ಜಮಖಂಡಿ: ರಾಮ ಜನ್ಮಭೂಮಿ ಅಯೋಧ್ಯೆ ನಮ್ಮದಾಗಲಿ

ರಾಮನ ಜನ್ಮಭೂಮಿ ಅಯೋಧ್ಯೆ ನಮ್ಮದಾಗಿಸಿಕೊಳ್ಳಬೇಕು. ನಾವೆಲ್ಲರೂ ಸಂಘಟನೆ-ಒಗ್ಗಟ್ಟಿನಿಂದ ದೇಶ ರಕ್ಷಣೆ ಮಾಡಬೇಕು ಎಂದ ದಿಲೀಪ ವರ್ಣೆಕರ| ಪ್ರತಿಯೊಬ್ಬ ವ್ಯಕ್ತಿ ಭಾರತದ ಬಗ್ಗೆ ಚಿಂತನೆ ಮಾಡುವ ಕಾರ್ಯದಲ್ಲಿ ತೊಡಗಬೇಕು| ರಾಷ್ಟ್ರೀಯ ಸ್ವಯಂ ಸಂಘವನ್ನು ಅಧರ್ಮ ಹಾಗೂ ಅಪರಾಧ ಮಾಡುವವರು ಮಾತ್ರ ಅಪಪ್ರಚಾರ ಮಾಡಲು ಮುಂದಿದ್ದಾರೆ| ಸ್ವಯಂ ಸೇವಕರಲ್ಲಿ ತ್ಯಾಗ ಬಲಿದಾನದ ಗುಣ ಬೆಳೆಸಿಕೊಳ್ಳಬೇಕು|

RSS Programme Held at Jamakhandi in Bagalkot District

ಜಮಖಂಡಿ(ಅ.18): ರಾಮನ ಜನ್ಮಭೂಮಿ ಅಯೋಧ್ಯೆ ನಮ್ಮದಾಗಿಸಿಕೊಳ್ಳಬೇಕು. ನಾವೆಲ್ಲರೂ ಸಂಘಟನೆ-ಒಗ್ಗಟ್ಟಿನಿಂದ ದೇಶ ರಕ್ಷಣೆ ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧರ್ಮ ಜಾಗರಣ ಸಮನ್ವಯ ಪ್ರಾಂತ ಸಂಯೋಜಕ ದಿಲೀಪ ವರ್ಣೆಕರ ಅವರು ಹೇಳಿದ್ದಾರೆ. 

ಇಲ್ಲಿನ ಜಿಜಿ ಹೈಸ್ಕೂಲ್‌ ಮೈದಾನದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಾವರ್ಗ-2019 ಸಮಾರೋಪ ಸಮಾರಂಭದಲ್ಲಿ  ಮುಖ್ಯ ವಕ್ತಾರ ಭಾಷಣ ನೀಡಿದ ಅವರು, ಪ್ರತಿಯೊಬ್ಬ ವ್ಯಕ್ತಿ ಭಾರತದ ಬಗ್ಗೆ ಚಿಂತನೆ ಮಾಡುವ ಕಾರ್ಯದಲ್ಲಿ ತೊಡಗಬೇಕು. ರಾಷ್ಟ್ರೀಯ ಸ್ವಯಂ ಸಂಘವನ್ನು ಅಧರ್ಮ ಹಾಗೂ ಅಪರಾಧ ಮಾಡುವವರು ಮಾತ್ರ ಅಪಪ್ರಚಾರ ಮಾಡಲು ಮುಂದಿದ್ದಾರೆ. ಸ್ವಯಂ ಸೇವಕರಲ್ಲಿ ತ್ಯಾಗ ಬಲಿದಾನದ ಗುಣ ಬೆಳೆಸಿಕೊಳ್ಳಬೇಕು ಎಂದರು.

ಇಡೀ ಜಗತ್ತಿನಲ್ಲೇ ಆರ್‌ಎಸ್‌ಎಸ್‌ ಬಲಿಷ್ಠ ಹಿಂದು ಸಂಘಟನೆ

ಆರ್‌ಎಸ್‌ಎಸ್‌ ಸಂಘಟನೆ ಇಡೀ ಜಗತ್ತಿನಲ್ಲೇ ಬಲಿಷ್ಠ ಹಿಂದು ಸಂಘಟನೆಯಾಗಿದೆ. ಅದರ ಬಗ್ಗೆ ಅಪಪ್ರಚಾರ ಮಾಡುವವರನ್ನು ನಾವೂ ಎಂದೂ ಸಹಿಸಿಕೊಳ್ಳಬಾರದು. ಜಗತ್ತಿನ 40 ರಾಷ್ಟ್ರಗಳಲ್ಲಿ ಸಂಘದ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ದೇಶದ 36 ಸಾವಿರ ಗ್ರಾಮಗಳಲ್ಲಿ ಸಂಘದ ಶಾಖೆಗಳನ್ನು ಸ್ಥಾಪಿಸಲಾಗಿದೆ. ಇಷ್ಟೊಂದು ದೊಡ್ಡ ಹಿಂದು ಸಂಘಟನೆ ಬಗ್ಗೆ ಕೆಲವು ರಾಜಕೀಯ ಪಕ್ಷಗಳು ಕ್ಷುಲಕ ಭಾವನೆ ಹೊಂದಿವೆ. ಭಾರತ ಶಕ್ತಿಶಾಲಿ ಹಾಗೂ ವೈಭವಯುತ ದೇಶವಾಗಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಭಾರತ ಬಲಿಷ್ಠವಾಗಿದೆ. ಮಾಹಿತಿ-ತಂತ್ರಜ್ಞಾನ-ಸೈನ್ಯ-ಸಂಘಟನೆಗಳಲ್ಲಿ ಉನ್ನತ ಸ್ಥಾನದಲ್ಲಿದೆ. ಪ್ರತಿಯೊಂದು ಜಿಲ್ಲೆಗಳಲ್ಲಿ ಯುವಕರಿಗೆ ಉತ್ತಮ ಶಿಕ್ಷಣ ಸಿಗುತ್ತಿದೆ. ಸ್ವಾರ್ಥಭಾವನೆ-ಒಳಜಗಳ ಹೊಟ್ಟೆಕಿಚ್ಚುಗಳಂತಹ ಕೊಳಕು ಭಾವನೆ ಹೊಂದಿದ ಕೆಲವರು ಸಂಘದ ಬೆಳವಣಿಗೆಯನ್ನು ನೋಡದೇ ಇಲ್ಲದ ಸಲ್ಲದ ಆರೋಪ ಮಾಡುತ್ತಿರುವುದನ್ನು ಸಂಘ ಖಂಡಿಸುತ್ತದೆ ಎಂದರು.

ದೇಶದ ಹಿಂದೂಗಳು ಎಂದೂ ಹೇಡಿಗಳಲ್ಲ. ನಮ್ಮ ದೇಶದ ಮಹಾತ್ಮರು ಹಿಂದೂಗಳನ್ನು ಹೇಡಿಗಳೆಂದು ಸಂಭೋದಿಸಿದ್ದು, ಖಂಡನೀಯ ಛತ್ರಪತಿ ಶಿವಾಜಿ ಮಹಾರಾಜರಲ್ಲಿ ಅಲ್ಪಪ್ರಮಾಣದ ಸೈನ್ಯವಿದ್ದರೂ ಘಟಾನುಘಟಿ ರಾಜರನ್ನು ಸೋಲಿಸಿ ಹಿಂದುತ್ವವನ್ನು ಉಳಿಸಿದ ಧೀಮಂತ ನಾಯಕನಾಗಿದ್ದನು. ಸ್ವಯಂ ಸಂಘದ ಸಂಘಟನೆಯನ್ನು ಸಂಘಟಿಸಿದ್ದ ಡಾ. ಹೆಡ್ಗೇವಾರ ಅವರು ಮೊದಲು ಕಾಂಗ್ರೆಸ್‌ದಲ್ಲಿದ್ದರು. ಅಲ್ಲಿನ ಅವ್ಯವಸ್ಥೆಯನ್ನು ಕಂಡು ಆರ್‌ಎಸ್‌ಎಸ್‌ ಸಂಘಟನೆ ಹುಟ್ಟು ಹಾಕಿದರೂ, ಸಂಸ್ಥಾಪಕರು ಕಾಲವರೂ ಸಂಘಟನೆಯಲ್ಲಿ ಯಾವುದೇ ಕೊರತೆಯಾಗಿಲ್ಲ ಎಂದು ಹೇಳಿದರು.

ಪಥ ಸಂಚಲನ:

ಇಲ್ಲಿನ ಅಮೋಘಸಿದ್ದೇಶ್ವರ ಮಂದಿರದಿಂದ ನಗರದ ವಿವಿಧ ಬೀದಿಗಳಲ್ಲಿ ಗಣವೇಷಧಾರಿಗಳು ಪಥಸಂಚಲನ ನಡೆಸಿದರು. ಜಿಜಿ ಹೈಸ್ಕೂಲ್‌ ಮೈದಾನದಲ್ಲಿ ನಡೆದ ಸಮಾರಂಭಕ್ಕೂ ಮುಂಚೆ ಗಣವೇಷಧಾರಿಗಳು ಘೋಷ ಪ್ರದರ್ಶನ ಹಾಗೂ ದಂಡ ಪ್ರದರ್ಶನ, ಸಾಮೂಹಿಕ ಕವಾಯಿತಗಳನ್ನು ಪ್ರದರ್ಶನ ಮಾಡುವ ವೇಳೆ ರಭಸದ ಮಳೆ ಸುರಿಯಿತು.

ಉದ್ಯಮಿ ಉಮೇಶ ಮುರಗೋಡ ಅಧ್ಯಕ್ಷತೆ ವಹಿಸಿದ್ದರು. ಸಂಘ ಸಂಚಾಲಕ ಬಾಳಾಸಾಹೇಬ ಕುಲಕರ್ಣಿ ವೇದಿಕೆಯಲ್ಲಿದ್ದರು.ಶಿಬಿರಾರ್ಥಿಗಳು ರಾಷ್ಟ್ರೀಯ ಭಾವೈಕ್ಯತೆ ಗೀತೆ ಹಾಡಿದರು. ಕುಮಾರ ಹವಾಲ್ದಾರ ಸ್ವಾಗತಿಸಿದರು. ಕಲ್ಯಾಣಿ ಶಿರಗುಪ್ಪಿ ವರದಿ ವಾಚಿಸಿದರು. ಮಲ್ಲಪ್ಪ ಒಡೆಯರ ಪರಿಚಯಿಸಿದರು. ಶಿವಾನಂದ ಕಮತರ ನಿರೂಪಿಸಿದರು. ಪ್ರಭು ಹೂಗಾರ ವಂದಿಸಿದರು.
 

Latest Videos
Follow Us:
Download App:
  • android
  • ios