ಮೋದಿ ಪ್ರೇರಣೆ: ಬಾಗಲಕೋಟೆ ಮುಸ್ಲಿಂ ಸಹೋದರರ ಟೀ ಅಂಗಡಿ!
ಬಾಗಲಕೋಟೆಯಲ್ಲಿ ಚಾಯ್ ವಾಲಾ ಆದ ಡಿಪ್ಲೋಮಾ ಎಂಜಿನಿಯರ್| ನಗರದ ಮುಸ್ಲಿಂ ಯುವಕರಿಗೆ ಪ್ರೇರಣೆಯಾದ ಪ್ರಧಾನಿ ಮೋದಿ| ಇಂಜಿನಿಯರ್ ಮುಗಿಸಿದ ಮುಸ್ಲಿಂ ಹುಡುಗರ ಸ್ಪೇಷಲ್ ಟೀ ಅಂಗಡಿ| ಅಮೀರ್ ಸೋಹೆಲ್ ಮತ್ತು ಮಹ್ಮದ ಯಾಸಿನ್ ಯುವಕರಿಂದ ಸ್ಪೇಷಲ್ ಟೀ ಅಂಗಡಿ| ಪುಣೆ ಮಾದರಿಯ ಘಮಿಘಮಿಸೋ ಚಹಾಕ್ಕೆ ನಿತ್ಯ ಮುಗಿಬೀಳುವ ಜನ|
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ನ.04): ಬದುಕಿನಲ್ಲಿ ಏನಾದರೂ ಸಾಧಿಸಬೇಕೆಂಬ ಡಿಪ್ಲೋಮಾ ಇಂಜಿನಿಯರ್ ಕಲಿತ ಮುಸ್ಲಿಂ ಹುಡುಗರಿಗೆ ಪ್ರೇರಣೆಯಾಗಿದ್ದು ಮಾತ್ರ ದೇಶದ ಪ್ರಧಾನಿ ನರೇಂದ್ರ ಮೋದಿ. ಹೌದು, ಚಹಾ ಮಾರಿದ ವ್ಯಕ್ತಿ ದೇಶದ ಪ್ರಧಾನಿಯಾದಾಗ ನಾವ್ಯಾಕೆ ಸ್ಪೇಷಲ್ ಟೀ ಅಂಗಡಿ ತೆರೆಯಬಾರದು ಎಂಬ ಕಲ್ಪನೆಯೊಂದಿಗೆ ಇಬ್ಬರು ಸಹೋದರರು ಇದೀಗ ಚಹಾ ಅಂಗಡಿ ಇಟ್ಟು ಮಾದರಿಯಾಗಿದ್ದಾರೆ.
ಮುಳುಗಡೆ ನಗರಿ ಬಾಗಲಕೋಟೆಯ ವಲ್ಲಭಾಯ್ ವೃತ್ತದಲ್ಲಿ ಕಲಾದಗಿ ಗ್ರಾಮದವರಾದ ಅಮೀರ್ ಸೋಹಿಲ್ ಮತ್ತು ಮಹ್ಮದ ಯಾಸೀನ್ ಇಬ್ಬರು ಯುವಕರು ಚಹಾದ ಅಂಗಡಿ ಇಟ್ಟಿದ್ದಾರೆ.
"
ಡಿಪ್ಲೋಮಾ ಪದವಿ ಓದಿದ ಈ ಯುವಕರು ಕೆಲಸಕ್ಕಾಗಿ ಹಲವೆಡೆ ಅಲೆದು ಇಈಗ ಸ್ವಂತ ಚಹಾ ಅಂಗಡಿ ಇಟ್ಟಿದ್ದಾರೆ. ಚಹಾ ಮಾರಿದ ವ್ಯಕ್ತಿ ದೇಶದ ಪ್ರಧಾನಿಯಾಗಿರುವಾಗ ನಾವ್ಯಾಕೆ ಸ್ಪೇಷಲ್ ಟೀ ಅಂಗಡಿ ತೆರೆದು ಮಾರಾಟ ಮಾಡಬಾರದು ಅಂತ ಯೋಚಿಸಿ ಇಬ್ಬರು ಡಿಪ್ಲೋಮಾ ಇಂಜಿನಿಯರ್ ಕಲಿತ ಸಹೋದರರೇ ಕೂಡಿ ಅಂಗಡಿ ತೆರೆದಿದ್ದಾರೆ.
ಅಲ್ಲದೇ ತಮ್ಮ ಚಹಾದ ಅಂಗಡಿಗೆ 'ಇಂಜಿನಿಯರ್ ಬನ್ ಗಯಾ ಚಾಯ್ ವಾಲಾ ಅಂತ ಹೆಸರಿಟ್ಟು ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಇದಕ್ಕೆಲ್ಲಾ ಪ್ರಧಾನಿ ಮೋದಿಯವರೇ ಪ್ರೇರಣೆ ಅಂತಾರೆ ಇಂಜಿನಿಯರ್ ಅಮಿರ್ ಸೋಹೆಲ್.
ಇನ್ನು ಇವರು ತಯಾರಿಸೋದು ಪುಣೆ ಮಾದರಿಯ ಮಲಾಯ್ ಟೀ. ಅಂದರೆ ಹಾಲಿನಲ್ಲೇ ಕೆನೆಯ ತೆನೆ ಪದರಿನಲ್ಲೇ ಚಹಾ ತಯಾರಿಸುವುದು ವಿಶೇಷ. ಪ್ರತಿ ಕಪ್‌ಗೆ 10 ರೂ. ದರದಂತೆ ಮಾರಾಟ ಮಾಡುವ ಇವರಿಗೆ ಪ್ರತಿನಿತ್ಯ 1,500ರಿಂದ 2 ಸಾವಿರ ರೂ.ವರೆಗೆ ಲಾಭ ಬರುತ್ತಿದೆ.
"
ಹೀಗಾಗಿ ಡಿಪ್ಲೋಮಾ ಕಲಿತು ಕಂಪನಿಯಲ್ಲಿ ಬೇರೆಯವರ ಕೈಯಲ್ಲಿ ದುಡಿಯುವುದರ ಬದಲಾಗಿ ಸ್ವಂತ ಬಲದಿಂದ ಸ್ಪೇಷಲ್ ಟೀ ಅಂಗಡಿ ತೆರೆದು ಹೆಚ್ಚಿನ ಉತ್ತಮ ಲಾಭಾಂಶ ಗಳಿಸುತ್ತಿದ್ದಾರೆ ಈ ಸಹೋದರರು.
ಒಟ್ಟಿನಲ್ಲಿ ಡಿಪ್ಲೋಮಾ ಇಂಜಿನಿಯರ್ ಕಲಿತು ಕಂಪನಿ ಕೆಲಸಕ್ಕಾಗಿ ಕ್ಯೂ ನಿಲ್ಲೋ ಜನರಿರೋ ಇಂದಿನ ಕಾಲದಲ್ಲಿ, ಬಾಗಲಕೋಟೆ ಯುವಕರು ಮಾತ್ರ ದೇಶದ ಪ್ರಧಾನಿಯನ್ನೇ ಆದರ್ಶವನ್ನಾಗಿರಿಸಿಕೊಂಡು ಸ್ಪೇಷಲ್ ಚಹಾ ಅಂಗಡಿ ತೆರೆದು ಇದೀಗ ಇತರರಿಗೆ ಮಾದರಿಯಾಗಿದ್ದಾರೆ.