ವೈಟ್‌ಫೀಲ್ಡ್‌ನಲ್ಲಿ ನಡೆದ 'ದಿ ವಂಡರ್‌ಮೆಂಟ್ ಟೂರ್' ಸಂಗೀತ ಕಾರ್ಯಕ್ರಮದ ನಂತರ ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಕಾರಿನಲ್ಲಿ ಕುಳಿತಿದ್ದ ಅವರನ್ನು ಅಭಿಮಾನಿಗಳು ಗುರುತಿಸಿ ವಿಡಿಯೋ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರು (ಅ.05): ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಅಂದರೆ ಯಾರಿಗೆ ತಾನೇ ಭಯ ಇಲ್ಲ ಹೇಳಿ? ಸಾಮಾನ್ಯ ಜನರಿಂದ ಹಿಡಿದು ವಿಐಪಿಗಳಿಗೂ ಈ ಟ್ರಾಫಿಕ್ ಬಿಸಿ ತಟ್ಟಿದೆ. ಇದೀಗ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಕೂಡ ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿ ಹೈರಾಣಾಗಿರುವ ಘಟನೆ ನಡೆದಿದೆ.

ಹೌದು, ಇತ್ತೀಚೆಗೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಕೆಟಿಪಿಒ (KTPO) ಕನ್ವೆನ್ಷನ್ ಸೆಂಟರ್‌ನಲ್ಲಿ ಎ.ಆರ್. ರೆಹಮಾನ್ ಅವರ 'ದಿ ವಂಡರ್‌ಮೆಂಟ್ ಟೂರ್' (The Wonderment Tour) ಲೈವ್ ಮ್ಯೂಸಿಕ್ ಕಾನ್ಸರ್ಟ್ ಆಯೋಜನೆಗೊಂಡಿತ್ತು. ಈ ಸಂಗೀತ ರಸಸಂಜೆಯಲ್ಲಿ ಸಾವಿರಾರು ಅಭಿಮಾನಿಗಳು ಭಾಗವಹಿಸಿ, ಸಂಗೀತ ಮಾಂತ್ರಿಕನ ಸ್ವರಸುಧೆಯಲ್ಲಿ ಮಿಂದೆದ್ದರು.

ಬೆಂಗಳೂರಿನ ಅಸಲಿ ಟ್ರಾಫಿಕ್ ದರ್ಶನ

ಆದರೆ, ಅದ್ದೂರಿ ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ವಾಪಸ್ ತೆರಳುವಾಗ ಎ.ಆರ್. ರೆಹಮಾನ್ ಅವರಿಗೆ ಬೆಂಗಳೂರಿನ ಅಸಲಿ ಟ್ರಾಫಿಕ್ ದರ್ಶನವಾಗಿದೆ. ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳ ಮಧ್ಯೆ ರೆಹಮಾನ್ ಅವರ ಕಾರು ಕೂಡ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದೆ. ಕಾರಿನಲ್ಲಿ ಕುಳಿತಿದ್ದ ಎ.ಆರ್. ರೆಹಮಾನ್ ಅವರನ್ನು ಗುರುತಿಸಿದ ಅಭಿಮಾನಿಗಳು, ಅವರ ಬಳಿ ತೆರಳಿ ವಿಡಿಯೋವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಸದ್ಯ ರೆಹಮಾನ್ ಟ್ರಾಫಿಕ್‌ನಲ್ಲಿ ಸಿಲುಕಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು, "ಬೆಂಗಳೂರು ಟ್ರಾಫಿಕ್ ಯಾರನ್ನೂ ಬಿಡಲ್ಲ, ಎಷ್ಟೇ ದೊಡ್ಡವರಾದರೂ ಇಲ್ಲಿ ಟ್ರಾಫಿಕ್‌ನಲ್ಲಿ ಕಾಯಲೇಬೇಕು" ಎಂದು ತರಹೇವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

View post on Instagram