ ಹೊಂದಿರುವ ನಾಗರಿಕರಿಗೆ ತರಗತಿಗಳನ್ನು ನಡೆಸುವುದಾಗಿತ್ತು. ಈ ತರಗತಿಗಳು ಸಾರ್ವಜನಿಕರಲ್ಲಿ ಶಿಸ್ತನ್ನು ರೂಪಿಸಲು ಆರಂಭಿಕ ಹಂತದ ಮಿಲಿಟರಿ ತರಬೇತಿ ಒದಗಿಸುವ ಗುರಿ ಹೊಂದಿದ್ದವು.

ಈ ಯೋಜನೆಯ ಅಂಗವಾಗಿ, ಸ್ಥಳೀಯ ಪೊಲೀಸರ ನೆರವಿನಿಂದ ಒಂದು ಪೆರೇಡ್ ಮೈದಾನವನ್ನು ಆರಿಸಲಾಯಿತು. ಈ ತರಬೇತಿಯನ್ನು 18ರಿಂದ 35 ವರ್ಷ ವಯಸ್ಸಿನ ನಾಗರಿಕ ಸ್ವಯಂಸೇವಕರು ಪಡೆಯಬಹುದಿತ್ತು.

ಈ ಸ್ವಯಂಸೇವಕರನ್ನು 15ರಿಂದ 20 ಜನರ ಸಣ್ಣ ಸಣ್ಣ ಗುಂಪುಗಳಾಗಿ ವಿಭಜಿಸಲಾಗಿತ್ತು. ಪ್ರತಿಯೊಂದು ತಂಡಕ್ಕೂ ಓರ್ವ ನಾನ್ ಕಮಿಷನ್ಡ್ ಅಧಿಕಾರಿ (ಎನ್‌ಸಿಒ) ನೇತೃತ್ವ ವಹಿಸಿದ್ದರು. ಇವುಗಳಲ್ಲಿ ನಾಲ್ಕು ತಂಡಗಳ ಮೇಲುಸ್ತುವಾರಿಯನ್ನು ಜ್ಯೂನಿಯರ್ ಕಮಿಷನ್ಡ್ ಅಧಿಕಾರಿ (ಜೆಸಿಒ) ನೋಡಿಕೊಳ್ಳುತ್ತಿದ್ದರು. ಇವುಗಳಲ್ಲಿ ನಾಲ್ಕು ದೊಡ್ಡ ತಂಡಗಳು ಓರ್ವ ಅಧಿಕಾರಿಯ ನಿಗಾದಲ್ಲಿದ್ದವು. ಈ ಉತ್ತಮ ವ್ಯವಸ್ಥೆಯ ಕಾರಣದಿಂದಾಗಿ, ಪ್ರತಿಯೊಂದು ಹಂತದಲ್ಲೂ ಉತ್ತಮ ನಾಯಕತ್ವ ಮತ್ತು ಸಂಘಟನೆ ಹೊಂದಲು ಸಾಧ್ಯವಾಗಿತ್ತು.

ಪ್ರತಿಯೊಂದು ಗುಂಪಿಗೂ ತಲಾ 10 ನಿಮಿಷಗಳ ಸರಳ ದೈಹಿಕ ವ್ಯಾಯಾಮಗಳು ಮತ್ತು ಬಳಿಕ 20 ನಿಮಿಷಗಳ ಕಾಲ ಬಂದೂಕನ್ನು ಹೊಂದದೆ, ಮಿಲಿಟರಿ ರಚನೆಯ ಪಥ ಸಂಚಲನ ಅಭ್ಯಾಸ ನಡೆಸಲಾಗುತ್ತಿತ್ತು.

ಅವರ ಅಭ್ಯಾಸ ಅವಧಿಯಲ್ಲಿ, ಸ್ವಚ್ಛತೆ, ನೈರ್ಮಲ್ಯ, ಮತ್ತು ಶಿಸ್ತಿನಂತಹ ವಿವಿಧ ವಿಚಾರಗಳ ಕುರಿತು 20 ನಿಮಿಷಗಳ ತರಬೇತಿ ನೀಡಲಾಗುತ್ತಿತ್ತು. ಈ ಅವಧಿಗಳ ನಡುವೆ, 10 ನಿಮಿಷಗಳ ವಿರಾಮ ನೀಡಲಾಗುತ್ತಿತ್ತು. ಪ್ರತಿಯೊಬ್ಬ ಸದಸ್ಯನೂ ಒಟ್ಟು ಆರು ತರಬೇತಿ ಅವಧಿಗಳಲ್ಲಿ ಭಾಗವಹಿಸುವಂತೆ ನಿರೀಕ್ಷಿಸಲಾಗುತ್ತಿತ್ತು. ಈ ಪೆರೇಡ್‌ಗಳು ಸಂಪೂರ್ಣ ಸ್ವಯಂಪ್ರೇರಿತವಾಗಿದ್ದು, ಇದಕ್ಕಾಗಿ ಸರ್ಕಾರಕ್ಕೆ ಯಾವುದೇ ವೆಚ್ಚ ತಗಲುತ್ತಿರಲಿಲ್ಲ. ಈ ತರಬೇತಿಯಲ್ಲಿ ಭಾಗವಹಿಸುವುದಕ್ಕಾಗಿ ಸ್ವಯಂಸೇವಕರಿಗೆ ಯಾವುದೇ ಹಣವನ್ನಾಗಲಿ, ಅಥವಾ ಆಹಾರವನ್ನಾಗಲಿ ನೀಡಲಾಗುತ್ತಿರಲಿಲ್ಲ. ಅವರಿಗೆ ಅವರ ಆಯ್ಕೆಯ ಬಟ್ಟೆಗಳನ್ನು ಧರಿಸಿ ತರಬೇತಿಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿತ್ತು.

ಜನರಲ್ ಕಾರ್ಯಪ್ಪನವರು ಇಂತಹ ತರಬೇತಿಗಳನ್ನು ಬೇರೆ ಬೇರೆ ನಗರಗಳಲ್ಲಿ ಒದಗಿಸಬೇಕು ಎಂದು ಸಲಹೆ ನೀಡಿದ್ದರು. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ತರಬೇತಿಯ ಜವಾಬ್ದಾರಿಯನ್ನು ಪೊಲೀಸರು ನಿರ್ವಹಿಸಬೇಕು ಎಂದು ಅವರು ಸೂಚಿಸಿದ್ದರು.

ಆರಂಭಿಕ ಹಂತದಲ್ಲಿ, ಈ ತರಬೇತಿ ಕಾರ್ಯಕ್ರಮಗಳನ್ನು ದೆಹಲಿ, ಲಕ್ನೋ, ಝಾನ್ಸಿ, ಜಲಂಧರ್, ಅಂಬಾಲಾ, ಅಮೃತಸರ, ಕೋಲ್ಕತಾ, ನಾಗಪುರ, ಚೆನ್ನೈ, ಬೆಂಗಳೂರು, ಕೊಯಂಬತ್ತೂರು, ಪುಣೆ ಮತ್ತು ಅಹಮದಾಬಾದ್ ನಗರಗಳಲ್ಲಿ ಆರಂಭಿಸಲು ಉದ್ದೇಶಿಸಲಾಗಿತ್ತು.

ಈ ಕಾರ್ಯಕ್ರಮ ಜನರನ್ನು ಸಂಪೂರ್ಣವಾಗಿ ತರಬೇತಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿ, ಅವರಲ್ಲಿ ನಾಗರಿಕ ಜವಾಬ್ದಾರಿಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ಗುರಿ ಹೊಂದಿತ್ತು.

ಸೇನಾಧಿಕಾರಿಯ ಆದೇಶದ ಅನುಸಾರ ಪಥ ಸಂಚಲನ, ತಿರುಗುವಿಕೆ, ಸೆಲ್ಯೂಟ್ ಮತ್ತು ನಡೆಯುವುದನ್ನು ನಿಲ್ಲಿಸುವ ಸ್ವಯಂಸೇವಕರ ಗುಂಪು ಸಹಜವಾಗಿಯೇ ಆದೇಶಗಳನ್ನು ಕ್ಷಿಪ್ರವಾಗಿ, ಮತ್ತು ಸಮರ್ಥವಾಗಿ ಪಾಲಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳುವ ನಿರೀಕ್ಷೆಯಿತ್ತು.

ಇಂತಹ ಉಚಿತ ಮಿಲಿಟರಿ ವ್ಯಾಯಾಮ ತರಬೇತಿ ನೀಡುವುದರಿಂದ, ಜನರಿಗೆ ಆತ್ಮವಿಶ್ವಾಸದಿಂದ ನಡೆಯಲು ಮತ್ತು ಮಾತನಾಡಲು ನೆರವಾಗುವ ಜೊತೆಗೆ, ಸ್ಪಷ್ಟ ಮತ್ತು ಶಿಸ್ತಿನ ಆಲೋಚನೆ ರೂಪಿಸಲು ನೆರವಾಗುತ್ತದೆ ಎಂದು ಜನರಲ್ ಕಾರ್ಯಪ್ಪ ನಂಬಿಕೆ ಇಟ್ಟಿದ್ದರು.

ಆದರೆ, ನಾಗರಿಕರಿಗೆ ಮಿಲಿಟರಿ ವ್ಯಾಯಾಮಗಳ ಮೂಲಕ ತರಬೇತಿ ನೀಡುವ ಜನರಲ್ ಕಾರ್ಯಪ್ಪನವರ ದೂರದೃಷ್ಟಿಯ ಯೋಜನೆಗಳಿಗೆ ರಾಜಕೀಯ ನಾಯಕರಿಂದ ಸಂಪೂರ್ಣ ಬೆಂಬಲ ಲಭಿಸಲಿಲ್ಲ. ಈ ಇಚ್ಛಾಶಕ್ತಿಯ ಕೊರತೆಯ ಕಾರಣದಿಂದಾಗಿ ಕಾರ್ಯಪ್ಪನವರ ಯೋಜನೆ ಪೂರ್ಣವಾಗಿ ಕಾರ್ಯರೂಪಕ್ಕೆ ಬರಲು ಸಾಧ್ಯವಾಗಲಿಲ್ಲ.

ಕಾರ್ಯಪ್ಪನವರ ದೂರದೃಷ್ಟಿ: ಉತ್ತಮ ಕರ್ನಾಟಕ ಪೊಲೀಸ್ ಪಡೆ ನಿರ್ಮಾಣಕ್ಕೆ ನೆರವಾದೀತೇ?

ಕಾರ್ಯಪ್ಪನವರ ಮಹತ್ವಾಕಾಂಕ್ಷಿ ಯೋಜನೆ ಇಂದಿನ ಕರ್ನಾಟಕಕ್ಕೆ ಬಹಳ ಅವಶ್ಯಕವಾಗಿರುವಂತೆ ತೋರುತ್ತಿದೆ. ಕರ್ನಾಟಕ ಪೊಲೀಸರ ದುರ್ನಡತೆ ಮತ್ತು ಶಿಸ್ತಿನ ಕೊರತೆಯ ಹಲವು ಘಟನೆಗಳು ನಡೆದಿದ್ದು, ಕಾನೂನು ಜಾರಿ ವ್ಯವಸ್ಥೆಯ ಮೇಲೆ ಜನರ ನಂಬಿಕೆ ಕುಸಿಯುವಂತೆ ಮಾಡಿದೆ. ಪೊಲೀಸ್ ಇಲಾಖೆಯಲ್ಲಿರುವ ಬಹಳಷ್ಟು ಸಿಬ್ಬಂದಿಗಳು ತಮ್ಮ ಇಲಾಖೆ ತೆರಿಗೆ ಪಾವತಿದಾರರ ಹಣದಿಂದ ನಡೆಯುತ್ತಿದೆ ಎನ್ನುವುದನ್ನು ಮರೆತಿರುವಂತೆ ವರ್ತಿಸುತ್ತಿದ್ದಾರೆ. ಕರ್ನಾಟಕದ ಹೆಮ್ಮೆಯ ಪುತ್ರರಾದ ಜನರಲ್ ಕಾರ್ಯಪ್ಪನವರು ಶಿಸ್ತು ಮತ್ತು ನಾಗರಿಕ ಜವಾಬ್ದಾರಿಗಳನ್ನು ಹೊಂದಿರುವ ಜನರ ಸಮಾಜವನ್ನು ನಿರ್ಮಿಸುವ ಕನಸು ಹೊಂದಿದ್ದರು. ಇಂತಹ ಮೌಲ್ಯಗಳು ಈಗ ಸಮಾಜದಲ್ಲಿ ಕಡಿಮೆಯಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇಂತಹ ಸಮಯದಲ್ಲಿ ಕಾರ್ಯಪ್ಪನವರ ದೂರದೃಷ್ಟಿಯ ಯೋಜನೆಗಳನ್ನು ಗಂಭೀರವಾಗಿ ಪರಿಗಣಿಸಿ, ಅವರ ನಾಗರಿಕ ಮಿಲಿಟರಿ ತರಬೇತಿ ಯೋಜನೆಯನ್ನು ಕರ್ನಾಟಕ ಪೊಲೀಸ್ ತರಬೇತಿಯನ್ನಾಗಿ ಜಾರಿಗೆ ತರಬಬಹುದು. ಈ ರೀತಿ ಮಾಡುವುದರಿಂದ, ಓರ್ವ ಹಿರಿಯ ಮಿಲಿಟರಿ ನಾಯಕನ ಪರಂಪರೆಯನ್ನು ಗೌರವಿಸುವುದರ ಜೊತೆಗೆ, ಪೊಲೀಸ್ ಇಲಾಖೆಯೊಳಗೆ ಶಿಸ್ತು, ನೈತಿಕ ವರ್ತನೆ, ಮತ್ತು ನಾಗರಿಕ ಮೌಲ್ಯಗಳನ್ನು ಬೆಳೆಸಲು ನೆರವಾಗುತ್ತದೆ. ಇಂತಹ ಕ್ರಮವನ್ನು ಜಾರಿಗೆ ತರುವುದರಿಂದ, ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಸಹಕಾರ ಸಾಧಿಸಲು ಸಾಧ್ಯವಾಗುತ್ತದೆ.

Latest Videos
Follow Us:
Download App:
  • android
  • ios