ಕೆರೂರ: ಇವೇನು ರಸ್ತೆಗಳಾ ಅಥವಾ ತಿಪ್ಪೆಗುಂಡಿಗಳಾ?
ಎಲ್ಲೆಂದರಲ್ಲಿ ಕಸ ಕಡ್ಡಿ ಹರಡಿರುವುದು | ಕೊಳಚೆ ಪ್ರದೇಶವಾಗಿ ಪರಿಣಮಿಸಿರುವ ಪಟ್ಟಣ| ಪಟ್ಟಣ ಪಂಚಾಯತ ಅಧಿಕಾರಿಗಳ ನಿರ್ಲಕ್ಷ್ಯ| ಬಹಳಷ್ಟು ಪುರಸಭೆ ಸದಸ್ಯರು, ನೌಕರರು ಇದೇ ಮಾರ್ಗವಾಗಿ ಅವರೂ ಹೋಗುತ್ತಾರೆ. ಆದರೂ ಸ್ವಚ್ಛತೆಗೆ ಪ್ರಯತ್ನಿಸಿಲ್ಲ| ತಿಪ್ಪೆಗುಂಡಿಯಾಗಿರುವ ಕೆರೂರ ಬೀದಿಗಳು|
ಭೀಮಸೇನ ದೇಸಾಯಿ
ಕೆರೂರ(ನ.14): ಸ್ವಚ್ಛ ಭಾರತ ಅಭಿಯಾನ ಪ್ರಾರಂಭಿಸಿದರೂ ಅಷ್ಟೇ. ಅರೋಗ್ಯ ರಕ್ಷಣೆಗೆ ಗ್ರಾಮ, ನಗರ ಮತ್ತು ಪಟ್ಟಣಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಜಾಗೃತಿ, ಅಭಿಯಾನ ಮೂಡಿಸಿದರೂ ಅಷ್ಟೇ. ಕೆರೂರು ಪಟ್ಟಣದ ಬಹುತೇಕ ರಸ್ತೆಗಳು ತಿಪ್ಪೆಗುಂಡಿಗಳಂತಾಗಿವೆ. ಸ್ಥಳೀಯ ಆಡಳಿತಕ್ಕೆ ಗೊತ್ತಿದ್ದರೂ ಸ್ವಚ್ಚತಾ ಕಾರ್ಯಕ್ಕೆ ಇನ್ನೂ ಕೂಡಿಬಂದಿಲ್ಲ ಮುಹೂರ್ತ. ಪಟ್ಟಣ ಪಂಚಾಯತ ನಿರ್ಲಕ್ಷ್ಯ ಧೋರಣೆ ಪಟ್ಟಣದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ಕಿಲ್ಲಾ, ಹೊಸಪೇಟಿ, ಹಳಪೇಟಿ ಮತ್ತಿತರ ಕಡೆಯ ಬೀದಿಗಳು ಕಸ ಕಡ್ಡಿಗಳಿಂದ ಕಂಗೊಳಿಸುತ್ತಿವೆ. ದಿನ ಬಿಟ್ಟು ದಿನ ಸುರಿದ ಮಳೆಯಿಂದ ಅಲ್ಲಲ್ಲಿ ಕೊಳಚೆ ನೀರು ತುಂಬಿರುವ ಕಳಪೆ ರಸ್ತೆಗಳ ಕಿರು ಹೊಂಡಗಳು ಕ್ರಿಮಿಕೀಟಕಗಳ ತಾಣವಾಗಿವೆ. ಸಾಂಕ್ರಾಮಿಕ ರೋಗ ಭೀತಿಯು ನಾಗರಿಕರನ್ನು ಕಾಡುತ್ತಿದೆ. ನಿತ್ಯವೂ ಜನತೆ ಪಟ್ಟಣ ಪಂಚಾಯಿತಿ ಶಪಿಸುತ್ತಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ತಗ್ಗು-ದಿನ್ನಿಗಳಿಂದ ಕೂಡಿದ ರಸ್ತೆಗಳು ತಿಪ್ಪೆಗುಂಡಿಗಳಂತೆ ಕಾಣುತ್ತಿದ್ದು ಪಟ್ಟಣ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಾಗಿದೆ. ಪಟ್ಟಣದ ಕಿಲ್ಲಾ ಪೇಟಿಯ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ತೆರಳುವ ರಸ್ತೆಯು ಹಂದಿ, ಬಿಡಾಡಿ ನಾಯಿ ಗಳು, ಮಲಮೂತ್ರ ವಿಸರ್ಜಿಸುವ ತಾಣವಾಗಿದೆ. ಇದೇ ಮಾರ್ಗವಾಗಿ ಶ್ರೀಮಠಕ್ಕೆ ಹೋಗುವ ಭಕ್ತರು ಸ್ಥಳೀಯ ಆಡಳಿತಕ್ಕೆ ಹಿಡಿಶಾಪ ಹಾಕುತ್ತ ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಮುಖ್ಯಸಂಗತಿ ಅಂದರೆ ಬಹಳಷ್ಟು ಪುರಸಭೆ ಸದಸ್ಯರು, ನೌಕರರು ಇದೇ ಮಾರ್ಗವಾಗಿ ಅವರೂ ಹೋಗುತ್ತಾರೆ. ಆದರೂ ಸ್ವಚ್ಛತೆಗೆ ಪ್ರಯತ್ನಿಸಿಲ್ಲ. ಹೊಸಪೇಟಿ ಬಡಾವಣೆಯ ವಾ.ನಂ 12 ರ ಲಕ್ಷೀತ್ಮ ದೇವಸ್ಥಾನಕ್ಕೆ ಹೋಗುವ ರಸ್ತೆಯು ಕಸ-ಕಡ್ಡಿ ಧೂಳಿನಿಂದ ತುಂಬಿ ಮಕ್ಕಳು, ಮಹಿಳೆಯರು ವಯೋವೃದ್ಧರ ಪಟ್ಟಣಪಂಚಾಯಿತಿ ಶಪಿಸುತ್ತಲೇ ನಿತ್ಯವೂ ಸಂಚರಿಸುತ್ತಾರೆ.
ಪ್ರಧಾನಿ ಮೋದಿಯವರ ಆಶಯಕ್ಕೆ ತಣ್ಣೀರು
ಇಲ್ಲಿಯ ನಾಡ ಕಚೇರಿ ಹಾಗೂ ಪಪಂ ಆಡಳಿತದ ವಾಣಿಜ್ಯ ಮಳಿಗೆಗಳ ಮಧ್ಯದ ರಸ್ತೆಯು ದುರ್ವಾಸನೆ ಬೀರುತ್ತಿದ್ದು ನೋಡಲು ಹಿಂಸೆ ಅನಿಸುತ್ತಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಾಂಧೀಜಿಯವರ ಸ್ವಚ್ಛ ಭಾರತದ ಕನಸನ್ನು ನನಸಾಗಿಸಲು ಹೊರಟಿರುವ ಪ್ರಧಾನಿ ಮೋದಿಯವರ ಆಶಯಕ್ಕೆ ತಣ್ಣೀರೆರಚಿದಂ ತಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ- ಸಂಸ್ಥೆಗಳ ಮುಖಂಡರು. ನೆನಪಾದಾಗೊಮ್ಮೆ ಬೀದಿ ಗಳ ಸ್ವಚ್ಛತೆಗೆ ಮುಂದಾಗಿ ಕೈಯಲ್ಲಿ ಪೊರಕೆ, ಬುಟ್ಟಿಗ ಳನ್ನು ಹಿಡಿದುಕೊಂಡು ದೊಡ್ಡ ಮಟ್ಟದ ಪ್ರದರ್ಶನ ಮಾಡುತ್ತಿರುವುದು ಹಾಸ್ಯಾಸ್ಪದಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯರ ಕ್ಷೇತ್ರದಲ್ಲಿನ ಪಟ್ಟಣವಿದು:
ಪಟ್ಟಣದ ಸ್ವಚ್ಚತೆಗೆ ಪಪಂ ಆಡಳಿತಕ್ಕೆ ಸಾಕಷ್ಟು ಅನುದಾನ ಬರುತ್ತಿದ್ದರೂ ನಿರ್ಲಕ್ಷ್ಯವೇಕೆ ಎಂಬುದು ತಿಳಿಯುತ್ತಿಲ್ಲ. ಮಾಜಿ ಸಿಎಂ ಹಾಗೂ ಬಾದಾಮಿ ಶಾಸಕ ಸಿದ್ದರಾಮಯ್ಯ ಸ್ವಕ್ಷೇತ್ರದ ಸ್ವಚ್ಛತೆಗೆ ಹಿಂದೇಟು ಹಾಕುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮಕ್ಕೆ ಮುಂದಾಗುವರೇ ಕಾದು ನೋಡಬೇಕಿದೆ.