ತಮಿಳುನಾಡಿನಿಂದ ಬಂದ ರೈಲಿನ ಶೌಚಾಲಯದಲ್ಲಿ ಮಹಿಳೆಯೋರ್ವರು ನವಜಾತ ಶಿಶುವನ್ನು ಬಿಟ್ಟು ಹೋಗಿದ್ದಾರೆ. 

ಬೆಂಗಳೂರು [ಅ.16]:  ಮಹಿಳೆಯೊಬ್ಬರು ನವಜಾತ ಶಿಶುವನ್ನು ರೈಲು ಬೋಗಿಯಲ್ಲಿ ಬಿಟ್ಟು ಹೋಗಿದ್ದು, ಬಾಸ್ಕೋ ಚೈಲ್ಡ್‌ ಲೈನ್‌ ಸಂಸ್ಥೆಯವರು ನವಜಾತ ಶಿಶುವನ್ನು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಸಿ.ಟಿ.ರೈಲ್ವೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಸೋಮವಾರ ತಮಿಳುನಾಡಿನಿಂದ ಬೆಂಗಳೂರಿಗೆ ಬಂದ ಮೈಲಾಡತೂರೈ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಶಿಶು ಪತ್ತೆಯಾಗಿದೆ. ರೈಲಿನ ಎಂಟನೇ ಬೋಗಿಯ ಶೌಚಾಲಯದಲ್ಲಿ ಸುಮಾರು ಮೂರು ತಿಂಗಳ ಹೆಣ್ಣು ನವಜಾತ ಶಿಶುವಿನ ಚೀರಾಟ ಕೇಳಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಬಾಸ್ಕೋ ಚೈಲ್ಡ್‌ಲೈನ್‌ ಸಂಸ್ಥೆ ಸಿಬ್ಬಂದಿ ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರನ್ನು ವಿಚಾರಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ ಮಗುವಿನ ಪೋಷಕರು ಪತ್ತೆಯಾಗದ ಹಿನ್ನೆಲೆಯಲ್ಲಿ ನವಜಾತ ಶಿಶುವನ್ನು ರಕ್ಷಿಸಿ ಶಿಶು ಮಂದಿರಕ್ಕೆ ಬಿಟ್ಟಿದ್ದಾರೆ. ಬೆಳಗಿನ ಜಾವ ಮೂರು ಗಂಟೆವರೆಗೆ ನವಜಾತ ಶಿಶುವನ್ನು ಮಹಿಳೆಯೊಬ್ಬರು ಎತ್ತಿಕೊಂಡಿದ್ದರು. ಆಕೆಯೇ ನವಜಾತ ಶಿಶುವಿನ ತಾಯಿ ಇರಬಹುದು ಎಂದು ಬೋಗಿಯಲ್ಲಿದ್ದ ಇತರೆ ಪ್ರಯಾಣಿಕರು ಹೇಳಿದ್ದಾರೆ. 

ಆದರೆ ಮಹಿಳೆ ಎಲ್ಲಿ ರೈಲು ಹತ್ತಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲ. ಎಲ್ಲ ನಿಲ್ದಾಣಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.