'ಸಿದ್ದರಾಮಯ್ಯ-ಯಡಿಯೂರಪ್ಪ ಪ್ರಾದೇಶಿಕ ಪಕ್ಷ ಕಟ್ಟಲಿ'
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಹುಟ್ಟು ಹಾಕಲಿ ಎಂದ ಕೂಡಲ ಸಂಗಮದ ಬಸವಪೀಠದ ಮಾದೇಶ್ವರ ಶ್ರೀಗಳು| ತಮಿಳುನಾಡಿನಂತೆ ಪ್ರಾದೇಶಿಕ ಪಕ್ಷ ಕಟ್ಟುವುದರಿಂದ ರಾಜ್ಯದ ಅಭಿವೃದ್ಧಿ ಸಾಧ್ಯ| ರಾಜ್ಯದಲ್ಲಿ ಲಿಂಗಾಯತ ಸಮುದಾಯ ಹತ್ತಿಕ್ಕುವ ಪ್ರಯತ್ನ ನಡೆದಿದೆ| ಇಂತಹ ಪ್ರಯತ್ನ ಸಾಧ್ಯವಾಗದು ಎಂದ ಶ್ರೀಗಳು| ಈಶ್ವರಪ್ಪ ಜಾತಿ ಕುರಿತು ಸ್ಪಷ್ಟಪಡಿಸಲಿ| ಬಸವ ಐಕ್ಯಮಂಟಪ ಇನ್ನು ದುರಸ್ತಿಯಾಗಿಲ್ಲ|
ಬಾಗಲಕೋಟೆ(ಅ.10): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸದ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಹುಟ್ಟು ಹಾಕಲಿ ಎಂದು ಕೂಡಲ ಸಂಗಮದ ಬಸವಪೀಠದ ಮಾದೇಶ್ವರ ಶ್ರೀಗಳು ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ಮಾದರಿಯಲ್ಲಿ ಪ್ರಾದೇಶಿಕ ಪಕ್ಷವನ್ನು ರಾಜ್ಯದಲ್ಲಿಯೂ ಉಭಯ ನಾಯಕರು ಕಟ್ಟಿದರೆ ರಾಜ್ಯದ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಲಿಂಗಾಯತ ಸಮುದಾಯವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನಿಯಂತ್ರಿಸುವ ಕೆಲಸ ಬಿಜೆಪಿ ಹಾಗೂ ಸಂಘ ಪರಿವಾರದಿಂದ ನಡೆಯುತ್ತಿದೆ ಎಂದು ಆಪಾದಿಸಿದ ಶ್ರೀಗಳು, ಇದು ಎಂದಿಗೂ ಸಾಧ್ಯವಾಗದ ಮಾತು. ಲಿಂಗಾಯತ ಸಮುದಾಯವನ್ನು ಯಾರೂ ಹತ್ತಿಕ್ಕಲು ಸಾಧ್ಯವಿಲ್ಲ. ಸದ್ಯ ಕೆಲವು ಕುತಂತ್ರಿಗಳು ನಡೆಸಿರುವ ಪ್ರಯತ್ನಕ್ಕೆ ಯಶ ಸಿಗುವುದಿಲ್ಲ ಎಂದರು.
ಈಶ್ವರಪ್ಪ ಯಾವ ಸಮುದಾಯದವರು?:
ನಾನು ಕುರುಬನೇ ಅಲ್ಲ ಎಂದು ಇತ್ತೀಚೆಗೆ ಸಚಿವ ಕೆ.ಎಸ್. ಈಶ್ವರಪ್ಪ ನೀಡಿರುವ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕೂಡಲಸಂಗಮ ಬಸವ ಧರ್ಮ ಪೀಠದ ಮಾದೇಶ್ವರ ಸ್ವಾಮೀಜಿ, ಹಾಗಾದರೆ ಈಶ್ವರಪ್ಪ ಅವರು ಯಾವ ಸಮುದಾಯಕ್ಕೆ ಸೇರಿದವರು ಎಂದು ಪ್ರಶ್ನೆ ಮಾಡಿದ್ದಾರೆ.
ಇತ್ತೀಚೆಗೆ ಈಶ್ವರಪ್ಪ ಅವರು ನೀಡಿರುವ ಹೇಳಿಕೆಗಳು ಗೊಂದಲ ಮೂಡಿಸುತ್ತಿವೆ. ಸದ್ಯ ಸಚಿವರಾಗಿರುವುದು ಜಾತಿಯಿಂದಲ್ಲವೇ ಎಂದಿರುವ ಶ್ರೀಗಳು, ವೀರಶೈವನೂ ಅಲ್ಲ, ಲಿಂಗಾಯತನೂ ಅಲ್ಲ, ಕುರುಬನಂತೂ ಅಲ್ಲವೇ ಅಲ್ಲ ಎಂದರೆ ಅವರ ಜಾತಿ ಯಾವುದು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜಕೀಯ ವ್ಯಕ್ತಿಗಳು ಮತ ಪಡೆಯಲು ಜಾತಿ ಹುಟ್ಟು ಹಾಕುತ್ತಾರೆ. ಆದರೆ ಅದರ ಪರಿಣಾಮ ಇಲ್ಲಿಗೆ ಬಂದು ನಿಂತಿದೆ. ಆದರೆ ಮಠಾಧೀಶರು ಶರಣ ತತ್ವ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಎಂದೂ ಜಾತಿಗಳನ್ನು ಪ್ರೋತ್ಸಾಹಿಸುವುದಿಲ್ಲ ಎಂದರು.
ಇನ್ನೂ ದುರಸ್ತಿಯಾಗದ ಐಕ್ಯ ಮಂಟಪ:
ಕೂಡಲಸಂಗಮದ ಬಸವ ಐಕ್ಯ ಮಂಟಪವನ್ನು ಇನ್ನೂ ದುರಸ್ತಿ ಮಾಡದಿರುವುದು ಬಸವ ಅನುಯಾಯಿಗಳಲ್ಲಿ ನೋವು ತಂದಿದೆ. ಸರ್ಕಾರ ಹಾಗೂ ಪ್ರಾಧಿಕಾರದಿಂದ ಮಾಡಲು ಆಗದಿದ್ದರೆ ನಾವೇ ದುರಸ್ತಿ ಮಾಡುವುದಾಗಿ ತಿಳಿಸಿದರು.
ಸುತ್ತೂರು ಶ್ರೀಗಳ ಫೋನ್ ಟ್ಯಾಪಿಂಗ್ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಸ್ವಾಮೀಜಿಗಳಾಗಲಿ, ರಾಜಕಾರಣಿಗಳದ್ದಾಗಲಿ, ಮಾಧ್ಯಮದವರದ್ದಾಗಲಿ ಯಾರದೇ ಫೋನ್ ಟ್ಯಾಪಿಂಗ್ ಮಾಡಿದ್ದರೂ ಅದು ತಪ್ಪಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.