ಬೆಂಗಳೂರು [ಅ.14]: ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯಿಂದ ಚಾಲಕನೊಬ್ಬನಿಗೆ ಚಾಕುವಿನಿಂದ ಇರಿದಿರುವ ಘಟನೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೊಸಕೆರೆಹಳ್ಳಿ ನಿವಾಸಿ ಶ್ರೀನಿವಾಸ್ (38) ಇರಿತಕ್ಕೆ ಒಳಗಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಕತ್ರಿಗುಪ್ಪೆಯ ಮಂಜುನಾಥ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಪ್ಲಂಬರ್ ಆಗಿರುವ ಮಂಜುನಾಥ್ ಪತ್ನಿ ಮತ್ತು ಮಕ್ಕಳೊಂದಿಗೆ ನಾಲ್ಕು ವರ್ಷಗಳ ಹಿಂದೆ ಕತ್ರಿಗುಪ್ಪೆಯ ಮಂಜುನಾಥ ಕಾಲೋನಿಯಲ್ಲಿ  ನೆಲೆಸಿದ್ದ. ಇವರ ಮನೆ ಪಕ್ಕದಲ್ಲೇ ಶ್ರೀನಿವಾಸ್ ಪತ್ನಿ ಜತೆಗೆ ನೆಲೆಸಿದ್ದರು. ಮಂಜುನಾಥನ ಪತ್ನಿ ಜತೆ ಶ್ರೀನಿವಾಸ್ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಜಗಳ ನಡೆದಿತ್ತು. ಬಳಿಕ ಸ್ಥಳೀಯರು ಶ್ರೀನಿವಾಸ್‌ನನ್ನು ಅಲ್ಲಿಂದ ಖಾಲಿ ಮಾಡಿಸಿದ್ದರು. ಬಳಿಕ ಶ್ರೀನಿವಾಸ್ ಹೊಸಕೆರೆಹಳ್ಳಿಯಲ್ಲಿ ನೆಲೆಸಿದ್ದ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

2 ತಿಂಗಳಿಂದ ಪುನಃ ಶ್ರೀನಿವಾಸ್, ಮಂಜುನಾಥನ ಪತ್ನಿ ಜತೆ ಮೊಬೈಲ್‌ನಲ್ಲಿ ಸಂಭಾಷಣೆ ನಡೆಸಿರುವ ವಿಚಾರ ಗೊತ್ತಾಗಿದೆ. ಇದರಿಂದ  ಮಂಜುನಾಥ್, ಶ್ರೀನಿವಾಸ್ ಮೇಲೆ ಕುಪಿತ ಗೊಂಡಿದ್ದ. ಶನಿವಾರ ರಾತ್ರಿ ೮.೩೦ರಲ್ಲಿ ಗಿರಿನಗರದಲ್ಲಿ ಶ್ರೀನಿವಾಸ್ ನಿಂತಿದ್ದಾಗ ಮಂಜುನಾಥ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಗಿರಿನಗರ ಇನ್ ಸ್ಪೆಕ್ಟರ್ ಸಿದ್ದಲಿಂಗಯ್ಯ ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಕೆ. ಸಿ. ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಗಾಯಾಳು ಪತ್ನಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ರಕ್ತದಾನ: ಗಾಯಾಳು ಶ್ರೀನಿವಾಸ್‌ನನ್ನು ಆಸ್ಪತ್ರೆಗೆ ಸೇರಿಸಿದಾಗ ‘ಓ’ ಪಾಸಿಟಿವ್ ರಕ್ತ ಅಗತ್ಯ ಇರುವುದಾಗಿ ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಇನ್‌ಸ್ಪೆಕ್ಟರ್ ಸಿದ್ದಲಿಂಗಯ್ಯ, ವಿ.ವಿ.ಪುರ ಉಪ ವಿಭಾಗದ ಎಲ್ಲ ಠಾಣೆಗಳಿಗೆ ಮಾಹಿತಿ ನೀಡಿದಾಗ ಗೃಹ ರಕ್ಷಕ ಹರೀಶ್ ಆಸ್ಪತ್ರೆಗೆ ಬಂದು ಗಾಯಾಳುವಿಗೆ ರಕ್ತದಾನ ಮಾಡಿದ್ದಾರೆ.