ಮಹದೇವಪುರ, ಯಲಹಂಕದಲ್ಲಿ 1,177 ಮನೆ ಜಲಾವೃತ!
* ನಗರದಲ್ಲಿ ಕಳೆದ ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆ
* ಮಹದೇವಪುರ, ಯಲಹಂಕದಲ್ಲಿ 2 ತಾಸಲ್ಲಿ 135 ಮಿ.ಮೀ. ಮಳೆ
* ಮಳೆಯಿಂದ 1,177 ಮನೆಗಳಿಗೆ ನುಗ್ಗಿದ ನೀರು
ಬೆಂಗಳೂರು(ಜೂ.20): ನಗರದಲ್ಲಿ ಕಳೆದ ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಮಹದೇವಪುರ ಮತ್ತು ಯಲಹಂಕ ವಲಯಗಳಲ್ಲಿ ಒಟ್ಟು 1,177 ಮನೆಗಳಿಗೆ ನೀರು ನುಗ್ಗಿದ್ದು, ಬಿಬಿಎಂಪಿ ಕಂದಾಯ ವಿಭಾಗದ ಸಿಬ್ಬಂದಿ ಭಾನುವಾರ ಮಹಜರು ಕಾರ್ಯ ಆರಂಭಿಸಿದ್ದಾರೆ.
ಮಹದೇವಪುರ ಮತ್ತು ಯಲಹಂಕ ವಲಯಗಳಲ್ಲಿ ಕೇವಲ 2 ಗಂಟೆ ಅವಧಿಯಲ್ಲಿ 135 ಮಿ.ಮೀ. ಮಳೆಯಾಗಿ ಹಲವು ಬಡಾವಣೆಗಳು ಜಲಾವೃತಗೊಂಡಿದ್ದವು. ಹಾನಿ ಸಮೀಕ್ಷೆ ಮಾಡಿದ ಪಾಲಿಕೆ ಕಂದಾಯ ಅಧಿಕಾರಿಗಳು ಮಹದೇವಪುರದಲ್ಲಿ 1,068 ಮನೆ, ಯಲಹಂಕ ವಲಯದಲ್ಲಿ 109 ಮನೆಗಳನ್ನು ಗುರುತಿಸಿದ್ದಾರೆ.
ನೀರು ನುಗ್ಗಿ ಹಾನಿಗೊಳಗಾದ ಮನೆಗಳನ್ನು ಜಿಯೋ ಟ್ಯಾಗ್ ಮೂಲಕ ಫೋಟೋ ತೆಗೆದು ದಾಖಲೆ ಸಂಗ್ರಹಿಸಲಾಗಿದೆ. ಜತೆಗೆ, ಸಂತ್ರಸ್ತ ಕುಟುಂಬದ ಬ್ಯಾಂಕ್ ಖಾತೆ ವಿವರ ಪಡೆಯಲಾಗಿದ್ದು, ಮನೆಯ ಆಹಾರ ಸಾಮಗ್ರಿಗಳು, ಬಟ್ಟೆ, ಹಾಸಿಗೆ, ವಿದ್ಯುತ್ ಉಪಕರಣ ಹಾನಿಯಾಗಿರುವುದನ್ನು ದಾಖಲಿಸಿಕೊಳ್ಳಲಾಗಿದೆ. ಎಸ್‌ಡಿಆರ್‌ಎಫ್ ನಿಯಮದನ್ವಯ ಪಾಲಿಕೆಯಿಂದ ಸಂತ್ರಸ್ತರಿಗೆ ತಲಾ .25 ಸಾವಿರ ಸಹಾಯಧನ ನೀಡಲಾಗುತ್ತದೆ.
ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ
ಕಾವೇರಿ ನಗರದಲ್ಲಿ ಮಳೆಯಿಂದ ಗೋಡೆ ಕುಸಿದು ಸಾವನ್ನಪ್ಪಿದ್ದ ವೃದ್ಧೆ ಮುನಿಯಮ್ಮ (62) ಹಾಗೂ ಕೆ.ಆರ್.ಪುರದಲ್ಲಿ ಬೈಕ್ ರಕ್ಷಿಸಲು ಹೋಗಿ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಮೃತ ಯುವಕ ಮಿಥುನ್ ಕುಟುಂಬಕ್ಕೆ ಪಾಲಿಕೆಯಿಂದ ತಲಾ .5 ಲಕ್ಷ ಪರಿಹಾರ ನೀಡಲಾಗುತ್ತದೆ.
ಗೋಡೆ ಕುಸಿದು ಸಾವನ್ನಪ್ಪಿದ್ದ ವೃದ್ಧೆ ಮುನಿಯಮ್ಮ ಅವರ ಮಗ ಮುನಿರಾಜು, ಸೊಸೆ ಆಶಾ ಮತ್ತು ಮೊಮ್ಮಗಳು ಧೃತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದ್ದಾರೆ. ಅವರ ಆಸ್ಪತ್ರೆ ವೆಚ್ಚವನ್ನು ಪಾಲಿಕೆಯಿಂದಲೇ ಭರಿಸಲಾಗಿದೆ ಎಂದು ಮಹದೇವಪುರ ವಲಯದ ಜಂಟಿ ಆಯುಕ್ತ ವೆಂಕಟಾಚಲಪತಿ ತಿಳಿಸಿದ್ದಾರೆ.