ಬಾಗಲಕೋಟೆಯಲ್ಲಿ ಗಮನ ಸೆಳೆದ ಆರ್‌ಎಸ್‌ಎಸ್‌ ಪಥ ಸಂಚಲನ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವದ ನಿಮಿತ್ತ ನಗರದಲ್ಲಿ ಗಮನ ಸೆಳೆದ ಪಥಸಂಚಲನ| ನಗರದೆಲ್ಲೆಡೆ ಸಂಭ್ರಮದ ಹಾಗೂ ಹಬ್ಬದ ವಾತಾವರಣ| ಗಣವೇಷಧಾರಿಗಳ ಪಥ ಸಂಚಲನದ ಸ್ವಾಗತಕ್ಕಾಗಿ ಎಲ್ಲೆಡೆ ಕೇಸರಿ ಧ್ವಜ, ಬ್ಯಾನರ್‌, ಕಟೌಟ್‌, ರಂಗೋಲಿ, ತಳಿರು ತೋರಣಗಳಿಂದ ಸಿಂಗಾರಗೊಳಿಸಲಾಗಿತ್ತು| ನವ ವಧುವಿನಂತೆ ಕಂಗೊಳಿಸುತ್ತಿದ್ದ ನಗರ ಎಲ್ಲೆಡೆ ಕೇಸರಿಮಯವಾಗಿತ್ತು| 
 

RSS Programme Held at Bagalkot

ಬಾಗಲಕೋಟೆ(ಅ.14): ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವದ ನಿಮಿತ್ತ ನಗರದಲ್ಲಿ ಭಾನುವಾರ ನಡೆದ ಪಥಸಂಚಲನ ಎಲ್ಲರ ಗಮನ ಸೆಳೆಯಿತು.

ನಗರದೆಲ್ಲೆಡೆ ಸಂಭ್ರಮದ ಹಾಗೂ ಹಬ್ಬದ ವಾತಾವರಣದ ನಡುವೆ ನಡೆದ ಗಣವೇಷಧಾರಿಗಳ ಪಥ ಸಂಚಲನದ ಸ್ವಾಗತಕ್ಕಾಗಿ ಎಲ್ಲೆಡೆ ಕೇಸರಿ ಧ್ವಜ, ಬ್ಯಾನರ್‌, ಕಟೌಟ್‌, ರಂಗೋಲಿ, ತಳಿರು ತೋರಣಗಳಿಂದ ಸಿಂಗಾರಗೊಳಿಸಲಾಗಿತ್ತು. ನವ ವಧುವಿನಂತೆ ಕಂಗೊಳಿಸುತ್ತಿದ್ದ ನಗರ ಎಲ್ಲೆಡೆ ಕೇಸರಿಮಯವಾಗಿತ್ತು.

ನಗರದಲ್ಲಿ ಪಥಸಂಚಲನಕ್ಕಾಗಿಯೇ ಎರಡು ಮಾರ್ಗಗಳನ್ನು ಸಿದ್ಧಪಡಿಸಲಾಗಿತ್ತು. ಬಸವೇಶ್ವರ ಕಾಲೇಜು ಮೈದಾನದಿಂದ ಸರಿಯಾಗಿ 4 ಗಂಟೆಗೆ ಆರಂಭಗೊಂಡ ಗಣವೇಷಧಾರಿಗಳ ಪಥಸಂಚಲದ ಒಂದು ಮಾರ್ಗ ಕರವೀರಮಠ, ಶಿರೂರ ಅಗಸಿ ಮಾರ್ಗವಾಗಿ ತೆರಳಿದರೆ, ಮತ್ತೊಂದು ಗಣವೇಷಧಾರಿಗಳ ತಂಡ ಸಾಸನೂರು ಪೆಟ್ರೋಲ್‌ ಬಂಕ್‌ ಮೂಲಕ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಮತ್ತೆ ಎರಡು ತಂಡಗಳು ಬಸವೇಶ್ವರ ಕಾಲೇಜು ಮೈದಾನವನ್ನು ಸೇರಿಕೊಂಡವು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗಣವೇಷಧಾರಿಗಳ ಪಥ ಸಂಚಲನದುದ್ದಕ್ಕೂ ಚಿಕ್ಕ ಮಕ್ಕಳಿಗೆ ದೇಶಭಕ್ತ ಮಹಾಪುರುಷರ ವೇಷ ಹಾಕಿ ಮಾರ್ಗದಲ್ಲಿ ಸಾರ್ವಜನಿಕರು ನಿಲ್ಲಿಸುವ ಮೂಲಕ ಗಮನ ಸೆಳೆದರೆ, ಭಗವಾಧ್ವಜದ ಅಬ್ಬರ, ದೇಶಭಕ್ತರ ಕುರಿತು ಘೋಷಣೆಗಳು ಹೆಚ್ಚಾಗಿ ಮೊಳಗಿದವು.

ವಿಜಯ ದಶಮಿಯ ಉತ್ಸವವೆಂದೆ ಬಣ್ಣಿಸಲಾಗುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥ ಸಂಚಲನದ ವೀಕ್ಷಣೆಗಾಗಿ ಬಾಗಲಕೋಟೆ ನಗರಕ್ಕೆ ಸುತ್ತಲ ಗ್ರಾಮಗಳಿಂದ ಜನರು ಆಗಮಿಸಿದ್ದರು.

ಬಿಗಿ ಪೊಲೀಸ್‌ ಬಂದೋಬಸ್ತ್:

ನಗರದಲ್ಲಿ ನಡೆದ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. 1 ಸಾವಿರ ಪೊಲೀಸರು, 26 ಡಿಆರ್‌, 8 ಕೆಎಸ್‌ಆರ್‌ಪಿ ತುಕಡಿ, 300 ಗೃಹ ರಕ್ಷಕ ದಳ ಸಿಬ್ಬಂದಿ, 2 ಆಂಬ್ಯುಲನ್ಸ್‌, ಅಗ್ನಿ ಶಾಮಕ ದಳ, 8 ಡಿವೈಎಸ್‌ಪಿ, 19 ಸಿಪಿಐ, 55 ಪಿಎಸ್‌ಐ, 81 ಎಎಸ್‌ಐ ಇವರುಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿ​ಕಾರಿ ಲೋಕೇಶ ಜಗಲಾಸರ ತಿಳಿಸಿದರು.

ಶೀಘ್ರ ರಾಮ ಮಂದಿರ ನಿರ್ಮಾಣ

ಇದೇ ವೇಳೆ ಮಾತನಾಡಿದ ಧರ್ಮಜಾಗರಣಾ ಕರ್ನಾಟಕ ಉತ್ತರದ ಪ್ರಾಂತ ಸಹಸಂಯೋಜಕ ಹನಮಂತ ಮಳಲಿ ಅವರು, ದೇಶದಲ್ಲಿ ಪುರುಷತ್ವ ಇರುವವರು ಕೇಂದ್ರದಲ್ಲಿ ಅ​ಧಿಕಾರ ನಡೆಸುತ್ತಿರುವ ಪರಿಣಾಮ ಕಾಶ್ಮೀರದ 370 ರದ್ಧತಿಯಾಗಿದೆ. ಬರುವ ದಿನಗಳಲ್ಲಿ ರಾಮ ಮಂದಿರವನ್ನು ಸಹ ನಿರ್ಮಿಸಲಿದ್ದೇವೆ ಎಂದು ಹೇಳಿದ್ದಾರೆ. 

ಮಾತೆತ್ತಿದರೆ ಹಿಂದೂ ಧರ್ಮ ಇಲ್ಲ ರಾಮ ಹುಟ್ಟಿಲ್ಲ. ಭಗವದ್ಗೀತ ಇಲ್ಲ ಅನ್ನುವ ಎಲ್ಲರಿಗೂ ಉತ್ತರ ದೊರಕುವ ಸಮಯ ಸದ್ಯದಲ್ಲಿಯೇ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದಲ್ಲಿ ಏಕರೂಪ ಕಾಯ್ದೆ ಬರುವವರೆಗೆ ಹಿಂದೂಗಳು ಸಹ ಜನಸಂಖ್ಯೆಯನ್ನು ನಿಯಂತ್ರಣ ಮಾಡುವ ಅಗತ್ಯವಿಲ್ಲ. ನಿಯಂತ್ರಣ ಮಾಡಲು ಹೊರಟರೆ 2050 ರ ಹೊತ್ತಿಗೆ ಹಿಂದೂಗಳೆ ಅಲ್ಪಸಂಖ್ಯಾತರಾಗುವ ಭಯವಿದೆ ಎಂದರು.
ಭಾರತದ ಶೇ.63 ರಷ್ಟು ಭಾಗ ಕಳೆದು ಹೋಗಿದೆ. ಅದನ್ನು ಮತ್ತೆ ನಾವು ಪಡೆಯುವ ಅಗತ್ಯವಿಲ್ಲ, ಅದು ತಾನೆ ಬರಲಿದೆ ಎಂದರಲ್ಲದೆ ಭಾರತದ ಆಯುಷ್ಯಕ್ಕೆ ಎಂದು ಕೊನೆ ಇಲ್ಲ ಹೀಗಾಗಿ ಭಾರತಕ್ಕೆ ಪರ್ಯಾಯವಾಗಿ ಯಾರೂ ಬರಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭಗೊಂಡ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯ ಉದ್ದೇಶ ಗುಲಾಮಗಿರಿಯನ್ನು ಹೋಗಲಾಡಿಸುವುದು. ಹಿಂದೂಗಳನ್ನು ಒಗ್ಗೂಡಿಸುವ ಮೂಲಕ ಪರಕೀಯರ ದಬ್ಬಾಳಿಕೆಗೆ ಉತ್ತರ ನೀಡುವುದಾಗಿತ್ತು ಎಂದು 1925 ರಲ್ಲಿ ಡಾ.ಹೆಡಗೆವಾರ ಸ್ಥಾಪಿಸಿದ ಸಂಘ ಇಂದು ಹಿಂದೂಗಳ ಒಗ್ಗೂಡುವಿಕೆಗೆ ಬಹುದೊಡ್ಡ ಕೊಡುಗೆ ನೀಡಿದೆ ಎಂದು ಬಣ್ಣಿಸಿದರು.
 

Latest Videos
Follow Us:
Download App:
  • android
  • ios