ಬೆಳಗಾವಿ [ನ.15]: ರಾಜ್ಯದಲ್ಲಿ 15 ಕ್ಷೇತ್ರದಲ್ಲಿ ಚುನಾವಣೆಗೆ ದಿನಗಣನೆ ಆರಂಭವಾಗಿದೆ.  ಇದೇ ವೇಳೆ ಚುನಾವಣೆಗೆ ಸಿದ್ಧತೆಗಳು ಆರಂಭವಾಗಿದ್ದು, ರಮೇಶ್ ಜಾರಕಿಹೊಳಿ ಅನರ್ಹತೆಯಿಂದ ತೆರವಾದ ಗೋಕಾಕ್ ಕ್ಷೇತ್ರಕ್ಕೆ ಲಖನ್ ಜಾರಕಿಹೊಳಿ ಕಾಂಗ್ರೆಸಿನಿಂದ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. 

ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ಲಖನ್ ಜಾರಕಿಹೊಳಿ ನನ್ನ ಬೆನ್ನಿಗೆ ಚೂರಿ ಹಾಕಿದ್ದಾನೆ ಎಂದು ಹೇಳಿದ್ದಾರೆ. ಗೋಕಾಕ್ ನಿಂದ ರಮೇಶ್ ಜಾರಕಿಹೊಳಿ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದು, ತಮ್ಮ ಪ್ರತಿಸ್ಪರ್ಧಿಯಾಗಿ ಸಹೋದರನೇ ಸ್ಪರ್ಧೆ ಮಾಡುತ್ತಿರುವ ನಿಟ್ಟಿನಲ್ಲಿ ಈ ಹೇಳಿಕೆ ನೀಡಿದ್ದಾರೆ. 
 
ಕಳೆದ ಹದಿನೈದು ದಿನಗಳಿಂದ ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಒಂದು ಮತ ಆಗಲಿ, ಲಕ್ಷ ಮತವಾಗಲಿ ನಮ್ಮ ಕ್ಷೇತ್ರದಲ್ಲಿ ನನ್ನ ಗೆಲುವೇ ಖಚಿತ. ಅಲ್ಲದೇ ನಮ್ಮ ವಿರೋಧಿಗಳು ಕುತಂತ್ರ ಮಾಡಿ ನನ್ನ ಸೋಲಿಸಬಹುದು. ಲಖನ್ ಜಾರಕಿಹೊಳಿ‌ ಇಂದಿನಿಂದ ನನ್ನ ತಮ್ಮ ಅಲ್ಲ, ನನ್ನ ವಿರೋಧಿ ಎಂದು ರಮೇಶ್ ಜಾರಕಿಹೊಳಿ ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಡಿ.5 ವರೆಗೂ ಅವನು ನನ್ನ ತಮ್ಮ ಅಲ್ಲ 5ರ ನಂತರ ತಮ್ಮ. ಲಖನ್ ಗೆ ದೇವರು ಒಳ್ಳೆಯ ಬುದ್ದಿ ಕೊಡಲಿ. ಒಬ್ಬ ಸಹೋದರ ಮೋಸ ಹೋಗಿದ್ದನ್ನ ನೋಡಿಯೂ ಈಗ ಲಖನ್ ಮೋಸ ಹೋಗುತ್ತಿದ್ದಾನೆ ಎಂದರು. 

ಸತೀಶ್ ಮತ್ತು ರಮೇಶ್ ಒಂದೇ ವಿಮಾನದಲ್ಲಿ ಬಂದಿರುವ ವಿಚಾರದ ಬಗ್ಗೆಯೂ ಮಾತನಾಡಿದ ರಮೇಶ್, ಒಂದೇ ವಿಮಾನದಲ್ಲಿ ಬಂದಿರುವುದು ಸಹಜ.  ಆದರೆ ಆತನೊಂದಿಗೆ ಮಾತನಾಡಿಲ್ಲ. ಸತೀಶ್ ಜಾರಕಿಹೊಳಿ‌ ಜತೆಗೆ ನಾನು ನಲವತ್ತು ವರ್ಷದಿಂದ ಮಾತಾಡಿಲ್ಲ. ಮುಂದೆಯೂ ಮಾತನಾಡುವುದಿಲ್ಲ. ಲಖನ್ ಜಾರಕಿಹೊಳಿ‌ ನನ್ನ ಬೆನ್ನಿಗೆ ಚೂರಿ ಹಾಕಿದ್ದಾನೆ ಎಂದರು. 

ಇನ್ನು ಸಿದ್ದರಾಮಯ್ಯ ಕಾಂಗ್ರೆಸಿನಲ್ಲಿ ನನ್ನ ಜೂನಿಯರ್ ಆಗಿದ್ದು, ವಿಶ್ವನಾಥ್ ನನ್ನ ಗುರು ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಡಿಸೆಂಬರ್ 5 ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, 9 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.