ಹುನಗುಂದದ ಕಮತಗಿಯಲ್ಲಿ ಟಂಟಂನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ
ಟಂಟಂನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ| ಮೀನಾಕ್ಷಿ ಬಾಲಪ್ಪ ಮುತ್ತಲಗೇರಿ ಟಂಟಂನಲ್ಲೆ ಹೆಣ್ಣು ಮಗುವಿಗೆ ಜನ್ಮ ನೀಡಿದಾಕೆ| ಕಮತಗಿ ಸರ್ಕಾರಿ ಆಸ್ಪತ್ರೆಯಲ್ಲಿ ಹುಡುಕಿದರು ಸಿಗದ ನರ್ಸ್| ನಂತರ 108 ವಾಹನದ ಮೂಲಕ ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆಗೆ ತಾಯಿ ಮತ್ತು ಮಗುವನ್ನು ಕರೆದುಕೊಂಡು ಹೋಗಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ|
ಅಮೀನಗಡ(ಅ.18): ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ನರ್ಸ್‌ಗಳು ಇಲ್ಲದ ಕಾರಣ ಟಂಟಂ ವಾಹನದಲ್ಲೇ ಗರ್ಭಿಣಿಯೊರ್ವಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಬುಧವಾರ ಕಮತಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಜರುಗಿದೆ.
ಕಮತಗಿ ಸಮೀಪದ ಕಡಿವಾಲ-ಕಲ್ಲಾಪೂರ-ಯರನಾಯ್ಕನಾಳ ಗ್ರಾಮದ ಮೀನಾಕ್ಷಿ ಬಾಲಪ್ಪ ಮುತ್ತಲಗೇರಿ ಟಂಟಂನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದಾಕೆ. ಬುಧವಾರ ಬೆಳಗಿನ ಜಾವ 5 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಸ್ಥಳೀಯ ಕಡಿವಾಲ-ಕಲ್ಲಾಪೂರದ ಆಶಾ ಕಾರ್ಯಕರ್ತೆ ಭೀಮವ್ವ ಪಾಟೀಲ ಅವರು ಕೂಡಲೇ 108 ಆಂಬ್ಯುಲೆನ್ಸ್ ವಾಹನಕ್ಕೆ ಕರೆ ಮಾಡಿದ್ದಾರೆ. ಆದರೆ, ಕರೆ ಸಿಗದಿದ್ದಾಗ ಟಂಟಂ ವಾಹನದಲ್ಲಿ ಕಮತಗಿ ಸರ್ಕಾರಿ ಆಸ್ಪತ್ರೆಗೆ 7 ಗಂಟೆಗೆ ಬಂದಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ನರ್ಸ್‌ಗಳನ್ನು ಹುಡುಕಿದರು ಸಿಕ್ಕಿಲ್ಲ. ಹೀಗಾಗಿ ಮಹಿಳೆಗೆ ಟಂಟಂನಲ್ಲೇ ಹರಿಗೆ ಆಗಿದೆ ಎಂದು ಆಶಾ ಕಾರ್ಯಕರ್ತೆ ಭೀಮವ್ವ ಪಾಟೀಲ ತಿಳಿಸಿದ್ದಾರೆ. ನಂತರ 108 ವಾಹನದ ಮೂಲಕ ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆಗೆ ತಾಯಿ ಮತ್ತು ಮಗುವನ್ನು ಕರೆದುಕೊಂಡು ಹೋಗಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ.
ಆದೇಶಕ್ಕೆ ಕಿಮ್ಮತ್ತಿಲ್ಲ:
ಈ ಹಿಂದೆ ಸಮೀಪದ ಕಮತಗಿ ಸರ್ಕಾರಿ ಆಸ್ಪತ್ರೆಯಲ್ಲಿ ಒಮ್ಮೆ ರಾತ್ರಿ ಗರ್ಭಿಣಿ ಪ್ರಸವ ವೇದನೆಯಿಂದ ತೊಂದರೆ ಅನುಭವಿಸಿದ್ದರು. ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿ ಆರೋಪಿಸಿದ್ದರು. ಆಗ ವಿಷಯ ತಿಳಿದು ಸ್ಥಳಕ್ಕೆ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಸಿಇಒ ಗಂಗೂಬಾಯಿ ಮಾನಕರ ಭೇಟಿ ನೀಡಿ, ಕಾರ್ಯನಿರ್ವಹಿಸುವ ನರ್ಸ್‌ಗಳು ಸರ್ಕಾರಿ ನಿಯಮದಂತೆ ಕಾರ್ಯನಿರ್ವಹಣೆ ಮಾಡಬೇಕು. ರೋಗಿಗಳನ್ನು, ಗರ್ಭಿಣಿಯರನ್ನು ನಿರ್ಲಕ್ಷಿಸಿದರೆ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದರು. ಆದರೆ, ಜಿಪಂ ಅಧ್ಯಕ್ಷೆ, ಸಿಇಒ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲದಂತಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಳೆದ ಹಲವು ವರ್ಷಗಳಿಂದ ರಾತ್ರಿ ವೇಳೆಯಲ್ಲಿ ಒಬ್ಬರೇ ನರ್ಸ್ ಕೆಲಸ ನಿರ್ವಹಿಸುತ್ತಾರೆ. ರಾತ್ರಿ ವೇಳೆಯಲ್ಲಿ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಅವರನ್ನು ಸರ್ಕಾರಿ ನಿಯಮದಂತೆ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಹಲವು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟವರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ರಾಜೇಸಾಬ ಕೋಲಾರ, ಹುಚ್ಚೇಶ ಹಾರೂಗೇರಿ, ಮಂಜುನಾಥ ಭಜಂತ್ರಿ, ತಿಮ್ಮಣ್ಣ ಹಗೇದಾಳ ಅವರು ಆಗ್ರಹಿಸಿದ್ದಾರೆ.