ಹೊಸಕೋಟೆ [ನ.13]:  ಬೆಂ.ಗ್ರಾ.ಜಿಲ್ಲೆಯ ಹೊಸಕೋಟೆ ವಿಧಾನಸಭಾ ಕ್ಷೇತ್ರ(178)ದ ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕಟ್ಟುನಿಟ್ಟಿನ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ನೀತಿ ಸಂಹಿತೆ ಪಾಲಿಸುವ ಮೂಲಕ ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿಯುತ ಚುನಾವಣಾ ಪ್ರಕ್ರಿಯೆ ನಡೆಯಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನ ದಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತೆರವು: ರಾಜಕೀಯ ಪಕ್ಷಗಳ ಜಾಹಿರಾತಿಗೆ ಸಂಬಂಧಿಸಿದ ಎಲ್ಲಾ ಗೋಡೆಬರಹ, ಪೋಸ್ಟರ್ಸ್‌, ಬ್ಯಾನರ್ಸ್‌, ಫ್ಲೆಕ್ಸ್ ಇತ್ಯಾದಿಗಳನ್ನು ಕೂಡಲೇ ತೆರವುಗೊಳಿಸಬೇಕು. ಚುನಾಯಿತ ಪ್ರತಿನಿಧಿಗಳಿಗೆ ನೀಡಿರುವ ಸರ್ಕಾರಿ ವಾಹನ ಹಾಗೂ ಆಪ್ತ ಸಹಾಯಕರನ್ನು ಹಿಂಪಡೆಯಬೇಕು. ಸರ್ಕಾರಿ ಪ್ರವಾಸಿ ಮಂದಿರ, ಪರಿವೀಕ್ಷಣಾ ಮಂದಿರಗಳನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಹಾಗೂ ಸರ್ಕಾರಿ ಸ್ವತ್ತು ಮತ್ತು ಸರ್ಕಾರಿ ಕಚೇರಿಗಳನ್ನು ವಿರೂಪಗೊಳಿಸಿರುವುದನ್ನು ತೆರವುಗೊಳಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಿಲ್ಲಾದ್ಯಂತ ನೀತಿ ಸಂಹಿತೆ: ಚುನಾವಣಾ ಮಾದರಿ ನೀತಿ ಸಂಹಿತೆಯು ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಅನ್ವಯವಾಗದೆ  ಜಿಲ್ಲಾದ್ಯಂತ ಜಾರಿಯಲ್ಲಿರುತ್ತದೆ. 1/1/2019 ರ ಅರ್ಹತಾ ದಿನಾಂಕ ದಂತೆ ಈಗಾಗಲೇ ಪ್ರಕಟಿಸಲಾಗಿರುವ ಮತದಾರರ ಪಟ್ಟಿಗಳ ಆಧಾರದ ಮೇಲೆ ಉಪ ಚುನಾವಣೆ ನಡೆಯಲಿದ್ದು, ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟಾರೆ 212748 ಮತದಾರರಿದ್ದು, ಅದರಲ್ಲಿ 107766 ಪುರುಷ ಮತದಾರರು, 104956 ಮಹಿಳಾ ಮತದಾರರು ಹಾಗೂ 26 ಇತರೆ ಮತದಾರರಿದ್ದಾರೆ.

ಬಿಇಎಲ್ ಸಂಸ್ಥೆಯ ಎಂ೩ ಮಾದರಿಯ ಇ.ವಿ.ಎಂ ಗಳನ್ನು ಬಳಸಿ ಉಪ ಚುನಾವಣೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.