Asianet Suvarna News Asianet Suvarna News

ಪೆಟ್ರೋಲ್ ಹಚ್ಚಿ ಕುಟುಂಬಕ್ಕೆ ಬೆಂಕಿ ಇಟ್ಟ ತಂದೆ ತಾನೂ ಆತ್ಮಹತ್ಯೆ ಮಾಡಿಕೊಂಡ

ಪತ್ನಿ ಮಕ್ಕಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ವ್ಯಕ್ತಿಯೋರ್ವ ತಾನೂ ಸುಟ್ಟುಕೊಂಡು  ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

Bengaluru man sets himself and family on fire
Author
Bengaluru, First Published Oct 22, 2019, 8:09 AM IST

ಬೆಂಗಳೂರು [ಅ.22]:  ಕೌಟುಂಬಿಕ ಕಲಹದಿಂದ ಬೇಸತ್ತು, ಪತ್ನಿ ಹಾಗೂ ಮಕ್ಕಳ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ, ತಾನೂ ಬೆಂಕಿ ಹಂಚಿಕೊಂಡ ಪರಿಣಾಮ ತಂದೆ ಹಾಗೂ ಇಬ್ಬರು ಮಕ್ಕಳು ಅಸುನೀಗಿರುವ ಹೃದಯ ವಿದ್ರಾವಕ ಘಟನೆ ನಗರದ ಕಾಟನ್‌ಪೇಟೆಯ ಭಕ್ಷಿ ಗಾರ್ಡನ್‌ನಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಭಕ್ಷಿಗಾರ್ಡನ್‌ ನಿವಾಸಿ ಮುರಳಿ (51), ಈತನ ಮಕ್ಕಳಾದ ಕಾವೇರಿ (22) ಹಾಗೂ ಶ್ರೀಕಾಂತ್‌ (15) ಮೃತರು. ಮುರಳಿ ಪತ್ನಿ ಗೀತಾ (45) ಅವರ ಸ್ಥಿತಿ ಗಂಭೀರವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುರಳಿ ಮತ್ತು ಗೀತಾ ಅವರಿಗೆ ಸುಮಾರು 25 ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿ ನಾಲ್ವರು ಮಕ್ಕಳ ಜತೆ ಭಕ್ಷಿಗಾರ್ಡನ್‌ನಲ್ಲಿ ಭೋಗ್ಯದ ಮನೆಯಲ್ಲಿ ನೆಲೆಸಿದ್ದರು. ನೆಲ ಮಹಡಿಯಲ್ಲಿ ಕುಟುಂಬ ವಾಸ ಇದ್ದರೆ, ಮೊದಲ ಮಹಡಿಯಲ್ಲಿ ಮನೆ ಮಾಲಿಕರು ವಾಸವಿದ್ದರು. ದಂಪತಿಗೆ ಕಾವೇರಿ ಹಿರಿಯ ಪುತ್ರಿಯಾಗಿದ್ದು ಬಿ.ಕಾಂ. ಪದವೀಧರಳಾಗಿದ್ದಾಳೆ, ಬಿ.ಕಾಂ ವ್ಯಾಸಂಗ ಮಾಡುತ್ತಿರುವ ಕಾರ್ತಿಕ್‌ ದ್ವಿತೀಯ ಪುತ್ರ ಹಾಗೂ ಶ್ರೀಕಾಂತ್‌ ಕಿರಿಯ ಪುತ್ರನಾಗಿದ್ದು, 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ.

ಮುರಳಿ ಪೇಯಿಂಟಿಂಗ್‌ ಕೆಲಸ ಸೇರಿದಂತೆ ಸಣ್ಣಪುಟ್ಟಕೆಲಸ ಮಾಡುತ್ತಿದ್ದರು. ಪತ್ನಿ ಗೀತಾ ಮನೆಯಲ್ಲಿಯೇ ‘ಹೂ’ ಕಟ್ಟಿಜೀವನ ಸಾಗಿಸುತ್ತಿದ್ದರು. ಅನಾರೋಗ್ಯದಿಂದ ಮುರಳಿಗೆ ಇತ್ತೀಚೆಗೆ ಕೆಲಸ ಮಾಡಲು ಆಗುತ್ತಿರಲಿಲ್ಲ. ತಮಗೆ ಇದ್ದ ಅನಾರೋಗ್ಯ ಸಮಸ್ಯೆ ಬಗ್ಗೆ ಯಾರೊಂದಿಗೂ ಹೇಳಿಕೊಂಡಿರಲಿಲ್ಲ. ಆದಾಗ್ಯೂ ಸಣ್ಣಪುಟ್ಟಕೆಲಸ ಮಾಡಿ ಬಂದ ಹಣದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಪತಿ ಕೆಲಸಕ್ಕೆ ಹೋಗದ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇತ್ತೀಚೆಗೆ ಮುರಳಿ ಮದ್ಯ ಸೇವನೆ ಆರಂಭಿಸಿದ್ದರು.

ಭಾನುವಾರ ರಾತ್ರಿ ಕೂಡ ದಂಪತಿ ನಡುವೆ ಜಗಳ ನಡೆದಿದೆ. ಸೋಮವಾರ ಬೆಳಗ್ಗೆ ನಿದ್ರೆಯಿಂದ ಎದ್ದ ಮುರಳಿ ಮನೆಗೆ ‘ಟೀ’ ತರುವ ಸಲುವಾಗಿ ಹೊರಗೆ ಬಂದಿದ್ದರು. ಟೀ ಬದಲಿಗೆ ಮುರುಳಿ ಪೆಟ್ರೋಲ್‌ ತಂದು ನಿದ್ರೆಯಲ್ಲಿದ್ದ ಇಬ್ಬರು ಮಕ್ಕಳು ಹಾಗೂ ಪತ್ನಿ ಮೇಲೆ ಸುರಿದು ತಾನೂ ಸುರಿದುಕೊಂಡು ಬೆಂಕಿ ಹಚ್ಚಿದ್ದಾರೆ. ನಿದ್ರೆಯಿಂದ ಎಚ್ಚರಗೊಂಡ ಪತ್ನಿ ಗೀತಾ ಚೀರಾಡುತ್ತಾ ಹೊರಗೆ ಓಡಿ ಬಂದಿದ್ದಾರೆ. ಮಕ್ಕಳು ತೀವ್ರ ಸುಟ್ಟು ಗಾಯಗಳೊಂದಿಗೆ ಮಲಗಿದ್ದ ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ದಂಪತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದ ದಾಖಲಿಸಲಾಗಿತ್ತು. ಮುರಳಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಗೀತಾ ಅವರ ದೇಹದಲ್ಲಿ ಶೇ.50ರಷ್ಟುಸುಟ್ಟು ಗಾಯಗಳಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಿಲಿಂಡರ್‌ ಸ್ಫೋಟ ಎಂದು ಓಡಿದ ಸಾರ್ವಜನಿಕರು: ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡ ಪರಿಣಾಮ ಏಕಾಏಕಿ ಜೋರಾದ ಸ್ಫೋಟದ ಶಬ್ದ ಕೇಳಿದೆ. ಸ್ಥಳೀಯರು ಸಿಲಿಂಡರ್‌ ಸ್ಫೋಟ ಆಗಿರಬಹುದೆಂದು ಹೊರಗೆ ಓಡಿ ಬಂದಿದ್ದಾರೆ. ಬೆಂಕಿ ಕೆನ್ನಾಲಿಗೆ ಇಡೀ ಮನೆ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಬಾಗಿಲು ಹಾಗೂ ಗೋಡೆಯ ಸಿಮೆಂಟ್‌ ಕಿತ್ತು ಬಂದಿದೆ.

ದ್ವಿತೀಯ ಪುತ್ರ ಪಾರು!

ಪ್ರಥಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ಮುರಳಿಯ ದ್ವಿತೀಯ ಪುತ್ರ ಕಾರ್ತಿಕ್‌ ಅಧ್ಯಯನಕ್ಕೆಂದು ಸ್ನೇಹಿತನ ಕೊಠಡಿಗೆ ತೆರಳಿದ್ದ. ಅಲ್ಲಿಯೇ ಕಾರ್ತಿಕ್‌ ರಾತ್ರಿ ಉಳಿದುಕೊಂಡಿದ್ದ. ಹೀಗಾಗಿ ಘಟನೆಯಿಂದ ಕಾರ್ತಿಕ್‌ ಅವಘಡದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.

ನಿತ್ಯ ಹೋಟೆಲ್‌ ‘ಟೀ’

ಮುರಳಿ ಅವರು ಮುಂಜಾನೆ ಎದ್ದ ಕೂಡಲೇ ನಿತ್ಯ ಕರ್ಮ ಮುಗಿಸಿ ಹೋಟೆಲ್‌ಗೆ ತೆರಳಿ ‘ಟೀ’ ಸೇವಿಸುತ್ತಿದ್ದರು. ಬಳಿಕ ಪತ್ನಿ ಮತ್ತು ಮಕ್ಕಳಿಗೂ ಹೋಟೆಲ್‌ನಿಂದಲೇ ‘ಟೀ’ ತರುತ್ತಿದ್ದರು. ಸೋಮವಾರ ಕೂಡ ‘ಟೀ’ ತರಲು ಹೋಗಿದ್ದ ಮುರಳಿ, ‘ಟೀ’ ಬದಲಿಗೆ ಪೆಟ್ರೋಲ್‌ ತಂದು, ಎಲ್ಲರ ಮೇಲೆ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಸಂಬಂಧಿಯೊಬ್ಬರು ಮಾಹಿತಿ ನೀಡಿದರು.

ನಂಬಲು ಆಗುತ್ತಿಲ್ಲ: ಸಂಬಂಧಿ

ಬೆಳಗಿನ ಜಾವ ನೀರು ಹಿಡಿದು ನಮ್ಮೊಂದಿಗೆ ಮಾತನಾಡಿ ಹೋದವರು ಈ ರೀತಿ ಮಾಡಿದ್ದಾರೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಮೃತ ಮುರಳಿ ಸಂಬಂಧಿ ಅಳಲು ತೋಡಿಕೊಂಡರು.

ಘಟನೆ ಬಗ್ಗೆ ಜತೆ ಮಾತನಾಡಿದ ಮುರಳಿ ಅವರ ಸಹೋದರಿ ಪುತ್ರಿ ಮಂಜುಳಾ, ‘ಸೋದರ ಮಾವ ಕುಟುಂಬವನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು. ಚಿಕ್ಕನಿಂದಲೂ ಕಷ್ಟದಿಂದ ಬಂದ ಮಾವನಿಗೆ ಇತ್ತೀಚೆಗೆ ಕೆಲಸ ಮಾಡಲು ಆಗುತ್ತಿರಲಿಲ್ಲ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಈ ಬಗ್ಗೆ ಏನನ್ನು ಹೇಳಿಕೊಳ್ಳುತ್ತಿರಲಿಲ್ಲ. ಪೇಯಂಟಿಂಗ್‌ ಕೆಲಸ ಮಾಡಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ಶೌಚಾಲಯ ಶುಚಿ ಮಾಡುವ ಕೆಲಸ ಮಾಡಿ ಬಂದ ಹಣದಲ್ಲಿ ಜೀವನ ನಿರ್ವಹಣೆ ಮಾಡಿದ್ದಾರೆ ಎಂದು ಸ್ಮರಿಸಿದರು.

ಪತ್ನಿ ಮತ್ತು ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಂಡಿದ್ದಾರೆ. ಕೆಲವೊಮ್ಮೆ ತಮ್ಮ ಕೌಟುಂಬಿಕ ವಿಚಾರದ ಬಗ್ಗೆ ಹೇಳಿಕೊಂಡು ನೊಂದು ಕೊಳ್ಳುತ್ತಿದ್ದರು. ನಮ್ಮನೆಲ್ಲಾ ಯಾವಾಗಲೂ ನಗಿಸುತ್ತಿದ್ದರು. ಮಾವ ಈ ರೀತಿ ಮಾಡಿದ್ದಾರೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಮೊದಲಿಗೆ ನಾವು ಸಿಲಿಂಡರ್‌ ಸ್ಫೋಟ ಸಂಭವಿಸಿದೆ ಎಂದು ಕೊಂಡಿದ್ದೆವು. ಪೊಲೀಸರ ತನಿಖೆ ವೇಳೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿರುವ ವಿಷಯ ತಿಳಿಯಿತು ಎಂದು ಕಣ್ಣೀರು ಹಾಕಿದರು.

Follow Us:
Download App:
  • android
  • ios