ಕಬ್ಬು ಬೆಳೆಗಾರರ ಜೊತೆಗೆ ಸಚಿವರ ಸಂಧಾನ ವಿಫಲ, ನಾಳೆ ಸಂಜೆವರೆಗೆ ಸರ್ಕಾರಕ್ಕೆ ಡೆಡ್‌ಲೈನ್ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಸಭೆಗೆ ಬರುವುದಿಲ್ಲ, ನೀವೇ ನಿರ್ಧಾರ ಪ್ರಕಟಿಸಿ ಹೇಳಿ, ಸಂಜೆ ವರೆಗೆ ಟೈಮ್ ಕೊಡುತ್ತೇವೆ ಎಂದು ರೈತರು ಖಡಕ್ ಎಚ್ಚರಿಕೆ ನೀಡಿದ್ದಾರೆ. 

ಬೆಳಗಾವಿ (ನ.05) ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಳ್ಳುತ್ತಿದೆ. ರೈತರು ಯಾವುದೇ ಮಾತುಕತೆಗೆ ಜಗ್ಗುತ್ತಿಲ್ಲ, ತಮ್ಮ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ. ಪ್ರತಿಭಟನೆ ಕಾವು ಸರ್ಕಾರದ ಮೇಲೆ ಪರಿಣಾಮ ಬೀರುತ್ತಿದ್ದಂತೆ ಇಂದು ಸರ್ಕಾರದ ಪ್ರತಿನಿಧಿಯಾಗಿ ಸಚಿವ ಹೆಚ್‌ಕೆ ಪಾಟೀಲ್ ರೈತರ ಭೇಟಿ ಮಾಡಿ ಸಂಧಾನ ಸಭೆ ನಡೆಸಿದ್ದಾರೆ. ಆದರೆ ಸಂಧಾನ ಸಭೆ ವಿಫಲಗೊಂಡಿದೆ. 8 ಬೇಡಿಕೆಗೆ ಚರ್ಚಿಸಲು ಸಮಯ ಬೇಕಿದೆ ಎಂದ ಹೆಚ‌್‌ಕೆ ಪಾಟೀಲ್‌ಗೆ ಕಬ್ಬು ಬೆಳೆಗಾರರು ಖಡಕ್ ವಾರ್ನಿಂಗ್ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸಭೆಗೆ ನಾವು ಬರುವುದಿಲ್ಲ. ನೀವು ಮಾತನಾಡಿ ಸರ್ಕಾರದ ನಿರ್ಧಾರ ಪ್ರಕಟಿಸಿ, ನಾಳೆ (ನ.06) ಸಂಜೆ ವರೆಗೆ ಸಮಯ ನೀಡುತ್ತೇವೆ. ಅದರೊಳಗೆ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ರೈತರು ನೀಡಿದ್ದಾರೆ.

ನಾಳೆ ಸಂಜೆವರೆಗೆ ಕಾಯುತ್ತೇವೆ ಅಷ್ಟೆ

ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ ಬಳಿ ಸಂಧಾನ ಸಭೆ ನಡೆದಿತ್ತು. ರೈತರ ಬೇಡಿಕೆಗೆ ಈಡೇರಿಸಲು ಸಮಯಾವಕಾಶ ಬೇಕು ಎಂದು ಹೆಚ್‌ಕೆ ಪಾಟೀಲ್ ಹೇಳಿದ್ದರು. ಆದರೆ ರೈತರು ಹೆಚ್ಚಿನ ಸಮಯ ನೀಡಲು ಸಾಧ್ಯವಿಲ್ಲ. ನಾಳೆ ಸಂಜೆ ವರೆಗೆ ಕಾಯುತ್ತೇವೆ. ಸಚಿವರಾಗಿ ನೀವೆ ಸಿಎಂ ಜೊತೆಗೆ ಮಾತುಕತೆ ನಡೆಸಿ ಸರ್ಕಾರದ ನಿರ್ಧಾರ ಪ್ರಕಟಿಸಿ, ನಾಳೆ ಸಂಜೆಯವರೆಗೆ ನಾವು ನಿಮ್ಮ ಪ್ರಕಟಣೆ, ಸರ್ಕಾರದ ನಿಲುವಿಗೆ ಕಾಯುತ್ತೇವೆ ಎಂದು ರೈತರು ವಾರ್ನಿಂಗ್ ನೀಡಿದ್ದಾರೆ.

ಸರ್ಕಾರದ ನಿರ್ಧಾರ ಇಷ್ಟವಾದರೆ ಪ್ರತಿಭಟನೆ ಕೈಬಿಡುತ್ತೇವೆ

ನಮ್ಮ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ಮಾಡುತ್ತಿದ್ದೇವೆ. ಸರ್ಕಾರ ಸರಿಯಾಗಿ ಸ್ಪಂದಿಸಿದರೆ ನಾವು ಪ್ರತಿಭಟನೆ ಕೈಬಿಡುತ್ತೇವೆ. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ನಮ್ಮ ಪ್ರಮುಖ ಬೇಡಿಕೆ ಈಡೇರದಿದ್ದರೆ, ನವೆಂಬರ್ 7ಕ್ಕೆ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುವುದು ಖಚಿತ. ಸಿಎಂ ಸಿದ್ದರಾಮಯ್ಯ ಸಭೆಗೆ ನಾವು ಬರಲ್ಲ, ಈ ಭಾಗದ ಜನರು ತಪ್ಪು ತಿಳಿಯುತ್ತಾರೆ ಎಂದಿದ್ದಾರೆ. ಇದೇ ವೇಳೆ ಸಿಎಂ‌ ಭೇಟಿ ಆಗಿ ಚರ್ಚಿಸಿದ ಬಳಿಕ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಲಿದೆ ಎಂದು ಹೆಚ್‌ಕೆ ಪಾಟೀಲ್ ಪ್ರತಿಭಟನಾ ನಿರತ ಸ್ಥಳದಿಂದ ಹೊರಟಿದ್ದಾರೆ.

ಕಬ್ಬಿನ ದರ ನಿಗದಿಗೆ ಪಟ್ಟು ಹಿಡಿದ ರೈತರು

ಹೆಚ್‌ಕೆ ಪಾಟೀಲ್ ಸಂಧಾನ ಸಭೆಯಲ್ಲಿ ರೈತರು ತಕ್ಷಣವೇ ಕಬ್ಬಿನ ದರ ನಿಗದಿಗೆ ಪಟ್ಟು ಹಿಡಿದಿದ್ದಾರೆ. ನಮ್ಮ ಬೇಡಿಕೆಯಲ್ಲಿ ಪ್ರಮುಖವಾಗಿರುವ ಕಬ್ಬಿನ ದರ ನಿಗದಿ ಮಾಡಿ. ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ. ಈಗ ತಕ್ಷಣವೇ 3500 ರೂಪಾಯಿ ಕಬ್ಬಿನ ದರ ನಿಗದಿ ಮಾಡಿ ಘೋಷಣೆ ಮಾಡಬೇಕು ಎಂದು ಪಟ್ಟುಹಿಡಿದಿದ್ದಾರೆ. ದರ ಘೋಷಣೆ ‌ಮಾಡಿ ಕಾರ್ಖಾನೆ ‌ಆರಂಭಿಸಲು ಕ್ರಮವಹಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇತರ ಬೇಡಿಕೆಗಳನ್ನು ನಾಲ್ಕೈದು ದಿನಗಳ ಬಳಿಕ ಈಡೇರಿಸಿ ಎಂದ ಹೋರಾಟಗಾರರು ಆಗ್ರಹಿಸಿದ್ದಾರೆ.

ಸಂಧಾನ ಸಭೆಯಲ್ಲಿ ಹೆಚ್‌ಕೆ ಪಾಟೀಲ್ ಹೇಳಿದ್ದೇನು?

ಕಬ್ಬು ಬೆಳೆಗಾರರು ಹೋರಾಟ ಮಾಡ್ತಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ನನಗೆ ಫೋನ್ ಮಾಡಿ ತಿಳಿಸಿದರು. ರೈತರ ಜೊತೆಗೆ ಮಾತನಾಡಿ, ಸಮಸ್ಯೆ ಇದ್ರೆ ಬಗೆಹರಿಸಿ ಎಂದು ಸೂಚನೆ ನೀಡಿದರು. ಆ ಕಾರಣಕ್ಕೆ ರಾಜ್ಯ ಸರ್ಕಾರದ ಪ್ರತಿನಿಧಿ ಆಗಿ ನಾನು ರೈತರ ಬಳಿ ಬಂದಿರುವೆ. ಹೋರಾಟಗಾರರು 8 ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಇದನ್ನು ಒಬ್ಬರೇ ನಿರ್ಣಯ ತೆಗೆದುಕೊಳ್ಳಲು ಆಗಲ್ಲ. ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆಗೆ ಮಾತನಾಡಬೇಕು, ಕೇಂದ್ರ ‌ಸರ್ಕಾರಕ್ಕೆ ಭೇಟಿ ಆಗಬೇಕು. ಕೆಲವೊಂದು ಹೊಸ ಮಸೂದೆಯ ಅವಶ್ಯಕತೆ ಇದೆ. ನಿಮ್ಮೆಲ್ಲರ ಪರವಾಗಿ ನಾನು ನಾಳೆ ಸಿಎಂ ಸಿದ್ದರಾಮಯ್ಯ ‌ಭೇಟಿ ಆಗಿ ಬೇಡಿಕೆಯ ಮನವೊರಿಕೆ ಮಾಡುವೆ. ಸಿಎಂ ಬಳಿ‌ ನಾಳೆ ಸಂಜೆ, ಇಲ್ಲವೇ 10 ಜನರ ನಿಯೋಗ ಜೊತೆಗೆ ಬನ್ನಿ. ಎಲ್ಲರನ್ನೂ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿಸಿ ಸಭೆ ನಿಗದಿ ಮಾಡುವೆ ಎಂದು ಎಚ್.ಕೆ ಪಾಟೀಲ್ ಹೇಳಿದ್ದಾರೆ.

ಸಚಿವ ‌ಎಚ್.ಕೆ ಪಾಟೀಲ ಹೇಳಿಕೆಗೆ ರೈತರು ಒಪ್ಪದ ಕಾರಣ ನಿಮ್ಮ ಬೇಡಿಕೆ ಈಡೇರಬೇಕಾದ್ರೆ ತಕ್ಷಣವೇ ಸಿಎಂ ಜೊತೆಗೆ ನಡೆಯುವ ಸಭೆಗೆ ಬರಬೇಕು ಎಂದಿದ್ದಾರೆ. ನಾಳೆ ಬೆಳಗ್ಗೆಯೇ ಸಿಎಂ ಜೊತೆಗೆ ರೈತರ ಸಭೆ ನಿಗದಿ ಮಾಡುತ್ತೇನೆ. ಬಳಿಕ ಸಿಎಂ ಸಿದ್ದರಾಮಯ್ಯ ಜೊತೆಗೆ ‌ಕಾರ್ಖಾನೆ ಮಾಲೀಕರ ಸಭೆ ಮಾಡಿಸುವೆ. ನವೆಂಬರ್ 7, ಮಧ್ಯಾಹ್ನ ‌2 ಗಂಟೆಗೆ ಸರ್ಕಾರ ರೈತರ ಪರವಾದ ನಿಲುವನ್ನು ತಿಳಿಸಲಿದೆ ಎಂದಿದ್ದಾರೆ. ಆದರೆ ಸಚಿವರಿಗೆ ರೈತರು ನಾಳೆ ಸಂಜೆ ಒಳಗಿನ ಡೆಡ್‌ಲೈನ್ ನೀಡಿದ್ದಾರೆ.