ಬಾಗಲಕೋಟೆಯಲ್ಲಿ ಹೆತ್ತವರ ಸವಿನೆನಪಿಗೆ ಗುಡಿ ಕಟ್ಟಿ ಪೂಜಿಸುತ್ತಿರುವ ಸಾಹಿತಿ
ಹೆತ್ತವರ ನೆನಪಿಗಾಗಿ ಸ್ವಂತ ಹೊಲದಲ್ಲಿ ತಂದೆ ತಾಯಿಯರ ಗುಡಿ ಕಟ್ಟಿದ ಪುತ್ರ
ಪಾಲಕರ ದೇವಾಲಯಕ್ಕೆ ಹೋಗಿ ಪ್ರತಿನಿತ್ಯ ಪೂಜೆ ಪುನಸ್ಕಾರ ಕಾರ್ಯ
ಬಾಗಲಕೋಟೆ ಜಿಲ್ಲೆಯ ಶಿಕ್ಕೇರಿ ಗ್ರಾಮದ ಕವಿ ಎಚ್.ಎನ್.ಶೇಬನ್ನವರ ಕಾರ್ಯ ಸಮಾಜಕ್ಕೆ ಮಾದರಿ
ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ನ.26): ತಂದೆ ತಾಯಿಗಳಿಗೆ ವಯಸ್ಸಾದ್ರೆ ಸಾಕು ಅವರನ್ನ ಸಾಕೋದು ಹೇಗಪ್ಪಾ ಅಂತ ವಿಚಾರಿಸಿ ಅವರನ್ನ ದೂರವಿಟ್ಟು ಬದುಕೋ ಅದೆಷ್ಟೋ ಮಕ್ಕಳಿರೋ ಇಂದಿನ ಕಾಲದಲ್ಲಿ ಪುತ್ರನೊಬ್ಬ ತಮ್ಮ ಹೆತ್ತ ತಂದೆ ತಾಯಿಗಳ ನೆನಪು ಸದಾ ಸ್ಮರಣೀಯವಾಗಿರಲೆಂದು ತಂದೆ-ತಾಯಿಗಳಿಗೆ ಗುಡಿಯನ್ನೇ ಕಟ್ಟಿ ನಿತ್ಯ ಆರಾಧನೆಯಲ್ಲಿ ತೊಡಗಿದ್ದಾರೆ. ಹಾಗಾದ್ರೆ ಅವರಾರು? ಗುಡಿ ಕಟ್ಟಿರೋದಾದ್ರೂ ಎಲ್ಲಿ? ಅಂತೀರಾ. ಈ ಕುರಿತ ವರದಿ ಇಲ್ಲಿದೆ.
ಇವರ ಹೊಲದಲ್ಲಿ ನಿಂತರೆ ಸಾಕು ಕಾಣ ಸಿಗುವ ತಂದೆ ತಾಯಿಯೇ ದೇವರು ಎಂಬ ಬರಹದ ಕಮಾನು, ಒಳ ಹೋದರೆ ಹೆತ್ತ ತಂದೆ ತಾಯಿಗಳಿಬ್ಬರಿಗೆ ಕಟ್ಟಿದ ಗುಡಿ, ತಂದೆ-ತಾಯಿಗಳ ಗುಡಿಯಲ್ಲಿ ನಿತ್ಯ ಪೂಜೆ ಸಲ್ಲಿಸುವ ಪುತ್ರ. ಅಂದಹಾಗೆ ಇಂತಹವೊಂದು ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯ ಶಿಕ್ಕೇರಿ ಗ್ರಾಮದಲ್ಲಿ. ಹೌದು, ಗ್ರಾಮದಲ್ಲಿ ಕವಿ ಎಂದೇ ಕರೆಯಿಸಿಕೊಳ್ಳುವ ಎಚ್.ಎನ್.ಶೇಬನ್ನವರ ಅವರೇ ತಮ್ಮ ತಂದೆ ತಾಯಿಗಳಿಗಾಗಿ ಗುಡಿಯನ್ನ ಕಟ್ಟಿದ್ದಾರೆ. ತಂದೆ ನಿಂಗನಗೌಡ ಮತ್ತು ತಾಯಿ ಮರಲಿಂಗವ್ವ ಅವರ ಮರಣಾನಂತರ ತಮ್ಮ ತಂದೆ ತಾಯಿಗಳ ನೆನಪು ಹಸರಾಗಿಬೇಕು ಮತ್ತು ಸದಾ ಅವರು ತಮ್ಮೊಂದಿಗಿದ್ದಾರೆಂಬ ಭಾವನೆ ಹಿನ್ನೆಲೆಯಲ್ಲಿ ತಮ್ಮ ಸ್ವಂತ ಹೊಲದಲ್ಲಿಯೇ ಗುಡಿಯೊಂದನ್ನ ಕಟ್ಟಿದ್ದಾರೆ.
ಅಬ್ಬಬ್ಬಾ, ಇದೆಂಥಾ ಪವಾಡ! ಕಣ್ಣು ಬಿಟ್ಟ ಶಿವಲಿಂಗ!
ಹೆತ್ತವರ ಗುಡಿಗೆ ನಿತ್ಯ ನಡೆಯುತ್ತೇ ಪೂಜೆ ಪುನಸ್ಕಾರ:
ಇನ್ನು ಕವಿ ಎಚ್.ಎನ್. ಶೇಬನ್ನವರ ತಮ್ಮ ತಂದೆ ತಾಯಿಗಳಿಗೆ ಕಟ್ಟಿದ ಗುಡಿಗೆ ಪೂಜೆ ಸಲ್ಲಿಸಿ ದರ್ಶನ ಪಡೆಯುತ್ತಾರೆ. ಅಂದರೆ ನಿತ್ಯ ಬೆಳಿಗ್ಗೆ ತಮ್ಮ ಹೊಲಕ್ಕೆ ತೆರಳಿ ತಮ್ಮ ತಂದೆ ತಾಯಿಗಳಿಗೆ ಪೂಜೆ ಸಲ್ಲಿಸಿ ನಮಸ್ಕರಿಸಿ ಮುಂದಿನ ಕೆಲ್ಸಕ್ಕೆ ಹೋಗುವ ಪರಿಪಾಠವನ್ನ ಕವಿ ಎಚ್.ಎನ್.ಶೇಬನ್ನವರ ಹೊಂದಿದ್ದಾರೆ. ಹೀಗೆ ತಂದೆ ತಾಯಿಗಳ ನನೆಪಿಗಾಗಿ ಗುಡಿಯನ್ನ ಕಟ್ಟಿದ್ದು ಬಹಳಷ್ಟು ಮನಸ್ಸಿಗೆ ಸಂತೋಷ ತಂದಿದೆ. ಕಾಣದೇ ಇರೋ ದೇವರಿಗೆ ಕೈ ಮುಗಿಯುವದಕ್ಕಿಂತ ಕಣ್ಣಿಗೆ ಕಂಡ ತಂದೆತಾಯಿಗಳಿಗಾಗಿ ಗುಡಿ ಕಟ್ಟಿ ಅವರ ಸ್ಮರಣೆಯಲ್ಲಿರೋದು ಮನಸ್ಸಿಗೆ ನೆಮ್ಮದಿಯುಂಟು ಮಾಡಿದೆ ಎನ್ನುತ್ತಾರೆ ಕವಿ ಎಚ್.ಎನ್.ಶೇಬನ್ನವರ ಅವರು.
ತಂದೆ ತಾಯಿ ಮಡಿಲಲ್ಲಿದ್ದೇನೆಂಬ ಭಾವ: ಕವಿ ಎಚ್.ಎನ್.ಶೇಬನ್ನವರ ತಮ್ಮ ಮನಸ್ಸಿಗೆ ಏನಾದರೂ ಬೇಜಾರಾದ್ರೆ, ನೋವುಂಟು ಆದರೆ ನೇರವಾಗಿ ಹೊಲಕ್ಕೆ ಬರ್ತಾರೆ, ಬಂದು ತಮ್ಮ ತಂದೆತಾಯಿಗಳಿಗೆ ಕಟ್ಟಿದ ಗುಡಿಗೆ ಬಂದು ದರ್ಶನ ಪಡೆದು ಕೆಲಕಾಲ ಅಲ್ಲಿಯೇ ಸ್ಮರಣೆ ಮಾಡ್ತಾರೆ, ಇದ್ರಿಂದ ತಮಗೆ ತಮ್ಮ ತಂದೆತಾಯಿಗಳ ಜೊತೆ ಇದ್ದಂತೆ ಅನುಭವವಾಗುತ್ತದೆ ಎಂಬ ಭಾವ ಉಂಟಾಗುತ್ತದೆಯಂತೆ. ಇತ್ತ ತಂದೆ ತಾಯಿಗಳಿಗೆ ಸ್ವಲ್ಪ ವಯಸ್ಸಾದ್ರೆ ಸಾಕು ಇವರನ್ನೆಲ್ಲಿ ಸಾಕೋದು ಅನ್ನೋ ಮಕ್ಕಳಿರೋ ಇಂದಿನ ಆಧುನಿಕತೆ ಯುಗದಲ್ಲೂ ಪುತ್ರನೊಬ್ಬ ತನ್ನ ಹೆತ್ತವರು ಮರಣಾನಂತರವೂ ಅವರ ನೆನಪಿಗಾಗಿ ಗುಡಿ ಕಟ್ಟಿ ನಿತ್ಯ ಪೂಜೆ ಸಲ್ಲಿಸುತ್ತಾ ಅವರ ಸ್ಮರಣೆಯಲ್ಲಿರೋದು ಅಭಿಮಾನಪಡುವಂತ ಸಂಗತಿಯಾಗಿದೆ ಎಂದು ಸ್ಥಳೀಯರಾದ ವಿಶ್ವನಾಥ್ ಹೇಳುತ್ತಾರೆ.
Kodagu: ಸುಬ್ರಹ್ಮಣ್ಯ ದೇವಾಲಯದಲ್ಲಿ ಅನ್ಯಧರ್ಮಿಯರಿಗೆ ವ್ಯಾಪಾರ ನಿಷೇಧ: ಶಾಸಕರ ಬೆಂಬಲ
ನಾಟಕ, ಹಾಡುಗಳ ರಚನೆಗೆ ಪ್ರಸಿದ್ಧಿ: ಸದಾ ಸಾಹಿತ್ಯದ ಗೀಳು ಹಚ್ಚಿಕೊಂಡಿರುವ ಕವಿ ಎಚ್.ಎನ್. ಶೇಬನ್ನವರ ಹಾಡುಗಳನ್ನ, ನಾಟಕಗಳನ್ನ ರಚನೆ ಮಾಡಿದ್ದಾರೆ. ಈವರೆಗೆ ೧೭ ನಾಟಕಗಳು ರಚನೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಪ್ರದರ್ಶನ ಆಗುತ್ತಿವೆ. ೫೦ಕ್ಕೂ ಅಧಿಕ ಹಾಡುಗಳನ್ನು ರಚನೆ ಮಾಡಿದ್ದು, ಜಾನಪದ ಹಾಡುಗಳ ಕ್ಯಾಸೆಟ್ ಬಿಡುಗಡೆಯಾಗಿವೆ. ಹೀಗೆ ಸಾಹಿತ್ಯ ಸೇವೆ ಸಲ್ಲಿಸಿರುವ ಕವಿ ಎಚ್.ಎನ್.ಶೇಬನ್ನವರ ಪ್ರತಿವರ್ಷ ತಮ್ಮ ತಂದೆ ತಾಯಿಯರ ಹೆಸರಿನಲ್ಲಿ ಸಮಾರಂಭ ಏರ್ಪಡಿಸಿ ಜಾನಪದ ಹಾಡು, ನಾಟಕ, ಆರ್ಕೆಸ್ಟ್ರಾ ಸೇರಿದಂತೆ ದಿನವಿಡಿ ಹಗಲು ರಾತ್ರಿ ೨೪ ಗಂಟೆ ಕಾರ್ಯಕ್ರಮ ಆಯೋಜಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಶಂಕರ ಶ್ರೀ ಪ್ರಶಸ್ತಿ ನೀಡಿ ಗೌರವಿಸುತ್ತಿರೋದು ಅಭಿನಂದನೀಯ ಸಂಗತಿ.