• SBIನಲ್ಲಿ 1226 ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಗಳು ಖಾಲಿ• ಕರ್ನಾಟಕದಲ್ಲಿ 278 ಹುದ್ದೆಗಳಿಗೆ ನೇಮಕಾತಿ • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 29 ಕೊನೆಯ ದಿನವಾಗಿದೆ.
ಬೆಂಗಳೂರು(ಡಿ.15): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India), ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಎಸ್ಬಿಐ(SBI) ಬ್ಯಾಂಕ್ ಈಗಾಗಲೇ ಸರ್ಕಲ್ ಆಧಾರಿತ ಅಧಿಕಾರಿಗಳ (Circle Based Officer-CBO) ನೇಮಕಾತಿಗಾಗಿ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿದೆ. ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಲ್ಲಿ ಖಾಲಿ ಇರುವ, 1,200 ಕ್ಕೂ ಹೆಚ್ಚು ಹುದ್ದೆಗಳನ್ನು ಈ ನೇಮಕಾತಿ ಡ್ರೈವ್ನಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್ sbi.co.in ಗೆ ಭೇಟಿ ನೀಡಿ ಪರಿಶೀಲನೆ ನಡೆಸಬಹುದು. ಅರ್ಜಿ ಸಲ್ಲಿಸಲು ಡಿಸೆಂಬರ್ 29 ಕೊನೆಯ ದಿನಾಂಕವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಎಸ್ಬಿಐ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅರ್ಜಿ ನಮೂನೆಗಳನ್ನು ಡೌನ್ಲೋಡ್ ಮಾಡಿಕೊಂಡು ಸಲ್ಲಿಕೆ ಮಾಡಬೇಕು.
ಈ ಹುದ್ದೆಗಳಿಗೆ ಪ್ರಾದೇಶಿಕ ಭಾಷಾವಾರು ಆಯ್ಕೆ ಮಾಡಿಕೊಳ್ಳಲಿದೆ. ಅಹಮದಾಬಾದ್ (ಗುಜರಾತಿ)- 354 ಹುದ್ದೆಗಳು, ಬೆಂಗಳೂರು (ಕನ್ನಡ)- 278 ಹುದ್ದೆಗಳು, ಭೋಪಾಲ್ (ಹಿಂದಿ)- 214, ಚೆನ್ನೈ (ತಮಿಳು)-276 ಹಾಗೂ ಜೈಪುರ (ಹಿಂದಿ)- 104 ಹುದ್ದೆಗಳು ಸೇರಿ ಒಟ್ಟು 1,226 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆಯನ್ನು ಹೊಂದಿರಬೇಕು. ಭಾರತೀಯ ರಿಸರ್ವ್ ಬ್ಯಾಂಕ್‌ನ ಎರಡನೇ ಶೆಡ್ಯೂಲ್‌ನಲ್ಲಿ ಪಟ್ಟಿ ಮಾಡಲಾದ ಯಾವುದೇ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ಅಥವಾ ಯಾವುದೇ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು. ನೋಟಿಫಿಕೇಷನ್ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
BRO Recruitment: ಗಡಿ ರಸ್ತೆಗಳ ಸಂಸ್ಥೆಯಲ್ಲಿ 354 ಹುದ್ದೆಗಳಿಗೆ ನೇಮಕಾತಿ
ನಿರ್ದಿಷ್ಟ ರಾಜ್ಯದ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆ ರಾಜ್ಯದ ನಿರ್ದಿಷ್ಟಪಡಿಸಿದ ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಿರಬೇಕು(ಓದುವುದು, ಬರೆಯುವುದು ಮತ್ತು ಅರ್ಥಮಾಡಿಕೊಳ್ಳುವುದು). ಆಯ್ಕೆ ಪ್ರಕ್ರಿಯೆಯ ಭಾಗವಾಗಿ ಅನ್ವಯಿಕ ರಾಜ್ಯದ ನಿರ್ದಿಷ್ಟಪಡಿಸಿದ ಸ್ಥಳೀಯ ಭಾಷೆಯ ಜ್ಞಾನ ಪರೀಕ್ಷೆಯನ್ನು ನಡೆಸಲಾಗುತ್ತದೆ. 10ನೇ ಅಥವಾ 12ನೇ ತರಗತಿಯ ಮಾರ್ಕ್ ಶೀಟ್/ಪ್ರಮಾಣಪತ್ರವನ್ನು ಸಲ್ಲಿಸುವ ಅಭ್ಯರ್ಥಿಗಳು ಅನ್ವಯಿಕ ರಾಜ್ಯದ ನಿರ್ದಿಷ್ಟಪಡಿಸಿದ ಸ್ಥಳೀಯ ಭಾಷೆಯನ್ನು ಒಂದು ವಿಷಯವಾಗಿ ಅಧ್ಯಯನ ಮಾಡಿರಬೇಕು. ಅಭ್ಯರ್ಥಿಯು ಭಾಷಾ ಪರೀಕ್ಷೆಗೆ ಒಳಗಾಗುವ ಅಗತ್ಯವಿಲ್ಲ. ಡಿಸೆಂಬರ್ 1, 2021ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಯು 21 ವರ್ಷದಿಂದ 30 ವರ್ಷದೊಳಗೆ ಇರಬೇಕು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಎಸ್ಬಿಐ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅರ್ಜಿ ನಮೂನೆಗಳನ್ನು ಡೌನ್ಲೋಡ್ ಮಾಡಿಕೊಂಡು ಬಳಿಕ ಅರ್ಜಿ ಸಲ್ಲಿಕೆ ಮಾಡಬೇಕು. ವೆಬ್‌ಸೈಟ್ https://bank.sbi/careers ಮೂಲಕ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿಯ ನಂತರ, ಅಭ್ಯರ್ಥಿಗಳು ಆನ್‌ಲೈನ್ ಮೋಡ್ ಮೂಲಕ ಅಗತ್ಯವಾದ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗಕ್ಕೆ ಅರ್ಜಿ ಶುಲ್ಕ 750 ರೂ. ನಿಗದಿಯಾಗಿರುತ್ತದೆ. ಎಸ್ಸಿ, ಎಸ್ಟಿ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.ಬೇರೆ ಯಾವುದೇ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ.
ಎಸ್ಬಿಐ ನೇಮಕಾತಿ ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಲಿಖಿತ ಪರೀಕ್ಷೆ, ಸ್ಕ್ರೀನಿಂಗ್ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ. ಈ ಸರ್ಕಲ್ ಆಧಾರಿತ ಅಧಿಕಾರಿಗಳ (Circle Based Officer)ಹುದ್ದೆಗಳಿಗೆ ಆಯ್ಕೆಯಾಗುವವರಿಗೆ ಮಾಸಿಕ ಮೂಲ ವೇತನ 36,000 ರೂ. ದೊರೆಯಲಿದೆ. ಬಳಿಕ ಪ್ರತೀ ವರ್ಷ ಸೇವೆಗೆ ತಕ್ಕಂತೆ ವೇತನ ಹೆಚ್ಚಳವಾಗಲಿದೆ.
Technical graduate course: ಭಾರತೀಯ ಸೇನೆಯಲ್ಲಿ ಟೆಕ್ನಿಕಲ್ ಗ್ರ್ಯಾಜುಯೆಟ್ ಕೋರ್ಸ್‌ಗೆ ಅರ್ಜಿ ಆಹ್ವಾನ
ಆನ್‌ಲೈನ್ ಲಿಖಿತ ಪರೀಕ್ಷೆಯಲ್ಲಿ 120 ಅಂಕಗಳಿಗೆ ವಸ್ತುನಿಷ್ಠ ಪ್ರಶ್ನೆಗಳು ಮತ್ತು 50 ಅಂಕಗಳಿಗೆ ವಿವರಣಾತ್ಮಕ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇನ್ನು ಸಂದರ್ಶನವು 50 ಅಂಕಗಳನ್ನು ಒಳಗೊಂಡಿರುತ್ತದೆ. ಅಂತಿಮ ಆಯ್ಕೆಗೆ ಪರಿಗಣಿಸಲು ಅಭ್ಯರ್ಥಿಗಳು ಸಂದರ್ಶನದಲ್ಲಿ ಕನಿಷ್ಠ ಅರ್ಹತಾ ಅಂಕಗಳನ್ನು ಗಳಿಸಬೇಕು. ಕನಿಷ್ಠ ಅರ್ಹತಾ ಅಂಕಗಳನ್ನು ಎಸ್ ಬಿಐ ಬ್ಯಾಂಕ್ ನಿರ್ಧರಿಸುತ್ತದೆ.
