ಬಾಗಲಕೋಟೆ[ನ.2]: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರುಣಾಜನಕ ಪರಿಸ್ಥಿತಿಯಲ್ಲಿದ್ದಾರೆ. ಅವರಿಗೆ ಸಿಎಂ ಆಗುವ ಅನಿವಾರ್ಯತೆ ಇರಲಿಲ್ಲ. ಸಿಎಂ ಸ್ಥಾನ ಬಿಎಸ್ವೈ ಬಿಟ್ಟು ಬಿಡಲಿ. ಇಂಥಹ ಅಸಹಾಯಕತೆ ಯಾಕೆ ತೋರಿಸ್ಬೇಕು. ಪ್ರಧಾನಿ ಮೋದಿ, ಅಮಿತ್ ಷಾ ಭೇಟಿಗೆ ಅವಕಾಶ ನೀಡುತ್ತಿಲ್ಲ, ಸಹಾಯ ಮಾಡ್ತಿಲ್ಲ, ಹಣ ಸಂಪನ್ಮೂಲ ಕೂಡಿಸೋ ಶಕ್ತಿ ಬಿಎಸ್ವೈಗಿಲ್ಲ. ಶತಮಾನದ ಅತ್ಯಂತ ದುರ್ಬಲ ಸಿಎಂ ಆಗಿದ್ದಾರೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ವೀರಪ್ಪ ಮೋಯ್ಲಿ ಅವರು ಹೇಳಿದ್ದಾರೆ.

ಶನಿವಾರ ಜಿಲ್ಲೆಯ ಬಾದಾಮಿಯಲ್ಲಿ ಮಾತನಾಡಿದ ಅವರು,  ಬಿಎಸ್ವೈ ಸಿಎಂ ಪಟ್ಟ ಬಿಟ್ಟು ಬಿಡಲಿ ಬೇರೆಯವರು ನಿಭಾಯಿಸಿಕೊಂಡು ಹೋಗ್ತಾರೆ. ಯಾವುದೇ ಪಕ್ಷವಾಗಲಿ ಕರ್ನಾಟಕದಲ್ಲಿ ನಾಯಕತ್ವಕ್ಕೆ ಕೊರತೆ ಇಲ್ಲ. ಕಾಂಗ್ರೆಸ್ ನಾಳಿಯೇ ಅಧಿಕಾರ ತಗೊಂಡ್ರೆ ಇದನ್ನೆ ನಿಭಾಯಿಸೋ ಶಕ್ತಿ ಕಾಂಗ್ರೆಸ್ ಗಿದೆ. ಬಿಎಸ್ವೈ ಇನ್ನೂ ಹುಚ್ಚನಾಗುವ ಪರಿಸ್ಥಿತಿ ಇದೆ. ಯಡಿಯೂರಪ್ಪ ಅವರ ಆರೋಗ್ಯ, ಮಾನಸಿಕ, ಭೌತಿಕವಾಗಿಯೂ ಸರಿಯಿಲ್ಲ. ಮೋದಿ, ಅಮಿತ್ ಶಾ ಅವರಿಗೆ ಯಡಿಯೂರಪ್ಪ ಅವರನ್ನ ಹುಚ್ಚರನ್ನಾಗಿ ಮಾಡೋದು ಬೇಕಿತ್ತು. ಬೀದಿಗೆ ಅಟ್ಟಬಹುದು, ಇಲ್ಲವೆ ಬೇರೆಯವರಿಗೆ ಅಧಿಕಾರ ಕೊಡ್ಬಹುದು ಅನ್ನೋ ಸಂಚು ಇರಬಹುದು. ಇದೆಲ್ಲಾ ಬೆಳವಣಿಗೆ ನೋಡಿದ್ರೆ ಬಿಎಸ್ವೈ ವಿರುದ್ಧ ಸಂಚು ನಡೀತಿದೆ ಎಂದು ತಿಳಿಸಿದ್ದಾರೆ. 

ಯಾವ ದಿಕ್ಕಿನಲ್ಲಿ ಹೋಗುತ್ತಿದ್ದೇವೆ ಅನ್ನೋದು ಪಾಪ ತಂದೆ- ಮಕ್ಕಳಿಗೆ ಗೊತ್ತಾಗ್ತಿಲ್ಲ

ಇನ್ನು ಬಿಜೆಪಿ ಸರ್ಕಾರ ಬೀಳಿಸಲು ಬಿಡೊಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಎರಡು ತಿಂಗಳಲ್ಲಿ ಜೆಡಿಎಸ್ ಸರ್ಕಾರ ಬರುತ್ತೇ ಅಂತ ನಮ್ಮ ದೇಶದ ದೊಡ್ಡ ರಾಜಕಾರಿಣಿ ದೇವೇಗೌಡ್ರ ಹೇಳಿ ಬಿಟ್ಟಿದ್ದಾರೆ. ಏನರ್ಥ ಈ ಸರ್ಕಾರ ಉರಳಿಸಿದ್ರೆ ಜೆಡಿಎಸ್ ಸರ್ಕಾರ ಬರೋದು. ತಂದೆಯೊಂದು ಹೇಳೋದು, ಮಗನೊಂದು ವ್ಯತಿರಿಕ್ತವಾಗಿ ಹೇಳೋದು. ಯಾವ ದಿಕ್ಕಿನಲ್ಲಿ ಹೋಗುತ್ತಿದ್ದೇವೆ ಅನ್ನೋದು ಪಾಪ ತಂದೆ- ಮಕ್ಕಳಿಗೆ ಗೊತ್ತಾಗ್ತಿಲ್ಲ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ  ಬರುತ್ತೆ ಎಂದು ಹೇಳಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಯಾವ ಆಧಾರದ ಮೇಲೆ ಹೇಳಿದ್ದಾರೆ ಅವರನ್ನೇ ಕೇಳಿ. ಆದ್ರೆ ಈ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ಮುಂದುವರೆಯೋ ಸಂಭವ ಕಾಣ್ತಿಲ್ಲ. ಮುಂದೆ ಜೆಡಿಎಸ್, ಬಿಜೆಪಿ ಅಧಿಕಾರಕ್ಕೆ ಬರೋಲ್ಲ. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಮೊಯ್ಲಿ ಭವಿಷ್ಯ ನುಡಿದಿದ್ದಾರೆ. 

ಸಿದ್ದರಾಮಯ್ಯ ಪಾದಯಾತ್ರೆ ಮಾಡಲೇಬೇಕು ವಿಪಕ್ಷ ಸ್ಥಾನದಲ್ಲಿದ್ದು ಮಾಡಬೇಕಾದ ಕೆಲಸ. ಇಂದು ಈ ಬಗ್ಗೆ ಸಭೆ ಕರೆಯಲಾಗಿದೆ. ಇಂದು ಪಕ್ಷದ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಸಭೆಯಲ್ಲಿ ಪಾದಯಾತ್ರೆ ಬಗ್ಗೆ ನಿರ್ಧಾರ ಮಾಡ್ತೇವೆ ಎಂದು ಹೇಳಿದ್ದಾರೆ. 

ಟಿಪ್ಪು ಜಯಂತೋತ್ಸವ ಮಾಡಲಿ ಬಿಡಲಿ ಅದು ಅವ್ರ ಸರ್ಕಾರಕ್ಕೆ ಬಿಟ್ಟಿದ್ದು, ಆದ್ರೆ ಇಲ್ಲಿ ಪ್ರಶ್ನೆಯಿರೋದು ಇತಿಹಾಸದಿಂದ ಕಿತ್ತು ಹಾಕೋದು. ಯಾವುದು ಇತಿಹಾಸ ಕಿತ್ತು ಹಾಕ್ಬೇಕು ಅನ್ನೋದು ಸ್ಪಷ್ಟ ಮಾಡಲಿ. ಆದಿಲ್ ಶಾಹಿ, ಟಿಪ್ಪು ಹೈದರಾಲಿ ಇತಿಹಾಸ ಕಿತ್ತು ಹಾಕ್ತಾರಾ? ಎಲ್ಲಿಂದ ಎಲ್ಲಿಯವರೆಗೆ ಇತಿಹಾಸ ತೆಗೆಯುತ್ತೇವೆ ಎಂದು ಬಿಜೆಪಿಯವರು ಹೇಳಬೇಕು ಎಂದು ಹೇಳಿದ್ದಾರೆ.

ಬ್ರಿಟಿಷ್ ರ ವಿರುದ್ಧ ಪ್ರಥಮ ಬಾರಿಗೆ ಹೋರಾಡಿದ್ದು ಟಿಪ್ಪು. ರಾಷ್ಟ್ರ ಉಳಿಸಿಕೊಳ್ಳಲು ಮಕ್ಕಳನ್ನು ಅಡವಿಟ್ಟ ತ್ಯಾಗಿ ಟಿಪ್ಪು. ಇತಿಹಾಸ ಕಿತ್ತು ಹಾಕಿದ್ರೆ ಇಡೀ ಕರ್ನಾಟಕ ಏಕೀಕರಣ ಇತಿಹಾಸ ಕಿತ್ತು ಹಾಕ್ಬೇಕಾಗುತ್ತೆ. ಸ್ವಾತಂತ್ರ್ಯ ಹೋರಾಟದಲ್ಲಿ ಟಿಪ್ಪು ಇತಿಹಾಸ ಅವಿಭಾಜ್ಯ ಅಂಗವಾಗಿದೆ. ಇದನ್ನು ಕಿತ್ತು ಹಾಕ್ತಾರಾ, ನೂರು ವರ್ಷ ಅಲ್ಲ ಇನ್ನೂರು ಮುನ್ನೂರು ಇತಿಹಾಸ ಕಿತ್ತು ಹಾಕ್ಬೇಕಾಗುತ್ತೆ, ಮತೀಯವಾಗಿ ಇತಿಹಾಸವನ್ನು ಬರೆಯವಂತಹ ಪ್ರವೃತ್ತಿ ಪ್ರಜಾಪ್ರಭುತ್ವದ ದುರಂತ ಮತ್ತೊಂದಿಲ್ಲ ಎಂದು ಹೇಳಿದ್ದಾರೆ.